ರಕ್ತದ ಏರೊತ್ತಡವನ್ನು ಕಡಿಮೆ ಮಾಡುವ ಗುಣ :
ರಕ್ತನಾಳದಲ್ಲಿ ಪ್ರವಹಿಸುವ ರಕ್ತ, ಗೊತ್ತಾದ ವೇಗದಲ್ಲಿ ಸಂಚರಿಸುತ್ತದೆ ಮತ್ತು ನಾಳಗಳ ಮೇಲೆ ಒತ್ತಡವನ್ನುಂಟು ಮಾಡುತ್ತದೆ..ಈ ಒತ್ತಡ ಸ್ವಲ್ಪ ಹೆಚ್ಚು ಕಡಿಮೆಯಾದರೂ, ಮಿತಿಯಲ್ಲಿರುತ್ತದೆ. ಈ ಮಿತಿಯನ್ನು ದಾಟಿ ಒತ್ತಡ ಉಂಟಾದರೆ ಈ ಸ್ಥಿತಿಯನ್ನು ರಕ್ತದ ಏರೊತ್ತಡ ಎಂದು ಕರೆಯುತ್ತಾರೆ.
ಆರೋಗ್ಯವಂತ ಸದೃಢ ವ್ಯಕ್ತಿಯಲ್ಲಿ ರಕ್ತದ ಏರೊತ್ತಡ ಒಂದು ಮಿತಿಯಲ್ಲಿರುತ್ತದೆ 140 ಎಂಬುದು ಮಾಪನದಲ್ಲಿ ತೋರುವ ಪಾದರಸದ ಅಂಕುಂಚನ ಒತ್ತಡ ಮತ್ತು 85 ಮಿ.ಮೀ. ಎಂಬುದು ವ್ಯಾಕೋಚನ ಒತ್ತಡ ಮಕ್ಕಳಲ್ಲಿ ರಕ್ತದ ಒತ್ತಡದ ಪ್ರಮಾಣ ಕಡಿಮೆ ಇರುತ್ತದೆ. ವಯಸ್ಸಾದಂತೆ ಒತ್ತಡದ ಪ್ರಮಾಣ ಹೆಚ್ಚಾಗುತ್ತಾ ಹೋಗುತ್ತದೆ. ರಕ್ತದ ಏರೊತ್ತಡದ ಪ್ರಮಾಣ,೧೪೦/೯೦ಮಿ. ಮೀ. ಗಿಂತ ಹೆಚ್ಚಾದರೆ ಅಥವಾ ಮೂರು ಬಾರಿ ಪರೀಕ್ಷಿಸಿದ ನಂತರ ಅಂತಹ ವ್ಯಕ್ತಿಗೆ ರಕ್ತದ ಏರೊತ್ತಡವಿದೆಯೆಂಬ ಅಭಿಪ್ರಾಯಕ್ಕೆ ಬರುತ್ತಾರೆ.ಇಂತಹ ವ್ಯಕ್ತಿಗಳು ಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ. ರಕ್ತದ ಏರೊತ್ತಡ ಉಂಟಾಗಲು ಹಲವು ಕಾರಣಗಳಿವೆ.ಅವುಗಳಲ್ಲಿ ಅನುವಂಶಿಕ ಕಾರಣ, ಸ್ಥೂಲದೇಹ, ಮಧುಮೇಹ ಮತ್ತು ಆಹಾರದೊಡನೆ ಅಧಿಕ ಪ್ರಮಾಣದ ಉಪ್ಪಿನಾಂಶ ಸೇವನೆ ಮುಖ್ಯವಾದವುಗಳು. ರಕ್ತದ ಏರೊತ್ತಡ ಹೆಚ್ಚಾದಾಗ ತಲೆ ಸುತ್ತುವಿಕೆ,ತಲೆನೋವು, ಕಣ್ಣಿಗೆ ಕತ್ತಲೆಯಾದಂತೆ ಭಾಸ ವಾಗುವುದು ಮತ್ತು ಅತಿಯಾದ ಆಯಾಸ ಉಂಟಾಗುತ್ತದೆ. ವಿಪರೀತ ಏರಿಕೆಯಾದಾಗ ಮೆದುಳಿನಲ್ಲಿ ರಕ್ತ ಸ್ರಾವವಾಗುತ್ತದೆ.
ರಕ್ತದ ಏರೊತ್ತಡದಿಂದ ಬಳಲುತ್ತಿದ್ದ 92 ಮಂದಿ ರೋಗಿಗಳನ್ನು ಆಯ್ಕೆ ಮಾಡಿ ಎರಡು ಗುಂಪು ಮಾಡಲಾಯಿತು. ನಿಯಂತ್ರಣ ಗುಂಪಿನ ರೋಗಿಗಳಿಗೆ ಗೋಧಿಹಿಟ್ಟು ತುಂಬಿದ 500 ಮಿ. ಗ್ರಾಂ ಪ್ರಮಾಣದ ಕ್ಯಾಪ್ಸೂಲ್ ಅನ್ನು ಸೇವಿಸಲು ಕೊಡಲಾಯಿತು. ಜೊತೆಗೆ ಈ ಮೊದಲು ಸೇವಿಸುತ್ತಿದ್ದ ಔಷಧಿಯನ್ನು ಮುಂದುವರಿಸುವಂತೆ ತಿಳಿಸಲಾಯಿತು.ಪ್ರಾಯೋಗಿಕ ಗುಂಪಿನ ರೋಗಿಗಳಿಗೆ ಔಷಧಿಯ ಜೊತೆಗೆ 500 ಮಿ. ಗ್ರಾಂ ಪ್ರಮಾಣದ ಬೆಟ್ಟದ ನೆಲ್ಲಿಕಾಯಿಯ ಸತ್ವ ತುಂಬಿದ ಕ್ಯಾಪ್ಸೂಲ್ ಸೇವಿಸಲು ಕೊಡಲಾಯಿತು.8 ವಾರ ಚಿಕಿತ್ಸೆಯನ್ನು ಪೂರ್ಣಗೊಳಿಸಿದ ನಂತರ ಎಲ್ಲಾ ರೋಗಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ,ಪ್ರಾಯೋಗಿಕ ಗುಂಪಿನ ರೋಗಿಗಳಲ್ಲಿ ಅಂಕುಚನ ಮತ್ತು ವ್ಯಾಕೋಚನ ಒತ್ತಡ ನಿಯಂತ್ರಣಕ್ಕೆ ಬಂದಿತೆಂದು ವರದಿಯಾಗಿದೆ ಈ ರೀತಿಯ ಪ್ರಯೋಗವನ್ನು 150 ಮಂದಿ ರೋಗಿಗಳ ಮೇಲೆ 12 ವಾರಗಳವರೆಗೆ ನಡೆಸಿದೆ ಸಂಶೋಧನೆಯಿಂದ ಅಂಕುಚ ಮತ್ತು ವ್ಯಾಕೋಚನ ಒತ್ತಡದಲ್ಲಿ ಹೆಚ್ಚಿನ ಬದಲಾವಣೆ ಕಂಡು ಬರಲಿಲ್ಲ ಎಂಬ ಅಂಶ ವರದಿಯಾಗಿದೆ ಎರಡು ಸಂಶೋಧನೆಗಳಿಂದ ಒಮ್ಮತದ ಅಭಿಪ್ರಾಯ ವ್ಯಕ್ತವಾಗದ ಕಾರಣ, ಉನ್ನತ ಮಟ್ಟದ ಸಂಶೋಧನೆಯ ಅಗತ್ಯವಿದೆ.