ದಶಕಗಳ ಕಾಲ ಕ್ರಿಕೆಟ್ ಮೈದಾನದಲ್ಲಿ ಅಂಪೈರ್ ಕಾರ್ಯ ನಿರ್ವಹಿಸಿದ್ದ ದಕ್ಷಿಣ ಆಫ್ರಿಕಾದ ಅಂಪೈರ್ ರೂಡಿ ಕರ್ಟ್ಜೆನ್ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ರಿವರ್ಸ್‌ಡೇಲ್‌ನಲ್ಲಿ ಮಂಗಳವಾರ ಅಪಘಾತ ಸಂಭವಿಸಿದ್ದು, 73 ವರ್ಷದ ಕರ್ಟ್ಜೆನ್ ನೆಲ್ಸನ್ ಮಂಡೇಲಾ ಕೊಲ್ಲಿಯಲ್ಲಿರುವ ತನ್ನ ಮನೆಗೆ ಹೋಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಕೇಪ್ ಟೌನ್‌ನಲ್ಲಿ ವಾರಾಂತ್ಯದ ಗಾಲ್ಫ್‌ನಿಂದ ಹಿಂತಿರುಗುತ್ತಿದ್ದ ವೇಳೆ ಈ ಅಪಘಾತ ನಡೆದಿದೆ ಎಂದು ಅವರ ಮಗ ರೂಡಿ ಕರ್ಟ್ಜೆನ್ ಜೂನಿಯರ್ ಅಲ್ಗೋವಾ ಎಫ್ಎಂ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.
ರೂಡಿ ಕರ್ಟ್‌ಜೆನ್ ಶ್ರೇಷ್ಠ ಕ್ರಿಕೆಟ್ ಅಂಪೈರ್‌ಗಳಲ್ಲಿ ಒಬ್ಬರಾಗಿದ್ದರು. ಕರ್ಟ್ಜೆನ್ 108 ಟೆಸ್ಟ್ ಪಂದ್ಯಗಳಲ್ಲಿ ಅಂಪೈರಿಂಗ್ ಮಾಡಿದ್ದಾರೆ. ಜೊತೆಗೆ 209 ODI ಮತ್ತು 14 T20 ಪಂದ್ಯಗಳಲ್ಲಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದರು. ಕರ್ಟ್ಜೆನ್ ಅವರು 1992 ರಲ್ಲಿ ಅಂಪೈರಿಂಗ್ ಆರಂಭಿಸಿ 2010 ರಲ್ಲಿ ತನ್ನ ವೃತ್ತಿ ಬದುಕಿನಿಂದ ನಿವೃತ್ತರಾಗಿದ್ದರು. 2002 ರಲ್ಲಿ ICC ಎಲೈಟ್ ಪ್ಯಾನೆಲ್ ಅಂಪೈರ್ ಅನ್ನು ಮೊದಲು ಸ್ಥಾಪಿಸಿದಾಗ ಅದರಲ್ಲಿ ಕರ್ಟ್ಜೆನ್ ಕೂಡ ಇದ್ದರು.
ಅಲ್ಲದೆ ಡೇವಿಡ್ ಶೆಫರ್ಡ್ ನಂತರ 150 ಕ್ಕೂ ಹೆಚ್ಚು ODI ಪಂದ್ಯಗಳಲ್ಲಿ ಅಂಪೈರ್ ಆಗಿದ್ದ ಹೆಗ್ಗಳಿಕೆಗೆ ಕರ್ಟ್ಜೆನ್ ಪಾತ್ರರಾಗಿದ್ದಾರೆ.
19 ಏಪ್ರಿಲ್ 2006 ರಂದು ಅಬುಧಾಬಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಅಂಪೈರಿಂಗ್ ಮಾಡುವ ಮೂಲಕ ಕರ್ಟ್ಜೆನ್ ಈ ಸಾಧನೆ ಮಾಡಿದ್ದರು. ಬಳಿಕ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಅಂಪೈರಿಗ್ ಮಾಡುವ ಮೂಲಕ ಕರ್ಟ್ಜೆನ್, ಶೆಫರ್ಡ್ ಅವರ 172 ODIಗಳಲ್ಲಿ ಅಂಪೈರಿಗ್ ಮಾಡಿದ್ದ ದಾಖಲೆಯನ್ನು ಮುರಿದರು.
ಸ್ಟೀವ್ ಬಕ್ನರ್ ನಂತರ 100 ಟೆಸ್ಟ್ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ ಎರಡನೇ ಅಂಪೈರ್ ಕರ್ಟ್ಜೆನ್. ಅವರು 16 ಜುಲೈ 2009 ರಂದು ಲಾರ್ಡ್ಸ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ತಮ್ಮ ಅಂಪೈರಿಂಗ್ ಶತಕವನ್ನು ಪೂರ್ಣಗೊಳಿಸಿದ್ದರು. ಜೊತೆಗೆ 2003 ಮತ್ತು 2007 ರ ವಿಶ್ವಕಪ್ ಫೈನಲ್‌ನಲ್ಲಿ ಮೂರನೇ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು.
1981 ರಲ್ಲಿಯೇ ಅಂಪೈರ್ ವೃತ್ತಿ ಆರಂಭಿಸಿದ ಕರ್ಟ್ಜೆನ್, ಅಂತರರಾಷ್ಟ್ರೀಯ ಮಟ್ಟಕ್ಕೆ ಬರಲು ಸಮಯ ತೆಗೆದುಕೊಂಡರು. 1992 ರಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಾಗ ಅವರು ತಮ್ಮ ಅಂಪೈರಿಂಗ್‌ಗೆ ಪಾದಾರ್ಪಣೆ ಮಾಡಿದರು.
ಜೊತೆಗೆ ಈ ಪಂದ್ಯದ ಇನ್ನೊಂದು ವಿಶೇಷತೆ ಎಂದರೆ ಈ ಸರಣಿಯಿಂದ ಟಿವಿ ರಿವ್ಯೂವ್ ಮೂಲಕ ರನ್ ಔಟ್ ತೀರ್ಪು ನೀಡುವ ತಂತ್ರಜ್ಞಾನ ಕಾರ್ಯರೂಪಕ್ಕೆ ಬಂದಿತು.