ಪರ್ತ್: ಆಸ್ಟ್ರೇಲಿಯಾದ ಆತಿಥ್ಯದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ತನ್ನ ಮೊದಲ ಸೋಲುಂಡಿದೆ.
ಪರ್ತ್ ಸ್ಟೇಡಿಯಂನಲ್ಲಿ ನಡೆದಿದ್ದ 2022ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್12ರ ಹಂತದ ಪಂದ್ಯದಲ್ಲಿ ಕೇವಲ 134 ರನ್ ಸಾಧಾರಣ ಗುರಿ ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ತಂಡ, ಏಡೆನ್ ಮಾರ್ಕ್ರಮ್ ಹಾಗೂ ಡೇವಿಡ್ ಮಿಲ್ಲರ್ ಅವರ ಅರ್ಧಶತಕಗಳ ಬಲದಿಂದ ಇನ್ನೂ ಎರಡು ಎಸೆತಗಳು ಬಾಕಿ ಇರುವಾಗಲೇ 5 ವಿಕೆಟ್ ಗೆಲುವು ಪಡೆಯಿತು.
ದಕ್ಷಿಣ ಆಫ್ರಿಕಾ ವಿರುದ್ಧ ಭಾನುವಾರದ ಪಂದ್ಯದಲ್ಲಿ ಹೆಚ್ಚು ರನ್’ಗಳನ್ನು ಬಿಟ್ಟು ಕೊಟ್ಟ ಹಿರಿಯ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ಭಾರತ ತಂಡದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಪರೋಕ್ಷವಾಗಿ ಟೀಕಿಸಿದ್ದಾರೆ.
ಅಂದಹಾಗೆ ಪವರ್’ಪ್ಲೇ ಓವರ್’ ಗಳಲ್ಲಿ 3 ವಿಕೆಟ್ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಏಡೆನ್ ಮಾರ್ಕ್ರಮ್ ಹಾಗೂ ಡೇವಿಡ್ ಮಿಲ್ಲರ್ ನಿರ್ಣಾಯಕ ಜೊತೆಯಾಟವಾಡಿ ನೆರವಾಗಿದ್ದರು. ಈ ವೇಳೆ ಆರ್ ಅಶ್ವಿನ್ ಓವರ್’ನಲ್ಲಿ ವಿರಾಟ್ ಕೊಹ್ಲಿ ಸುಲಭವಾದ ಕ್ಯಾಚ್ ಅನ್ನು ಕೈಚೆಲ್ಲಿದ್ದರು ಹಾಗೂ ರೋಹಿತ್ ಶರ್ಮಾ ಒಂದು ರನ್ ಔಟ್ ಮಾಡುವಲ್ಲಿ ವಿಫಲರಾಗಿದ್ದರು.
ಆದರೆ, ಬಾರತ ತಂಡದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಅವರು ಮಾತ್ರ ಕೇವಲ 4 ಓವರ್ ಗಳಿಗೆ 43 ರನ್ ಬಿಟ್ಟುಕೊಟ್ಟು ದುಬಾರಿಯಾಗಿದ್ದ ಆರ್ ಅಶ್ವಿನ್ ಅವರನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.
“ಏಡೆನ್ ಮಾರ್ಕ್ರನ್ 35 ರನ್ ಗಳಿಸಿದ್ದಾಗ ವಿರಾಟ್ ಕೊಹ್ಲಿ ಕ್ಯಾಚ್ ಅನ್ನು ಬಿಟ್ಟಿದ್ದಾರೆ. ಇದರ ಜೊತೆಗೆ ರೋಹಿತ್ ಶರ್ಮಾ ಒಂದು ರನ್ ಔಟ್ ಮಾಡುವಲ್ಲಿ ವಿಫಲರಾದರು. ಕ್ಯಾಚ್ ಬಿಡುವುದು ಹಾಗೂ ರನ್ಔಟ್ ಮಿಸ್ ಮಾಡುವುದು ಆಟದ ಒಂದು ಭಾಗವಾಗಿದೆ. ಆದರೆ, 43 ರನ್ ನೀಡುವುದು ಇಲ್ಲಿ ದೊಡ್ಡ ಸಮಸ್ಯೆಯಾಗಿದೆ ಎಂದು ಆರ್ ಅಶ್ವಿನ್ ಅವರ ಹೆಸರು ಹೇಳದೆ ಸುನೀಲ್ ಗವಾಸ್ಕರ್ ಕಿಡಿ ಕಾರಿದ್ದಾರೆ.