ಮನೆ ಸುದ್ದಿ ಜಾಲ ಸಿರಿ ಧಾನ್ಯಗಳ ಬಳಕೆಯಿಂದ ಆರೋಗ್ಯ ವೃದ್ಧಿ: ಬಿ.ಸಿ.ಪಾಟೀಲ್

ಸಿರಿ ಧಾನ್ಯಗಳ ಬಳಕೆಯಿಂದ ಆರೋಗ್ಯ ವೃದ್ಧಿ: ಬಿ.ಸಿ.ಪಾಟೀಲ್

0

ಮೈಸೂರು(Mysuru): ಸಿರಿಧಾನ್ಯಗಳನ್ನು ಆಹಾರದಲ್ಲಿ ಹೆಚ್ಚಾಗಿ ಬಳಸುವುದರಿಂದ ಮಾನವನ ಆರೋಗ್ಯ ವೃದ್ದಿಯಾಗುತ್ತದೆ. ಬಿ ಪಿ, ಸಕ್ಕರೆ ಕಾಯಿಲೆ ಮುಂತಾದ ಸಮಸ್ಯೆಗಳು ಸಿರಿಧಾನ್ಯಗಳ ಬಳಕೆಯಿಂದ ನಿವಾರಣೆಯಾಗುತ್ತವೆ ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಅವರು ತಿಳಿಸಿದರು.

ನಗರದ ವಸ್ತು ಪ್ರದರ್ಶನ ಆವರಣದಲ್ಲಿ ಏರ್ಪಡಿಸಿದ್ದ ಸಿರಿಧಾನ್ಯಗಳ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಿರಿಧಾನ್ಯಗಳು ಒಂದು ಕಾಲದಲ್ಲಿ ಬಡವರ ಆಹಾರವಾಗಿತ್ತು ಆದರೆ ಇಂದು ಶ್ರೀಮಂತರ ಆಹಾರವಾಗಿದೆ. ಸಿರಿಧಾನ್ಯಗಳಿಗೆ ಉತ್ತಮ ಬೆಲೆ ಇದೆ. ಸಿರಿಧಾನ್ಯಗಳನ್ನು ಬೆಳೆಯುವ ರೈತರಿಗೆ ಸರ್ಕಾರದಿಂದ ಪ್ರತಿ ಹೆಕ್ಟೇರ್‌ಗೆ 10 ಸಾವಿರ ಪ್ರೋತ್ಸಾಹಧನವನ್ನು ನೀಡಲಾಗುತ್ತದೆ. ಹೊರ ದೇಶಗಳಲ್ಲಿಯೂ ಸಿರಿ ಧಾನ್ಯಗಳಿಗೆ ಹೆಚ್ಚಿನ ಬೇಡಿಕೆ ಇದೆ ಎಂದರು.

ವಿಶ್ವ ಸಂಸ್ಥೆಯಲ್ಲಿ 77 ದೇಶಗಳು ಒಪ್ಪಿಗೆ ನೀಡಿ 2023 ನ್ನು ಅಂತರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂದು ಘೋಷಿಸಿದೆ. ಜನವರಿ 20, 21 ಮತ್ತು 23 ರಂದು ಬೆಂಗಳೂರಿನಲ್ಲಿ ಅಂತ ರಾಷ್ಟ್ರೀಯ ಸಿರಿಧಾನ್ಯಗಳ ಮೇಳವನ್ನು ಆಯೋಜಿಸಲಾಗುತ್ತಿದೆ. ಇದಕ್ಕೆ ಪೂರ್ವಭಾವಿಯಾಗಿ ಜಿಲ್ಲೆಗಳಲ್ಲಿ ಸಿರಿಧಾನ್ಯಗಳ ಮೇಳವನ್ನು ಆಯೋಜಿಸಲಾಗಿದೆ ಎಂದರು.

ಕೃಷಿಯು ಲಾಭದಾಯಕವಾದ ಉದ್ಯೋಗವಾಗಿದೆ. ಕೃಷಿಯನ್ನು ಖುಷಿಯಿಂದ ಮಾಡಬೇಕು. ಕೃಷಿಯು ಲಾಭದಾಯಕ ಎಂಬುದನ್ನು ಮನವರಿಕೆ ಮಾಡಲು ಇಂದು ಪ್ರಗತಿಪರ ರೈತರನ್ನು ಕರೆಸಿ ಅವರಿಂದ ಮಾಹಿತಿಯನ್ನು ಕೊಡಿಸಲಾಗುತ್ತಿದೆ. ವ್ಯವಸ್ಥಿತವಾಗಿ ಕೃಷಿ ಮಾಡಿದರೆ ಲಾಭ ಗಳಿಸಬಹುದಾಗಿದೆ ಎಂದು ತಿಳಿಸಿದರು.

ಭಾರತಕ್ಕೆ ಸ್ವಾತಂತ್ರ್ಯ ಬಂದಾಗ 38 ಕೋಟಿ ಜನಸಂಖ್ಯೆ ಇತ್ತು. 1968 ರಲ್ಲಿ ಹಸಿರು ಕ್ರಾಂತಿ ಆಗುವವರೆಗೆ ಆಹಾರ ಕೊರತೆ ಇತ್ತು. ಇಂದು 138 ಕೋಟಿ ಜನಸಂಖ್ಯೆ ಇದ್ದರೂ ಆಹಾರದಲ್ಲಿ ಸ್ವಾವಲಂಬನೆಯನ್ನು ಸಾದಿಸಿದ್ದೇವೆ ಎಂದರು.

ಸಿರಿ ಧಾನ್ಯಗಳ ಮಾಹಿತಿಯನ್ನು ಒಳಗೊಂಡ ಕೈಪಿಡಿಯನ್ನು ಸಚಿವರು ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಉಪ ಮಹಾಪೌರರಾದ ರೂಪ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಮಿರ್ಲೆ ಶ್ರೀನಿವಾಸಗೌಡ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಚಂದ್ರಶೇಖರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಹಿಂದಿನ ಲೇಖನIndia VS New Zealand: ಬೃಹತ್ ಮೊತ್ತ ಪೇರಿಸಿದ ಇಂಡಿಯಾ
ಮುಂದಿನ ಲೇಖನದಲಿತರ ಕಲ್ಯಾಣಕ್ಕೆ ಕೇಂದ್ರ ಸರ್ಕಾರ ಬದ್ಧ: ಸಚಿವ ಎ. ನಾರಾಯಣಸ್ವಾಮಿ