ಮನೆ ಅಪರಾಧ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಫಾರ್ಮ್ ಹೌಸ್’ನಲ್ಲಿ ವನ್ಯಜೀವಿಗಳ ಅಕ್ರಮ ಸಾಕಾಣಿಕೆ

ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಫಾರ್ಮ್ ಹೌಸ್’ನಲ್ಲಿ ವನ್ಯಜೀವಿಗಳ ಅಕ್ರಮ ಸಾಕಾಣಿಕೆ

0

ಬೆಂಗಳೂರು(Bengauru): ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಫಾರ್ಮ್ ಹೌಸ್ ಮೇಲೆ ಸಿಸಿಬಿ ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಅಲ್ಲಿ ವನ್ಯಜೀವಿಗಳನ್ನು ಅಕ್ರಮವಾಗಿ ಸಾಕಾಣಿಕೆ ಮಾಡಿರೋದು ಗೊತ್ತಾಗಿದೆ.

ಎಸ್.ಎಸ್.ಮಲ್ಲಿಕಾರ್ಜುನ್ ದಾವಣಗೆರೆಯ ಕಲ್ಲೇಶ್ವರ ಮಿಲ್ ಹಿಂಭಾಗದಲ್ಲಿರುವ ಫಾರ್ಮ್’ಹೌಸ್ ನಲ್ಲಿ ಏಳು ಚುಕ್ಕಿ ಜಿಂಕೆಗಳು, 10 ಕೃಷ್ಣಮೃಗಗಳು, ಏಳು ಕಾಡುಹಂದಿಗಳು, ಮೂರು ಮುಂಗುಸಿಗಳು, ಎರಡು ನರಿಗಳು ಸಿಕ್ಕಿವೆ ಎಂದು ತಿಳಿದು ಬಂದಿದೆ. ಸಿಸಿಬಿ ಪೊಲೀಸರು ವನ್ಯಜೀವಿಗಳನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ.

ಪ್ರಕರಣದ ವಿವರ

ಬೆಂಗಳೂರಿನ ಹೆಬ್ಬಾಳದಲ್ಲಿ ಡಿ.18ರಂದು ಜಿಂಕೆ ಚರ್ಮ, ಕೊಂಬು, ಮೂಳೆ ಮಾರಾಟ ಮಾಡಲು ಬಂದಿದ್ದ ಸೆಂಥಿಲ್ ಎಂಬ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಈ ವೇಳೆ ಬಂಧಿತನನ್ನು ವಿಚಾರಣೆಗೆ ಒಳಪಡಿಸಿದಾಗ ದಾವಣಗೆರೆಯಿಂದ ಚರ್ಮ ಹಾಗೂ ಕೊಂಬು ತಂದಿರುವುದಾಗಿ ಆತ ಬಾಯ್ಬಿಟ್ಟಿದ್ದನು.

ಈ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಫಾರ್ಮ್’ಹೌಸ್’ನಲ್ಲಿದ್ದ ಕಾರ್ಮಿಕರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ.

ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲು ಅವಕಾಶ ನೀಡಬೇಕು ಎಂದು ಅರಣ್ಯ ಇಲಾಖೆ ನ್ಯಾಯಾಲಯಕ್ಕೆ ಕೇಳಿಕೊಂಡಿದೆ. ಆದೇಶದ ಪ್ರತಿ ಸಿಗುತ್ತಿದ್ದಂತೆಯೇ ತನಿಖಾಧಿಕಾರಿಯನ್ನು ನೇಮಿಸಿ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ನಾವು ಅನುಮತಿ ಪಡೆದುಕೊಂಡು ಪ್ರಾಣಿಗಳನ್ನು ಸಾಕಿದ್ದೇವೆ ಎಂದು ಎಸ್.ಎಸ್.ಮಲ್ಲಿಕಾರ್ಜುನ್ ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಈ ಬಗ್ಗೆ ಮಾಹಿತಿ ನೀಡಿಲ್ಲ.

ಹಿಂದಿನ ಲೇಖನಅಂಗನವಾಡಿ ಕಾರ್ಯಕರ್ತೆಯರಿದ್ದ ಬಸ್​ ಅಪಘಾತ: 7 ಮಂದಿ ಸ್ಥಿತಿ ಗಂಭೀರ
ಮುಂದಿನ ಲೇಖನಕೊರೊನಾ ಭೀತಿ: ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ತುರ್ತು ಸಭೆ