ಮನೆ ರಾಜಕೀಯ ಹರಿಹರ : ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಂದ ಒಗ್ಗಟ್ಟಿನ ಪ್ರಮಾಣ ಮಾಡಿಸಿದ ಸಿಎಂ ಬೊಮ್ಮಾಯಿ

ಹರಿಹರ : ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಂದ ಒಗ್ಗಟ್ಟಿನ ಪ್ರಮಾಣ ಮಾಡಿಸಿದ ಸಿಎಂ ಬೊಮ್ಮಾಯಿ

0

ಹರಿಹರ: ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಿಜೆಪಿಯ ‘ಜನ ಸಂಕಲ್ಪ ಯಾತ್ರೆ’ಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹರಿಹರ ವಿಧಾನಸಭಾ ಕ್ಷೇತ್ರದ ಮೂವರು ಆಕಾಂಕ್ಷಿಗಳಿಂದ ಒಗ್ಗಟ್ಟು ಪ್ರದರ್ಶಿಸುವಂತೆ ಪ್ರಮಾಣ ಮಾಡಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವೇದಿಕೆಗೆ ಆಗಮಿಸುತ್ತಿದ್ದಂತೆ ಹರಿಹರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಾದ ಮಾಜಿ ಶಾಸಕ ಬಿ.ಪಿ. ಹರೀಶ್‌, ಮುಖಂಡರಾದ ಚಂದ್ರಶೇಖರ್‌ ಪೂಜಾರ್‌ ಹಾಗೂ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವಿರೇಶ್‌ ಹನಗವಾಡಿ ಅವರ ಬೆಂಬಲಿಗರು ಫೋಟೊ ಪ್ರದರ್ಶಿಸಿ ಘೋಷಣೆಗಳನ್ನು ಕೂಗಿದರು.

ಇದರಿಂದ ಸಿಟ್ಟಿಗೆದ್ದ ಮುಖ್ಯಮಂತ್ರಿ ಮೈಕ್‌ ಬಳಿ ಬಂದು, ಹರಿಹರದಲ್ಲಿ ಈ ಬಾರಿ ನೂರಕ್ಕೆ ನೂರು ಬಿಜೆಪಿಯೇ ಗೆಲ್ಲುತ್ತದೆ. ಅಭಿಮಾನಿಗಳು ಹೀಗೆ ಫೋಟೊ ಹಿಡಿಯುವುದು ಕೆಲಸಕ್ಕೆ ಬರುವುದಿಲ್ಲ. ಒಗ್ಗಟ್ಟು ಪ್ರದರ್ಶಿಸಬೇಕು. ಫೋಟೊ ಕೆಳಗೆ ಇಡುವಂತೆ ಗದರಿದರು.

ಟಿಕೆಟ್‌ ಆಕಾಂಕ್ಷಿಗಳಾದ ಬಿ.ಪಿ. ಹರೀಶ್‌, ಚಂದ್ರಶೇಖರ್‌ ಪೂಜಾರ್‌ ಹಾಗೂ ವೀರೇಶ ಹನಗವಾಡಿ ಅವರನ್ನು ತಮ್ಮ ಬಳಿಗೆ ಕರೆಸಿಕೊಂಡ ಮುಖ್ಯಮಂತ್ರಿ, ಕೈಯನ್ನು ಮುಂದಕ್ಕೆ ಮಾಡಿಸಿ ಪ್ರಮಾಣ ಮಾಡಿಸಿದರು.

ಬಿಜೆಪಿ ಕಾರ್ಯಕರ್ತರು, ಪದಾಧಿಕಾರಿಗಳಾಗಿರುವ ನಾವು ಪ್ರಾಮಾಣಿಕವಾಗಿ ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡುತ್ತೇವೆ. ಬಿಜೆಪಿಯನ್ನು ದೊಡ್ಡ ಬಹುಮತದಿಂದ ಆರಿಸಿ ತರುತ್ತೇವೆ. ಪಕ್ಷವು ಯಾರನ್ನು ಗುರುತಿಸಿ ಟಿಕೆಟ್‌ ಕೊಡುತ್ತದೆಯೋ ನಾವೆಲ್ಲರೂ ಅವರನ್ನು ಗೆಲ್ಲಿಸಲು ಶ್ರಮಿಸುತ್ತೇವೆ ಎಂದು ಸಂಕಲ್ಪ ಮಾಡಿಸಿದರು.