ಮಾಸ್ಕೋ : ನಮ್ಮಿಂದ ತೈಲ ಖರೀದಿಸುವುದಿಲ್ಲ ಅಂತ ಭಾರತ ಹೇಳಿಲ್ಲ, ಇನ್ನೂ ನಮಗೆ ದೆಹಲಿಯಿಂದ ಯಾವುದೇ ಸೂಚನೆ ಬಂದಿಲ್ಲ ಎಂದು ರಷ್ಯಾ ಹೇಳಿದೆ. ನಿನ್ನೆಯಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದೊಂದಿಗೆ 500 ಶತಕೋಟಿ ಡಾಲರ್ ವ್ಯಾಪಾರ ಒಪ್ಪಂದ ಘೋಷಿಸಿದ್ದರು. ಜೊತೆಗೆ 25% ಇದ್ದ ತೆರಿಗೆ ಭಾರವನ್ನ 18% ಗೆ ಇಳಿಸಿದ್ದರು. ಇದೇ ವೇಳೆ ಟ್ರಂಪ್ ರಷ್ಯಾದಿಂದ ತೈಲ ಖರೀದಿಯನ್ನ ನಿಲ್ಲಿಸಲು ಭಾರತ ಒಪ್ಪಿಕೊಂಡಿದೆ.
ಇನ್ಮುಂದೆ ಅಮೆರಿಕ & ವೆನೆಜುವೆಲಾದಿಂದ ಭಾರತ ತೈಲ ಖರೀದಿ ಮಾಡಲಿದೆ ಎಂದು ಹೇಳಿದ್ದರು. ಈ ಹೇಳಿಕೆಗೆ ರಷ್ಯಾ ಪ್ರತಿಕ್ರಿಯಿಸಿದೆ. ಮಾಸ್ಕೋದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್, ತೈಲ ಖರೀದಿ ನಿಲ್ಲಿಸುವ ಬಗ್ಗೆ ನಮಗೆ ದೆಹಲಿಯಿಂದ ಯಾವುದೇ ಸೂಚನೆ ಬಂದಿಲ್ಲ ಎಂದು ವಿವರಿಸಿದ್ದಾರೆ.
ಭಾರತ ಮತ್ತು ನಮ್ಮ ನಡುವಿನ ಸಂಬಂಧ ಮೌಲ್ಯಯುತವಾದದ್ದು, ನಾವು ಭಾರತದ ಜೊತೆಗಿನ ಸಂಬಂಧವನ್ನ ಗೌರವಿಸುತ್ತೇವೆ. ನಮ್ಮ ನಡುವಿನ ಕಾರ್ಯತಂತ್ರದ ಪಾಲುಕದಾರಿಕೆ ಅಭಿವೃದ್ಧಿಪಡಿಸುವುದನ್ನ ಮುಂದುವರಿಸುತ್ತೇವೆ, ಪ್ರಮುಖ ಒಪ್ಪಂದಗಳಿಗೆ ಇನ್ನಷ್ಟು ಪ್ರಾಮುಖ್ಯತೆ ನೀಡುತ್ತೇವೆ. ಇದರೊಂದಿಗೆ ಅಮೆರಿಕ-ಭಾರತದ ದ್ವಿಪಕ್ಷೀಯ ಸಂಬಂಧಗಳನ್ನೂ ಗೌರವಿಸುತ್ತೇವೆ ಎಂದು ಪೆಸ್ಕೋವ್ ಹೇಳಿದರು.
ವ್ಯಾಪಾರ ಮತ್ತು ರಷ್ಯಾ-ಉಕ್ರೇನ್ ಯುದ್ಧ ಕೊನೆಗೊಳಿಸುವುದು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಪ್ರಧಾನಿ ಮೋದಿ ಅವರೊಂದಿಗೆ ಚರ್ಚಿಸಿದ್ದೇನೆ. ಭಾರತ ರಷ್ಯಾದಿಂದ ತೈಲ ಖರೀದಿ ಮಾಡುವುದನ್ನು ನಿಲ್ಲಿಸಿದೆ. ಪ್ರಧಾನಿ ಮೋದಿ ಕೂಡ ಒಪ್ಪಿಕೊಂಡಿದ್ದಾರೆ. ಭಾರತ ಇನ್ಮುಂದೆ ಅಮೆರಿಕ ಮತ್ತು ವೆನೆಜುವೆಲಾದಿಂದ ಹೆಚ್ಚಿನ ತೈಲ ಖರೀದಿ ಮಾಡಲಿದೆ. ಇದು ಉಕ್ರೇನ್ ವಿರುದ್ಧದ ಯುದ್ಧ ಕೊನೆಗೊಳಿಸಲು ಸಹಾಯ ಮಾಡುತ್ತದೆ.
ಹೀಗಾಗಿ ಭಾರತದ ಮೇಲಿನ ಸುಂಕವನ್ನ 25% ನಿಂದ 18% ಗೆ ಇಳಿಕೆ ಮಾಡಿದೆ. ಜೊತೆಗೆ ಕೃಷಿ ಇಂಧನ, ಕಲ್ಲಿದ್ದಲು, ತಂತ್ರಜ್ಞಾನ ಸೇರಿದಂತೆ 500 ಶತಕೋಟಿ ಡಾಲರ್ ವ್ಯಾಪರಕ್ಕೆ ಒಪ್ಪಂದವಾಗಿದೆ. ಪ್ರತಿಯಾಗಿ ಭಾರತವು ಅಮೆರಿಕದ ಉತ್ಪನ್ನಗಳ ಮೇಲಿನ ತನ್ನ ಸುಂಕವನ್ನ ಶೂನ್ಯಕ್ಕೆ ಇಳಿಸುವ ನಿರೀಕ್ಷೆಯಿದೆ. ಜೊತೆಗೆ ಇತರ ಅಡೆತಡೆಗಳನ್ನೂ ನಿವಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ಈ ಹಿಂದೆ ಟ್ರಂಪ್ ಹಾಕಿದ್ದ ಸುಂಕಗಳು ಯಾವುದು? – 10% ಮೂಲ ಸುಂಕ : ಏಪ್ರಿಲ್ 2025 ರಿಂದ ಬಹುತೇಕ ಎಲ್ಲಾ ಅಮೆರಿಕದ ಆಮದುಗಳಿಗೆ ಅನ್ವಯಿಸಲಾದ ಸಾಮಾನ್ಯ ಸುಂಕ. 15% ಪ್ರತಿ ಸುಂಕ : ಅಮೆರಿಕ ಉತ್ಪನ್ನಗಳ ಮೇಲೆ ಭಾರತವು ತನ್ನದೇ ಆದ ಹೆಚ್ಚಿನ ಸುಂಕ ಹಾಕಿದ್ದಕ್ಕೆ ವಿಧಿಸಿದ ಸುಂಕ.
25% ದಂಡ ಸುಂಕ : ಆಗಸ್ಟ್ 27, 2025 ರಂದು ಹೆಚ್ಚುವರಿ ಸುಂಕವನ್ನು ಹಾಕಲಾಗುತ್ತಿದೆ. ನಿರ್ದಿಷ್ಟವಾಗಿ ರಷ್ಯಾದ ತೈಲ ಆಮದುಗಳನ್ನು ನಿಲ್ಲಿಸಲು ಭಾರತ ನಿರಾಕರಿಸಿದ್ದಕ್ಕೆ ದಂಡದ ರೂಪದಲ್ಲಿ ಹಾಕಲಾಗುತ್ತಿದೆ. ಹೀಗಾಗಿ ಒಟ್ಟು 50% ಸುಂಕವನ್ನು ಅಮೆರಿಕ ಭಾರತದ ಕೆಲ ವಸ್ತುಗಳಿಗೆ ವಿಧಿಸಿತ್ತು.















