ಉಡುಪಿ (Udupi)- ಸರ್ವೀಸ್ ಬಂದೂಕಿನಿಂದ ಗುಂಡು ಸಿಡಿದು ಜಿಲ್ಲಾ ಸಶಸ್ತ್ರ ಪಡೆಯ ಹೆಡ್ ಕಾನ್ ಸ್ಟೇಬಲ್ ಮೃತಪಟ್ಟಿರುವ ಘಟನೆ ನಡೆದಿದೆ.
ರಾಜೇಶ್ ಕುಂದರ್ ಮೃತಪಟ್ಟ ಹೆಡ್ ಕಾನ್ ಸ್ಟೇಬಲ್. ಆದಿ ಉಡುಪಿಯ ದಿ.ಅಮ್ಮುಂಜೆ ನಾಗೇಶ್ ನಾಯಕ ಸ್ಮಾರಕ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮೌಲ್ಯಮಾಪನ ಕೇಂದ್ರಕ್ಕೆ ರಾಜೇಶ್ ಅವರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಕರ್ತವ್ಯ ನಿರತರಾಗಿದ್ದ ವೇಳೆಯೇ ಬಂದೂಕಿನಿಂದ ಸಿಡಿದ ಗುಂಡು ಅವರ ಪ್ರಾಣವನ್ನು ಬಲಿ ಪಡೆದಿದೆ.
ಪ್ರಕರಣದ ತನಿಖೆ ನಡೆಯುತ್ತಿದ್ದು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಎಫ್ಎಸ್ಎಲ್ ಹಾಗೂ ಫೊರೆನ್ಸಿಕ್ ತಜ್ಞರ ತಂಡ ಪರಿಶೀಲನೆ ನಡೆಸಿದ್ದು, ವರದಿ ಬಂದ ಬಳಿಕ ಸಾವಿಗೆ ನಿಖರವಾದ ಕಾರಣ ತಿಳಿದುಬರಲಿದೆ ಎಂದು ಎಸ್ಪಿ ಎನ್.ವಿಷ್ಣುವರ್ಧನ್ ತಿಳಿಸಿದ್ದಾರೆ.
ಈಚೆಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿ ಮಾರಾಮಾರಿ ಘಟನೆಯಲ್ಲಿ ರಾಜೇಶ್ ಕುಂದರ್ ಅವರನ್ನು ಅಮಾನತು ಮಾಡಲಾಗಿತ್ತು. ಎರಡು ದಿನಗಳ ಹಿಂದಷ್ಟೆ ಅವರು ಕರ್ತವ್ಯಕ್ಕೆ ಹಾಜರಾಗಿದ್ದರು.