ಬೆಂಗಳೂರು: ಹಿಜಾಬ್- ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಪಕ್ಷದ ಮುಖಂಡರು, ಸಚಿವರು ಯಾವುದೇ ಹೇಳಿಕೆ ನೀಡಬಾರದೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಚಿಸಿದ್ದಾರೆ.
ಸದರಿ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಕರ್ನಾಟಕ ಹೈಕೋರ್ಟ್ ಈ ವಿಚಾರವನ್ನು ತೀರ್ಮಾನಿಸುವವರೆಗೆ ಯಾರೂ ಏನನ್ನೂ ಹೇಳಬಾರದು ಎಂದು ಪಕ್ಷದವರಿಗೆ ತಿಳಿಸಿದ್ದಾರೆ.
ಶಾಲಾ- ಕಾಲೇಜು ಆವರಣದಲ್ಲಿ ಮತ್ತು ರಾಜ್ಯದಲ್ಲಿ ಶಾಂತಿ ಮತ್ತು ನೆಮ್ಮದಿಗೆ ಭಂಗ ತರದಂತೆ ನಾನು ಹೊರಗಿನವರಿಗೆ ಮನವಿ ಮಾಡುತ್ತೇನೆ. ನ್ಯಾಯ ಸಿಗುವಂತೆ ಶಾಂತಿಯುತ ವಾತಾವರಣ ನಿರ್ಮಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಹಿಜಬ್ ಹಾಗೂ ಕೇಸರಿ ಶಾಲು ವಿವಾದದ ಕುರಿತು ರಾಜ್ಯದ ಶಾಂತಿಗೆ ಭಂಗ ತರುವ ಕೆಲಸ ಆಗಬಾರದು. ಶಾಲೆಯಲ್ಲಿ ಎರಡು ಕಡೆಯಿಂದಲೂ ಸಮಸ್ಯೆ ಉಂಟಾಗಿದೆ. ಇದರಿಂದ ಯಾರಿಗೂ ರಾಜಕೀಯ ಲಾಭ ಆಗಲ್ಲ. ಕೋರ್ಟ್ ತೀರ್ಪಿಗಾಗಿ ಕಾಯೋಣ. ಶಾಂತಿ ಕದಡುವ ಹೇಳಿಕೆ ಬೇಡ. ನಮ್ಮಷ್ಟಕ್ಕೆ ನಾವೇ ನಿಯಂತ್ರಣ ಹಾಕಿಕೊಳ್ಳೋಣ. ಮಾತನಾಡುವುದನ್ನು ನಿಲ್ಲಿಸಿ ಎಂದು ತಿಳಿಸಿದರು.
ಶಾಲೆಗಳಲ್ಲಿ ಸಮವಸ್ತ್ರ ಪ್ರಕರಣದ ಅರ್ಜಿಯೂ ತ್ರಿಸದಸ್ಯ ಪೀಠಕ್ಕೆ ವರ್ಗಾವಣೆ ಆಗಿದೆ. ಈ ಬಗ್ಗೆ ಮಧ್ಯಾಹ್ನ ಕೇಸ್ ವಿಚಾರಣೆ ನಡೆಯಲಿದೆ. ಸಂಜೆ ಶಿಕ್ಷಣ ಸಚಿವ ಮತ್ತು ಗೃಹ ಸಚಿವರ ಜೊತೆ ಸಭೆ ನಡೆಸಲಾಗುವುದು. ಶಾಲಾ ಕಾಲೇಜುಗಳಲ್ಲಿ ಮೊದಲಿನ ತರಹ ಸೌಹಾರ್ದ ಶಾಂತಿ ತರುವ ಬಗ್ಗೆ ಕ್ರಮ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಕಾಲೇಜು ರಜೆ ವಿಸ್ತರಣೆ ಬಗ್ಗೆ ಸಂಜೆ ಸಭೆಯಲ್ಲಿ ತೀರ್ಮಾನ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.














