ಮನೆ ಸುದ್ದಿ ಜಾಲ ಕುಸಿದು ಬಿದ್ದು ಹಾಸನ ಮೂಲದ ಸಾಫ್ಟ್‌ವೇರ್  ಇಂಜಿನಿಯರ್ ಉದ್ಯೋಗಿ  ಶ್ವೇತಾ ಸಾವು : ಆಘಾತದಲ್ಲಿ ಕುಟುಂಬದವರು

ಕುಸಿದು ಬಿದ್ದು ಹಾಸನ ಮೂಲದ ಸಾಫ್ಟ್‌ವೇರ್  ಇಂಜಿನಿಯರ್ ಉದ್ಯೋಗಿ  ಶ್ವೇತಾ ಸಾವು : ಆಘಾತದಲ್ಲಿ ಕುಟುಂಬದವರು

0

ಹಾಸನ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಯುವತಿ ಒಬ್ಬರು ಹಠಾತ್ ಸಾವನ್ನಪ್ಪಿರುವ ಘಟನೆ ಇಂದು (.27 ) ನಡೆದಿದೆ. ಮೆದುಳಿನಲ್ಲಿ ತೀವ್ರ ರಕ್ತಸ್ರಾವವಾಗಿ ಕೋಮಾಗೆ ಜಾರಿದ್ದ 25 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್  ಉದ್ಯೋಗದ ಯುವತಿ ಶ್ವೇತಾ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಬಂಡಿಲಕ್ಕನಕೊಪ್ಪಲು ಗ್ರಾಮದಲ್ಲಿ ನಡೆದಿದ್ದೆ, ಇಡೀ ಗ್ರಾಮದಲ್ಲಿ ಹಾಗೂ ಕುಟುಂಬಸ್ಥರಲ್ಲಿ ಸೂತಕ ಛಾಯೆ ಆವರಿಸಿದೆ. ಗಂಗಾಧರ್ ಮತ್ತು ಸರೋಜ ದಂಪತಿಯ ಪುತ್ರಿಯಾದ ಶ್ವೇತಾ(25), ಹಾಸನದ ಮ್ಯಾಗ್ನಾ ಸಾಫ್ಟ್ ಕಂಪನಿಯಲ್ಲಿ ಕಳೆದ ಮೂರು ವರ್ಷಗಳಿಂದ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಕಳೆದ ಶುಕ್ರವಾರ  (ಏಪ್ರಿಲ್ 25) ರ ಸಂಜೆ ಮನೆಯಲ್ಲಿ ಶ್ವೇತಾ ಹಠಾತ್ತಾಗಿ ಕುಸಿದು ಬಿದ್ದಿದ್ದರು. ತಕ್ಷಣವೇ ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮುಂದಾಗಿದ್ದಾರೆ. ಆದರೆ, ಆಸ್ಪತ್ರೆಗೆ ತಲುಪುವ ವೇಳೆಗೆ ಶ್ವೇತಾ ಕೋಮಾಗೆ ಜಾರಿದ್ದರು. ಆಕೆಯನ್ನು ಪರೀಕ್ಷಿಸಿದ ವೈದ್ಯರು ಮೆದುಳಿನಲ್ಲಿ ತೀವ್ರ ರಕ್ತಸ್ರಾವವಾಗಿರುವ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಚಿಕಿತ್ಸೆ ಮಾಡುತ್ತಿರುವಾಗಲೇ ಮೆದುಳು ಸಂಪೂರ್ಣ ನಿಷ್ಕ್ರಿಯಗೊಂಡು ಶ್ವೇತಾ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಪೋಷಕರು ತಮ್ಮ ಮಗಳ ಸಾವಿನ ಆಘಾತದ ನಡುವೆಯೂ ಶ್ವೇತಾ ಅವರ ಅಂಗಾಂಗ ದಾನ ಮಾಡಲು ಮುಂದಾಗಿದ್ದರು. ಈ ಮೂಲಕ ಮತ್ತೊಬ್ಬರ ಬಾಳಿಗೆ ಬೆಳಕಾಗಲು ದಾರಿಮಾಡಿಕೊಡಲು ನಿರ್ಧಾರ ಮಾಡಿದ್ದರು. ಆದರೆ ಶ್ವೇತಾ ದೇಹದ ಆರೋಗ್ಯದ ಸ್ಥಿತಿಗತಿಯಿಂದಾಗಿ ಅಂಗಾಂಗ ದಾನ ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ. ಇಂದು ಬಂಡಿಲಕ್ಕನಕೊಪ್ಪಲು ಗ್ರಾಮದಲ್ಲಿ ಶ್ವೇತಾ ಅಂತ್ಯಕ್ರಿಯೆ ನಡೆಯಲಿದೆ. 25 ವರ್ಷ ವಯಸ್ಸಿನ ಮಗಳ ಹಠಾತ್ ನಿಧನದಿಂದ ಕುಟುಂಬದವರು ತೀವ್ರ ಆಘಾತಕ್ಕೀಡಾಗಿದ್ದಾರೆ.