ಮನೆ ದೇವಸ್ಥಾನ ಬಾಳಗಂಚಿಯ ಹೊನ್ನಾದೇವಿ ದೇವಾಲಯ

ಬಾಳಗಂಚಿಯ ಹೊನ್ನಾದೇವಿ ದೇವಾಲಯ

0

ಭಾರತ ಕರ್ಮ ಭೂಮಿ, ಋಷಿ ಮುನಿಗಳ ತಪಸ್ಸಿನಿಂದ ಪುನೀತವಾದ ಪುಣ್ಯಭೂಮಿ. ಹೀಗಾಗಿಯೇ ಮುಕ್ಕೋಟಿ ದೇವತೆಗಳು ಈ ಪವಿತ್ರ ಮಣ್ಣಿನಲ್ಲಿ ನಾನಾ ಅವತಾರಗಳನ್ನು ಎತ್ತಿ, ಸನಾತನ ಭಾರತವನ್ನೂ, ತನ್ನ ನಂಬಿ ಬರುವ ಭಕ್ತರನ್ನು ಕಾಪಾಡುತ್ತಿದ್ದಾರೆ ಎಂಬುದು ಹಿಂದಿನಿಂದ ಬಂದಿರುವ ನಂಬಿಕೆ.

ಭಾರತದಾದ್ಯಂತ ಇರುವ ಎಲ್ಲ ನಗರ, ಪಟ್ಟಣ, ಊರು, ಗ್ರಾಮದಲ್ಲೂ ಒಂದು ದೇವಾಲಯ ಇದ್ದೇ ಇರುತ್ತದೆ.  ಕರ್ನಾಟಕದಲ್ಲಂತೂ ಗ್ರಾಮಕ್ಕೊಂದು ಗ್ರಾಮದೇವತೆಯ ಗುಡಿ ಇರುತ್ತದೆ. ಅದಕ್ಕೊಂದು ಐತಿಹ್ಯವೂ ಇರುತ್ತದೆ.

ನಾನಾ ಕಾರಣಗಳಿಂದ ಆ ಊರಿನಲ್ಲಿ ನೆಲೆಸುವ ಗ್ರಾಮ ದೇವತೆ, ತಾನು ನೆಲೆಸಿಹ  ಊರನ್ನೂ, ಊರಿನ ಜನರನ್ನೂ ಕಾಪಾಡುತ್ತಾಳೆ, ಪೊರೆಯುತ್ತಾಳೆ ಎಂಬುದು ನಮ್ಮ ಜನಪದರ ನಂಬಿಕೆ. ತಮ್ಮ ಊರಿನಲ್ಲಿ ನೆಲೆ ನಿಂತ  ಆ ದೇವತೆಗೆ ದೇವಾಲಯ ಕಟ್ಟಿಸಿ, ಗೋಪುರ ನಿರ್ಮಿಸಿ, ಪಟ್ಟೆ ಪೀತಾಂಬರ,  ರಜತ ಸುವರ್ಣಾಭರಣ ಇಲ್ಲವೇ ಹಿತ್ತಾಳೆಯ ಕವಚಗಳಿಂದಲಾದರೂ ಅಲಂಕರಿಸಿ, ರಥೋತ್ಸವ, ಊರ ಹಬ್ಬ ಮಾಡಿ, &ತಂಬಿಟ್ಟಿನ ಆರತಿ ಬೆಳಗಿ ಕೃತಜ್ಞತೆ ಅರ್ಪಿಸುತ್ತಾರೆ.

ಗ್ರಾಮದೇವತೆಗಳು ಹುಟ್ಟಿದ ಬಗ್ಗೆ ಒಂದು ಜನಪದ ಕಥೆ ಇದೆ. ದ್ವಾಪರಯುಗ ಅಂತ್ಯವಾಗಿ ಕಲಿಯುಗ ಆರಂಭವಾದಾಗ, ಕಲಿಯ ಪ್ರಭಾವ ಹೆಚ್ಚಾದಾಗ ಪುರಜನರ ರಕ್ಷಿಸಲು ಜಗಜ್ಜನನಿಯಾದ ತಾಯಿ ಪಾರ್ವತಿ ಶಕ್ತಿ ದೇವತೆಯಾಗಿ ಅವತರಿಸಲು ನಿರ್ಧರಿಸಿದಳಂತೆ, ಆಗ ತ್ರಿಮೂರ್ತಿಗಳು ತಮ್ಮ ದಿವ್ಯಶಕ್ತಿಯನ್ನು ಧಾರೆ ಎರೆದರಂತೆ. ಇದರ ಪರಿಣಾಮವಾಗಿ ಚಾಮುಂಡೇಶ್ವರಿಯಾದ ಪಾರ್ವತಿ, ದುರ್ಗೆಯಾಗಿ, ಭೈರವಿಯಾಗಿ, ಮಾರಮ್ಮ, ಕೆಂಪಮ್ಮ, ಲಕ್ಕಮ್ಮ, ಎಲ್ಲಮ್ಮ, ದೊಡ್ಡಮ್ಮಳಾಗಿ, ಮೀನಾಕ್ಷಿ, ಕಾಮಾಕ್ಷಿ, ಹೊನ್ನಾದೇವಿಯಾಗಿ ಒಟ್ಟು ಸಾವಿರದ ಎಂಟು ಅವತಾರ ಎತ್ತಿ ಗ್ರಾಮಗಳಲ್ಲಿ ನೆಲೆಸಿದಳಂತೆ.

ಹೀಗೆ ಹಾಸನ ಜಿಲ್ಲೆ ಹಿರೆಸಾವೆ ಬಳಿಯ ಬಾಳಗಂಚಿಯಲ್ಲಿ ತಾಯಿ ಹೊನ್ನಾದೇವಿಯಾಗಿ ನೆಲೆಸಿ, ಊರನ್ನೂ ಊರ ಜನರನ್ನು ಕಾಪಾಡುತ್ತಿದ್ದಾಳೆ.

ಇತಿಹಾಸ:- ಸಾವಿರಾರು ವರ್ಷಗಳಷ್ಟು ಪುರಾತನ ಇತಿಹಾಸ ಹೊಂದಿರುವ ಬಾಳಗಂಚಿ ಗ್ರಾಮವನ್ನು ಹೊಯ್ಸಳರ ದೊರೆ ವಿಷ್ಣುವರ್ಧನನ ವಂಶಸ್ಥ ನಾರಸಿಂಹದೇವ 76 ವೃತ್ತಿನಿರತ ಬ್ರಾಹ್ಮಣರಿಗೆ ದಾನವಾಗಿ ಕೊಟ್ಟಿದ್ದ ಎಂಬ ಬಗ್ಗೆ 1256ರಲ್ಲಿ ಬರೆಸಿದ ತಾಮ್ರ ಶಾಸನ ಸಾರುತ್ತದೆ. ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ ಎಂದೇ ಖ್ಯಾತರಾಗಿದ್ದ ಹಾಗೂ ವಿಜಯನಗರ ಸಾಮ್ರಾಜ್ಯದ ಸ್ಥಾಪಕರಾದ ಹಕ್ಕ ಬುಕ್ಕರ ಗುರುಗಳೂ ಆಗಿದ್ದ ಶ್ರೀ ವಿದ್ಯಾರಣ್ಯರು ಕೂಡ ಭೇಟಿ ನೀಡಿ ಇಲ್ಲಿ ಮಠವನ್ನು ಸ್ಥಾಪಿಸಿದ್ದರು ಎಂಬ ಬಗ್ಗೆ ಎಪಿಗ್ರಫಿ ಆಫ್ ಕರ್ನಾಟಕದಲ್ಲಿ ಉಲ್ಲೇಖವಿದೆ.

ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗಾಗಿ ವಿದ್ಯಾರಣ್ಯರು ಲೋಕರಕ್ಷಕಿಯಾದ ಪಾರ್ವತಿ ದೇವಿಯನ್ನು ಕುರಿತು ತಪವನ್ನು ಆಚರಿಸಿದಾಗ ದೇವಿ ಹೊನ್ನಿನ ಮಳೆಗರೆದಳಂತೆ. ಹೊನ್ನಿನ ಮಳೆ ಗರೆದ ಪಾರ್ವತಿಯನ್ನು ಹೊನ್ನಾದೇವಿ ಎಂದು ಸ್ತುತಿಸಿ, ವಿದ್ಯಾರಣ್ಯರು ಪೂಜಿಸಿದರೆಂದೂ, ಆ ತಾಯಿಯೇ ಇಲ್ಲಿ ನೆಲೆಸಿರುವ ಹೊನ್ನಾದೇವಿ ಎಂದೂ ಊರಿನ ಕೆಲವು ಹಿರಿಯರು ಹೇಳುತ್ತಾರೆ. ಅಂದಿನಿಂದಲೂ ಇಲ್ಲಿ ಅನೂಚಾನವಾಗಿ ಪೂಜೆ ನಡೆದು ಬಂದಿದ್ದು, ಹೊನ್ನಾದೇವಿ ಬಾಳಗಂಚಿ ಗ್ರಾಮದೇವತೆಯಾಗಿ ಬೇಡಿ ಬರುವ ಭಕ್ತರ ಇಚ್ಛೆಯನ್ನು ನೆರವೇರಿಸುತ್ತಾಳೆ, ಊರನ್ನು ಪೊರೆಯುತ್ತಿದ್ದಾಳೆ ಎಂಬುದು ಭಕ್ತರ ನಂಬಿಕೆ. ಈ ದೇವಿಗೆ ನೂರಾರು ವರ್ಷಗಳ ಹಿಂದೆ ಕಟ್ಟಿಸಿದ್ದ ಕಲ್ಲು ಕಟ್ಟಡದ ಪುಟ್ಟ ದೇವಾಲಯ ಸಂಪೂರ್ಣ ಶಿಥಿಲವಾಗಿ ಕುಸಿಯುತ್ತಿದ್ದ ಹಿನ್ನೆಲೆಯಲ್ಲಿ ಹೊನ್ನಾದೇವಿ ಸೇವೆ ಹಾಗೂ ಅಭಿವೃದ್ಧಿ ಸಮಿತಿ, ಹಳೆಯ ದೇಗುಲ ಕೆಡವಿ, &ಸುಮಾರು ಎರಡೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಭವ್ಯವಾದ ಸುಂದರ ದೇವಾಲಯ ನಿರ್ಮಾಣ ಮಾಡಿದೆ.

ಪುನರ್ನಿರ್ಮಾಣಗೊಂಡ ನೂತನ ದೇವಾಲಯದಲ್ಲಿ ತಾಯಿ ಹೊನ್ನಾದೇವಿ, ಗಣಪತಿ ಹಾಗೂ ಕಾಲಭೈರವ ಸ್ವಾಮಿಯ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ಕುಂಭಾಭಿಷೇಕವನ್ನು ದಕ್ಷಿಣಾಮ್ನೇಯ ಶ್ರೀಶೃಂಗೇರಿ ಶಾರದಾಪೀಠದ ಜಗದ್ಗುರು ಶ್ರೀಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು ಹಾಗೂ ಕಿರಿಯ ಸ್ವಾಮೀಜಿಗಳಾದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ 2015ರ ಜೂನ್ 12ರಂದು ವಿಧ್ಯುಕ್ತವಾಗಿ ಹಾಗೂ ಶಾಸ್ತ್ರೋಕ್ತವಾಗಿ ನೆರವೇರಿಸಿದರು.

ನೂರಾರು ವರ್ಷಗಳ ಪುರಾತನವಾದ ನಾಲ್ಕೂವರೆ ಅಡಿ ಎತ್ತರದ ಪ್ರಭಾವಳಿ ಸಹಿತವಾದ ಕೃಷ್ಣ ಶಿಲೆಯ ಹೊನ್ನಾದೇವಿಯ ಮೂಲ ವಿಗ್ರಹವನ್ನು ಪ್ರತಿಷ್ಠಾಪಿಸಿ,  ತಾವೇ ಸ್ವತಃ ಮಂತ್ರೋಕ್ತವಾಗಿ ಪೂಜಿಸಿದ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿಯವರು ಇದೊಂದು ಪರಮ ಪುಣ್ಯಕ್ಷೇತ್ರ ಎಂದು ಘೋಷಿಸಿದರು.

ನೂತನವಾಗಿ ನಿರ್ಮಿಸಿರುವ ವಿಶಾಲವಾದ ಪ್ರಾಕಾರವುಳ್ಳ ದೇವಾಲಯದ ಆವರಣದಲ್ಲಿ ಹೆಬ್ಬಾರಮ್ಮ, ಗಣಪತಿ, ಕಾಲಭೈರವೇಶ್ವರನ ಪುಟ್ಟ ಗುಡಿಗಳೂ ಇವೆ.

ಹೊನ್ನಮ್ಮನ ಹಬ್ಬ: ಪ್ರತಿವರ್ಷ ಯುಗಾದಿಯಾದ ನಂತರದ ಎರಡನೇ ಗುರುವಾರ ಊರಲ್ಲಿ ಹೊನ್ನಮ್ಮನ ಹಬ್ಬ ನಡೆಯುತ್ತದೆ. ಅಂದು ಬೆಂಗಳೂರು, ಮೈಸೂರು, ತುರುವೇಕೆರೆ, ತುಮಕೂರು,  ಊಟಿ, ಕೊಯಮತ್ತೂರು, ಹಾಸನ ಸೇರಿದಂತೆ ದೂರ ದೂರದ ಊರುಗಳಿಂದಲೂ ಸಾವಿರಾರು ಭಕ್ತರು ಆಗಮಿಸುತ್ತಾರೆ.

ಇದಲ್ಲದೆ, ಬಾಳಗಂಚಿ ಗ್ರಾಮದಲ್ಲಿ ಗಣಪತಿ ದೇವಾಲಯ, ಲಕ್ಷ್ಮೀನರಸಿಂಹ ದೇವಾಲಯ ಹಾಗೂ ಪಂಚಲಿಂಗ ದೇವಾಲಯಗಳಿವೆ. ಆದರೆ ಸೂಕ್ತ ನಿರ್ವಹಣೆ ಇಲ್ಲದೆ ಪುರಾತನವಾದ ಈ ದೇವಾಲಯಗಳು ಅವನತಿಯ ಅಂಚಿನಲ್ಲಿವೆ. ಮುಜರಾಯಿ ಇಲಾಖೆ ಗಮನ ಹರಿಸಿದರೆ ಈ ದೇವಾಲಯಗಳ ಸಂರಕ್ಷಣೆ ಸಾಧ್ಯ.