ಹುಣಸೂರು:ವಿಧಾನಸಭಾ ಚುನಾವಣೆ ವೇಳೆ ಹುಣಸೂರು ಅಬಕಾರಿ ಇಲಾಖೆಯು ನಡೆಸಿದ ಕಾರ್ಯಾಚರಣೆಯ ವಿವಿಧ ಪ್ರಕರಣಗಳಲ್ಲಿ ಒಟ್ಟು 2.47 ಕೋಟಿ ಮೌಲ್ಯದ ವಿವಿಧ ಬ್ರಾಂಡ್ ನ 84ಸಾವಿರ ಲೀ.ಮದ್ಯ ಹಾಗೂ 26 ವಾಹನಗಳನ್ನು ವಶಕ್ಕೆ ಪಡೆದು 20ಮಂದಿ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.
ಅಬಕಾರಿ ಉಪ ಅಧೀಕ್ಷಕ ಕೆ.ಟಿ.ವಿಜಯಕುಮಾರ್ ಮಾರ್ಗದರ್ಶನದಲ್ಲಿ ಚುನಾವಣೆ ನೀತಿ ಸಂಹಿತೆ ಅನ್ವಯ ಹುಣಸೂರು ವೃತ್ತದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ನೀತಿ ಸಂಹಿತೆ ಉಲ್ಲಂಘಿಸಿ ಅಕ್ರಮ ಮದ್ಯ ಸಾಗಾಟ, ಸಂಗ್ರಹಣೆ ಅಡ್ಡೆಗಳ ಮೇಲೆ ಇಷ್ಟೊಂದು ದೊಡ್ಡ ಮೊತ್ತದ ಮದ್ಯ ಹಾಗೂ ಸಾಗಾಟಕ್ಕೆ ಬಳಸಿದ್ದ ವಾಹನಗಳನ್ನು ವಶಕ್ಕೆ ಪಡೆದಿರುವುದು ನಾಗರೀಕರು ಹುಬ್ಬೇರಿಸುವಂತೆ ಮಾಡಿದೆ.
2.47 ಕೋಟಿ ಮೌಲ್ಯದ ಮದ್ಯ ವಶ:
ಕಾರ್ಯಾಚರಣೆ ವೇಳೆ 1,51 ಕೋಟಿ ರೂ ಮೌಲ್ಯದ ವಿವಿಧ ಬ್ರಾಂಡ್‌ನ 26ಸಾವಿರ ಲೀ.ಮದ್ಯ, 96 ಲಕ್ಷರೂ ಮೌಲ್ಯದ 57 ಸಾವಿರ ಲೀ. ಬಿಯರ್ ಹಾಗೂ 16.5 ಸಾವಿರ ಬೆಲೆಯ 19 ಲೀ ವೈನ್ ಸೇರಿದಂತೆ ಒಟ್ಟಾರೆ 2.47 ಕೋಟಿ ಮೌಲ್ಯದ 84ಸಾವಿರ ಲೀ.ಮದ್ಯ, 19ಲೀ.ವೈನ್ ವಶಪಡಿಸಿಕೊಂಡಿದ್ದು, ಅಕ್ರಮ ಮದ್ಯ ಸಾಗಾಟಕ್ಕೆ ಬಳಸಿದ್ದ ಒಂದು ಇನೋವಾ ಸೇರಿದಂತೆ ನಾಲ್ಕು ಕಾರು, 10 ದ್ವಿಚಕ್ರ ವಾಹನ, ಎರಡು ಗೂಡ್ಸ್ ವಾಹನಗಳನ್ನು ವಶಕ್ಕೆ ಪಡೆಯಲಾಗಿದ್ದು, 20 ಮಂದಿ ಆರೋಪಿಗಳ ಪೈಕಿ 17 ಮಂದಿ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿತ್ತು. ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರೆ, ಉಳಿದ ಮೂವರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.
ಎಲ್ಲ ಪ್ರಕರಣಗಳು ತನಿಖಾ ಹಂತದಲ್ಲಿದೆ ಎಂದು ಅಬಕಾರಿ ನಿರೀಕ್ಷಕ ನಾಗಲಿಂಗಸ್ವಾಮಿ ಮಾಹಿತಿ ನೀಡಿದ್ದು, ಈ ಕಾರ್ಯಾಚರಣೆ ವೇಳೆ ಅಬಕಾರಿ ಸಬ್ ಇನ್ಸ್ಪೆಕ್ಟರ್ ಜಯಂತಿ, ಸುರೇಶ್ ಹಾಗೂ ತಂಡ ಭಾಗವಹಿಸಿದ್ದರು.