ಮನೆ ಆರೋಗ್ಯ ಬೇಸಿಗೆ ಕಾಲದಲ್ಲಿ ಮಧುಮೇಹಿಗಳ ಆರೋಗ್ಯ

ಬೇಸಿಗೆ ಕಾಲದಲ್ಲಿ ಮಧುಮೇಹಿಗಳ ಆರೋಗ್ಯ

0

ಬೇಸಿಗೆ ಕಾಲದ ವಾತಾವರಣವು ಹೈರಾಣಾಗಿಸಿಬಿಡುತ್ತದೆ. ವಿಪರೀತ ಶಾಖ ಸಹಿಸಿಕೊಳ್ಳುವುದು ಯಾರಿಗೇ ಆಗಲಿ ಕಷ್ಟ ಎಂದೇ ಹೇಳಬಹುದು. ಸಾಮಾನ್ಯವಾಗಿ ನಿಮ್ಮ ದೇಹವು ಶಾಖಕ್ಕೆ ಒಡ್ಡಿಕೊಂಡಾಗ ಬೆವರಿನ ಮೂಲಕ ಹೊರಹಾಕುತ್ತದೆ. ಇದನ್ನು ನಿರ್ಜಲೀಕರಣ ಎಂದು ಕರೆಯಲಾಗುತ್ತದೆ.
ನಿರ್ಜಲೀಕರಣದ ಪರಿಣಾಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಅಧಿಕ ರಕ್ತದ ಸಕ್ಕರೆಯು ಹೆಚ್ಚಾಗಿ ಮೂತ್ರ ವಿಸರ್ಜಿಸುವಂತೆ ಮಾಡುತ್ತದೆ.
ವಾಸ್ತವವಾಗಿ ಮಧುಮೇಹಿಗಳಿಗೆ ಬೇಸಿಗೆ ಉತ್ತಮವಾದ ಋತುಮಾನವಲ್ಲ. ಮಧುಮೇಹದ ಮುಖ್ಯ ತೊಡಕುಗಳಲ್ಲಿ ಒಂದಾದ ರಕ್ತನಾಳಗಳ ಸಂಕೋಚನ ಮತ್ತು ನರಗಳಿಗೆ ಸಂಬಂಧಿಸಿದ ಸಮಸ್ಯೆಗಳು ಈ ಸಮಯದಲ್ಲಿ ಪರಿಣಾಮ ಬೀರಬಹುದು. ಹಾಗಾಗಿ ಈ ಸಮಯದಲ್ಲಿ ಜಾಗರೂಕತೆ ಮತ್ತು ಆರೋಗ್ಯದ ಬಗ್ಗೆ ಕಾಳಜಿ ಇರಬೇಕಾದುದು ಅತಿ ಮುಖ್ಯವಾದುದು.
​ವ್ಯಾಯಾಮ ಮಾಡಿ

ಸರ್ವ ರೋಗಕ್ಕೂ ಮದ್ದು ವ್ಯಾಯಾಮ. ಹಾಗಾಗಿ ಪ್ರತಿನಿತ್ಯ ವ್ಯಾಯಾಮ ಮಾಡುವುದನ್ನು ಮರೆಯದಿರಿ. ಇದು ನಿಮ್ಮ ರಕ್ತದಲ್ಲಿರುವ ಸಕ್ಕರೆಯ ಅಂಶ ಮತ್ತು ರಕ್ತದೊತ್ತಡವನ್ನು ಕಂಟ್ರೋಲ್‌ ಮಾಡಲು ಸಹಾಯ ಮಾಡುತ್ತದೆ. ವ್ಯಾಯಾಮ ಮಾಡುವುದರಿಂದ ಸ್ನಾಯುಗಳಿಗೆ ಶಕ್ತಿ ದೊರೆಯುವ ಮೂಲಕ ರಕ್ತ ಪರಿಚಲನೆಯನ್ನು ಹೆಚ್ಚಿಸಿಕೊಳ್ಳಬಹುದು.

ಮುಂಜಾನೆ ಅಥವಾ ಸಂಜೆಯ ಸಮಯದಲ್ಲಿ ಜಾಗಿಂಗ್‌, ವಾಕಿಂಗ್‌, ಸುಲಭವಾದ ಸ್ಟ್ರೆಚ್ಚಿಂಗ್‌ಗಳನ್ನು ಮಾಡಿ. ಉದ್ಯಾನವನದ ತಂಪಾದ ಗಾಳಿಯನ್ನು ಆಸ್ವಾದಿಸಿ. ಹೀಗೆ ಮಾಡುವುದರಿಂದ ನಿಮ್ಮ ದೇಹಕ್ಕೆ ಬೇಕಾದ ನವ ಚೈತನ್ಯವನ್ನು ಪಡೆದು, ಗ್ಲೂಕೋಸ್‌ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಗುತ್ತದೆ.

ಮಳೆಗಾಲ, ಚಳಿಗಾಲಕ್ಕೆ ಹೋಲಿಕೆ ಮಾಡಿದರೆ ಬೇಸಿಗೆ ಕಾಲ ವ್ಯಾಯಮಗಳಿಗೆ ಪ್ರಶಸ್ತವಾದ ಕಾಲಾವಧಿ ಎಂದೇ ಹೇಳಬಹುದು.

ಸಮತೋಲಿತವಾದ ಆಹಾರ ಮತ್ತು ನೀರು

ಬೇಸಿಗೆಯಲ್ಲಿ ದೇಹವು ಯಥೇಚ್ಚವಾದ ನೀರನ್ನು ಬೇಡುತ್ತದೆ. ಹಾಗಾಗಿ ಈ ಸಮಯದಲ್ಲಿ ನೀರನ್ನು ಹೆಚ್ಚಾಗಿ ಕುಡಿಯಿರಿ. ವ್ಯಾಯಮ ಅಥವಾ ನಡಿಗೆಯಿಂದ ದಣಿದ ದೇಹಕ್ಕೆ ಹೈಡ್ರೇಟ್‌ ಮಾಡುವುದು ಬಹಳ ಮುಖ್ಯ. ನಿರ್ಜಲೀಕರಣಗೊಳ್ಳುವುದನ್ನು ಆದಷ್ಟು ತಪ್ಪಿಸಿ.

ಹಾಗೆಯೇ ಸಮತೋಲಿತವಾದ ಆಹಾರ ಸೇವನೆ ಮಾಡುವುದನ್ನು ಕೂಡ ಮಧುಮೇಹ ಹೊಂದಿರುವವರು ಪಾಲಿಸಲೇಬೇಕು. ಪೌಷ್ಟಿಕಾಂಶಭರಿತ ಆಹಾರಗಳು, ತಾಜಾ ಹಣ್ಣುಗಳು, ತರಕಾರಿ, ಸೊಪ್ಪು, ಬೇಳೆಗಳನ್ನು ಸೇವನೆ ಮಾಡಿ. ಹೆಚ್ಚಿನ ನೀರಿನಂಶವಿರುವ ಹಣ್ಣು, ತರಕಾರಿಗಳನ್ನು ಸೇವನೆ ಮಾಡುವುದು ಬಹಳ ಒಳ್ಳೆಯದು.

ಶುಗರ್ಆಗಾಗ್ಗೆ ಪರೀಕ್ಷಿಸಿಕೊಳ್ಳಿ

ಮಧುಮೇಹ ಹೊಂದಿರುವವರು ಕನಿಷ್ಟ ತಿಂಗಳಿಗೊಮ್ಮೆಯಾದರೂ ಶುಗರ್‌ ಚೆಕ್‌ ಮಾಡಿಸಿಕೊಳ್ಳುವುದು ಒಳ್ಳೆಯದು. ಇದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನೀವು ತಿಳಿದುಕೊಂಡು ಮತ್ತಷ್ಟು ಆಹಾರ ಮತ್ತು ವ್ಯಾಯಾಮದ ಮೇಲೆ ಕೇಂದ್ರೀಕರಿಸಬಹುದು.

ಬೇಸಿಗೆ ಕಾಲದ ತಾಪಮಾನವು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಏರಿಳಿತಕ್ಕೆ ಕಾರಣವಾಗಬಹುದು. ಈ ರೀತಿ ತಿಂಗಳಿಗೊಮ್ಮೆ ಪರೀಕ್ಷೆಗೆ ಒಳಪಡಿಸಿಕೊಂಡಾಗ ತಕ್ಷಣದ ಕ್ರಮವನ್ನು ತೆಗೆದುಕೊಳ್ಳಬಹುದು. ಒಟ್ಟಾರೆ ಏನು ತಿನ್ನುತ್ತಿದ್ದೇವೆ? ಎಷ್ಟು ತಿನ್ನುತ್ತಿದ್ದೇವೆ? ಎಂಬುದರ ಮೇಲೆ ಗಮನ ಇಡುವುದು ಒಳ್ಳೆಯದು.

ಬಿಸಿಲಿನಲ್ಲಿ ಅಡ್ಡಾಡಬೇಡಿ

ತೀವ್ರವಾದ ಬಿಸಿಲಿನಲ್ಲಿ ಕೇವಲ ಮಧುಮೇಹ ಹೊಂದಿರುವವರು ಮಾತ್ರವಲ್ಲ ಯಾರೇ ಆಗಲಿ ಅನಾವಶ್ಯಕವಾಗಿ ಅಡ್ಡಾಡಬೇಡಿ. ಹಾಗೆಯೇ ಯಾವುದೇ ಕಾರಣಕ್ಕೂ ನಿಮ್ಮ ಔಷಧಿಗಳನ್ನು ಸ್ಕಿಪ್‌ ಮಾಡಬೇಡಿ. ಸಮಯಕ್ಕೆ ಸರಿಯಾದ ಆಹಾರ, ಔಷಧಿ, ನಿದ್ರೆಗಳು ಇರಲಿ. ತಾಜಾ ಹಣ್ಣಿನ ಜ್ಯೂಸ್‌ಗಳನ್ನು ಸೇವನೆ ಮಾಡುವ ಬದಲು ಹಣ್ಣುಗಳನ್ನು ಮಾತ್ರ ಸೇವನೆ ಮಾಡಿ. ಇದರಿಂದ ಮಧುಮೇಹವನ್ನು ನಿಯಂತ್ರಿಸಿಕೊಳ್ಳಬಹುದು.