ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಮೇ 4ರ ನಂತರ ಜಿ.ಟಿ.ದಿನೇಶ್ ಕುಮಾರ್ ಅಧಿಕಾರ ವಹಿಸಿಕೊಳ್ಳುವಂತೆ ಹೈಕೋರ್ಟ್ ಆದೇಶಿಸಿದೆ.
ಹಾಲಿ ಆಯುಕ್ತ ಡಾ.ಡಿ.ಬಿ.ನಟೇಶ್ ಅವರ ಎರಡು ವರ್ಷ ಅವಧಿ ಪೂರ್ಣಗೊಂಡ ನಂತರ, ನೂತನ ಆಯುಕ್ತರಾಗಿ ನಿಯೋಜನೆಗೊಂಡಿದ್ದ ಜಿ.ಟಿ.ದಿನೇಶ್ ಕುಮಾರ್ ಮೇ.4ರ ನಂತರ ಮುಡಾ ಆಯುಕ್ತರಾಗಿ ಅಧಿಕಾರ ಸ್ವೀಕರಿಸುವಂತೆ ಹೈಕೊರ್ಟ್ ಆದೇಶಿಸಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ 2020ರ ಮೇ.2ರಂದು ಡಾ.ಡಿ.ಬಿ.ನಟೇಶ್ ಅವರು ಅಧಿಕಾರ ಸ್ವೀಕರಿಸಿದ್ದರು.
ನಂತರ ಎರಡು ಬಾರಿ ವರ್ಗಾವಣೆಗೊಂಡಿದ್ದರೂ, ನಟೇಶ್ ಕೆಎಟಿ ಮೆಟ್ಟಿಲೇರಿ ವರ್ಗಾವಣೆಯನ್ನು ರದ್ದು ಮಾಡಿಸಿಕೊಂಡಿದ್ದರು.
ಈ ನಡುವೆ ಮುಡಾ ನೂತನ ಆಯುಕ್ತರಾಗಿ ಕೆಎಎಸ್ ಅಧಿಕಾರಿ ಜಿ.ಟಿ.ದಿನೇಶ್ ಕುಮಾರ್ ಅವರು ಜನವರಿ18ರಂದು ಅಧಿಕಾರ ಸ್ವೀಕರಿಸಿದ್ದರು. ಆದರೆ ಜನವರಿ 20ರಂದು ಡಾ.ಡಿ.ಬಿ.ನಟೇಶ್ ಅವರ ವರ್ಗಾವಣೆ ರದ್ದಾದ ಹಿನ್ನೆಲೆ ಮುಡಾ ಆಯುಕ್ತರಾಗಿ ನಟೇಶ್ ಮತ್ತೊಮ್ಮೆ ಅಧಿಕಾರ ಸ್ವೀಕರಿಸಿದ್ದರು. ಹೀಗಾಗಿ ಜಿ.ಟಿ.ದಿನೇಶ್‍ಕುಮಾರ್ ಅವರಿಗೆ ಯಾವುದೇ ಹುದ್ದೆ ನೀಡಿರಲಿಲ್ಲ.
ಈ ಹಿನ್ನೆಲೆಯಲ್ಲಿ ಜಿ.ಟಿ.ದಿನೇಶ್ ಕುಮಾರ್ ಕೋರ್ಟ್ ಮೊರೆ ಹೋಗಿದ್ದರು. ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡ ಕೋರ್ಟ್ ವಾದ, ಪ್ರತಿವಾದ ಆಲಿಸಿ ಮಾ.21ರಂದು ಆದೇಶ ನೀಡಿದೆ. ಹಾಲಿ ಆಯುಕ್ತ ಡಾ.ಡಿ.ಬಿ.ನಟೇಶ್ ಅವರು ಮೇ.3ಕ್ಕೆ ಮುಡಾ ಆಯುಕ್ತರಾಗಿ ಎರಡು ವರ್ಷ ಅಧಿಕಾರ ಪೂರ್ಣಗೊಳಿಸಿದ ನಂತರ, ಮೇ.4ರಿಂದ ನೂತನ ಆಯುಕ್ತರಾಗಿ ಜಿ.ಟಿ.ದಿನೇಶ್‍ಕುಮಾರ್ ಅಧಿಕಾರ ಸ್ವೀಕರಿಸುವಂತೆ ಆದೇಶ ಹೊರಡಿಸಿದೆ.