ಮನೆ ಸುದ್ದಿ ಜಾಲ ಭಾರತೀಯ ರೈಲ್ವೆಯ ಆವಿಷ್ಕಾರ ನೀತಿ ʻರೈಲ್ವೆಗಾಗಿ ಸ್ಟಾರ್ಟ್‌ಅಪ್‌ʼ ಕಾರ್ಯಾಗಾರ

ಭಾರತೀಯ ರೈಲ್ವೆಯ ಆವಿಷ್ಕಾರ ನೀತಿ ʻರೈಲ್ವೆಗಾಗಿ ಸ್ಟಾರ್ಟ್‌ಅಪ್‌ʼ ಕಾರ್ಯಾಗಾರ

0

ಮೈಸೂರು (Mysuru): ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ನಗರದ ಯಾದವಗಿರಿಯ ಚಾಮುಂಡಿ ಕ್ಲಬ್‌ನಲ್ಲಿ ಭಾರತೀಯ ರೈಲ್ವೆಯಲ್ಲಿ ಕಾರ್ಯಾಚರಣೆಯ ದಕ್ಷತೆ ಮತ್ತು ಸುರಕ್ಷತೆಯನ್ನು ಸುಧಾರಿಸುವ ಪರಿಹಾರಗಳನ್ನು ಹುಡುಕುವ ಸ್ಟಾರ್ಟ್-ಅಪ್‌ಗಳನ್ನು ಉತ್ತೇಜಿಸುವ ಉದ್ದೇಶದಿಂದ ಭಾರತೀಯ ರೈಲ್ವೆ ಆವಿಷ್ಕಾರ ನೀತಿ ʻರೈಲ್ವೆಗಾಗಿ ಸ್ಟಾರ್ಟ್ ಅಪ್ಸ್ʼ ಕುರಿತು ಕಾರ್ಯಾಗಾರವನ್ನು ಮೈಸೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ರಾಹುಲ್ ಅಗರ್ವಾಲ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು.

ಕಾರ್ಯಾಗಾರದಲ್ಲಿ ಕರ್ನಾಟಕದಾದ್ಯಂತದಿಂದ ಸುಮಾರು 43 ಸ್ಟಾರ್ಟ್‌ಅಪ್‌ಗಳು, ಎಂಎಸ್‌ಎಂಇಗಳು ಮತ್ತು ಇತರ ಘಟಕಗಳು ಭಾಗವಹಿಸಿದ್ದವು. ಕಾರ್ಯಾಗಾರದಲ್ಲಿ ಸಮಾನ ಹಂಚಿಕೆ ಆಧಾರದ ಮೇಲೆ ನವೋದ್ಯಮಿಗಳಿಗೆ ರೂ.1.5 ಕೋಟಿ ವರೆಗೆ ಅನುದಾನ ಪಾವತಿಯನ್ನು ಹಂತ ಹಂತವಾಗಿ ಒದಗಿಸುವುದು, ಶೇ.100 ರಷ್ಟು ಪಾರದರ್ಶಕತೆಯೊಂದಿಗೆ ಸಂಪೂರ್ಣ ಆನ್‌ಲೈನ್ ಪ್ರಕ್ರಿಯೆ, ಮೂಲಮಾದರಿಗಳ ಪ್ರಯೋಗಗಳನ್ನು ಕೈಗೊಳ್ಳಲು ರೈಲ್ವೆ ವತಿಯಿಂದ ಸಹಾಯ, ಮೂಲ ಮಾದರಿಗಳ ಯಶಸ್ವಿ ಕಾರ್ಯಕ್ಷಮತೆಯ ಮೇಲೆ ಧನಸಹಾಯ ಹೆಚ್ಚಳ, ಅಭಿವೃದ್ಧಿ ಹೊಂದಿದ ಬೌದ್ಧಿಕ ಆಸ್ತಿ ಹಕ್ಕುಗಳನ್ನು ನವೋದ್ಯಮಿಗಳೊಂದಿಗೆ ಉಳಿಸಿಕೊಳ್ಳುವುದು ಮುಂತಾದವುಗಳು ಸೇರಿದಂತೆ ಇತರೆ IRIP ಯ ಪ್ರಮುಖ ಲಕ್ಷಣಗಳ ಬಗ್ಗೆ ರಾಹುಲ್ ಅಗರ್ವಾಲ್ ಅವರು ತಿಳಿಸಿದರು.

ಅಗರ್ವಾಲ್ ಅವರು ಮಾತನಾಡಿ, ಕೃತಕ ಬುದ್ಧಿಮತ್ತೆ, ಇಂಟರ್ನೆಟ್ ಆಫ್ ಥಿಂಗ್ಸ್, ಬಿಗ್ ಡೇಟಾ ಅನಾಲಿಟಿಕ್ಸ್, ಕ್ಲೌಡ್ ಕಂಪ್ಯೂಟಿಂಗ್, ಡ್ರೋನ್ ಬಹುಮುಖಿ ತಂತ್ರಜ್ಞಾನ, ರೊಬೊಟಿಕ್ಸ್, ನ್ಯಾನೋ ತಂತ್ರಜ್ಞಾನ ಮತ್ತು ಮುಂದಿನ ಪೀಳಿಗೆಯ ತಂತ್ರಜ್ಞಾನದ ಸಾಧನಗಳೊಂದಿಗೆ ಪ್ರಸ್ತುತ 4ನೇ ಕೈಗಾರಿಕಾ ಕ್ರಾಂತಿಯನ್ನು ಜಗತ್ತು ನೋಡುತ್ತಿದ್ದು, ಭಾರತದಲ್ಲಿ ಸ್ಟಾರ್ಟ್‌ಅಪ್‌ಗಳು ಹೆಚ್ಚುತ್ತಿವೆ ಮತ್ತು ಅನೇಕ ಯುವ ನವೀನ ಉದ್ಯಮಿಗಳು ನಮ್ಮ ದೇಶದಲ್ಲಿಯೇ ಹೂಡಿಕೆ ಮಾಡಲು ಮತ್ತು ಆವಿಷ್ಕಾರ ಮಾಡಲು ಆಯ್ಕೆ ಮಾಡಿಕೊಂಡಿದ್ದಾರೆ. ಭಾರತೀಯ ರೈಲ್ವೆಯಲ್ಲಿನ ತಂತ್ರಜ್ಞಾನ ಅಭಿವೃದ್ದಿಗಾಗಿ ಈ ವೇದಿಕೆಗೆ ‘ರೈಲ್ವೆಗಾಗಿ ಸ್ಟಾರ್ಟ್‌ಅಪ್‌’ನಂತಹ ಹಲವಾರು ಆವಿಷ್ಕಾರಗಳಿಗೆ ಅವಕಾಶ ಒದಗಿಸಿರುವ ಭಾರತ ಸರ್ಕಾರವು, ತನ್ನ ವಿವಿಧ ಉಪಕ್ರಮಗಳ ಮೂಲಕ ದೀರ್ಘಾವಧಿಯ ಅಗತ್ಯಕ್ಕೆ ದೃಢವಾದ ಆಕಾರವನ್ನು ನೀಡಲು ಸ್ಟಾರ್ಟ್‌ಅಪ್‌ಗಳಿಗೆ ಅನ್ವೇಷಿಸಲು ಮತ್ತು ಅಭಿವೃದ್ಧಿ ಹೊಂದಲು ಅನುವು ಮಾಡಿಕೊಡುವ ಚೌಕಟ್ಟು ಮತ್ತು ವಾತಾವರಣವನ್ನು ಒದಗಿಸಿದೆ ಎಂದು ಹೇಳಿದರು.

ಈ ಸ್ಟಾರ್ಟ್‌ಅಪ್‌ಗಳು, ಎಂಎಸ್‌ಎಂಇಗಳು ಮತ್ತು ಇತರ ಘಟಕಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ವೆಬ್ ವಿಳಾಸ www.innovation.indianrailways.gov.in ನಲ್ಲಿ ಲಭ್ಯವಿರುವ ಭಾರತೀಯ ರೈಲ್ವೆ ಇನ್ನೋವೇಶನ್ ಪೋರ್ಟಲ್‌ಗೆ ಲಾಗಿನ್ ಆಗಬಹುದು.

ಕಾರ್ಯಾಗಾರದಲ್ಲಿ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರುಗಳಾದ ಎ.ದೇವಸಹಾಯಂ, ಇ.ವಿಜಯ, ಹಿರಿಯ ವಿಭಾಗೀಯ ಹಣಕಾಸು ವ್ಯವಸ್ಥಾಪಕರಾದ ಲೆವಿನ್ ಪ್ರಭು ಮತ್ತು ಇತರ ಶಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಹಿಂದಿನ ಲೇಖನಇಂದಿನ ರಾಶಿ ಭವಿಷ್ಯ
ಮುಂದಿನ ಲೇಖನನೀಟ್‌ ಪರೀಕ್ಷೆಯಲ್ಲಿ ಒಳ ಉಡುಪು ತೆಗೆದು ಪರೀಕ್ಷೆ ಬರೆಯುವಂತೆ ಹೇಳಿದ್ದ ಪ್ರಕರಣ: 5 ಮಂದಿಯ ಬಂಧನ