ಕಲಬುರಗಿ: ‘ಅರೆ ಕಾಂಗ್ರೆಸ್ಸಿನ್ಯಾಗ ಯಾರ್ ಮನಿಮ್ಯಾಲೆ ಐಟಿ ರೇಡ್ ಆಗ್ತದೋ ಅವರಿಗೆ ಬೆಲೆ ಜಾಸ್ತಿ ಕೊಡ್ತರ‍್ರಿ.. ನನ್ನ ಹತ್ರ ರೊಕ್ಕಿಲ್ಲ.. ರೂಪಾಯಿ ಇಲ್ಲ. ನಮ್ಮನ್ಯಾರ‍್ರಿ ಕೇಳ್ತರ‍್ರಿ. ಆದ್ರೂ ನಾನೂ ಕಾಂಗ್ರೆಸ್‌ಗೆ ಪೂರ್ತಿ ಡೈವೋರ್ಸ್ ಕೊಟ್ಟಿಲ್ಲ’ ಎಂದು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ತಿಳಿಸಿದರು.
ಈ ಸಂಬಂಧ ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಮ್ಮದು ಇದೀಗ ಶಿವರಾತ್ರಿ ಮುಗದಾದ್. ಇನ್ನೂ 2 ರಾತ್ರಿ ಉಳದಾವು. ಮಾರ್ಚ್ 12ರ ಬಳಿಕ ಎಲ್ಲವನ್ನು ಬಹಿರಂಗ ಮಾಡ್ತೀನಿ. ಯಾರ ಜತೆ ಹೋಗ್ತಿನಿ, ಯಾವ ಪಕ್ಷ ಸೇರತೀನಿ ಎಲ್ಲ ಹೇಳ್ತೀನಿ,” ಎಂದು ತಮ್ಮದೇ ಶೈಲಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ನಗುನಗುತ್ತಲೇ ಕಾಂಗ್ರೆಸ್ ಒಳಗಿನ ಗುಂಪು ರಾಜಕಾರಣ, ವ್ಯಕ್ತಿ ಪ್ರತಿಷ್ಠೆ ಮತ್ತು ಕಾಲೆಳೆಯುವುದನ್ನು ಒಪ್ಪಿಕೊಂಡ ಇಬ್ರಾಹಿಂ, ಕಾಂಗ್ರೆಸ್ ತೊರೆಯಲು ಸಿದ್ದವಾಗಿರುವ ಕುರಿತು ಹೇಳಿಕೊಂಡರು.
“ಅಲ್ರಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ… ಶಿವಮೊಗ್ಗದಲ್ಲಿ ಕೊಲೆಯಾದ ಹಿಂದೂ ಕಾರ್ಯಕರ್ತ ಹರ್ಷನ ಕುಟುಂಬಕ್ಕೆ 25 ಲಕ್ಷ ರೂ. ಕೊಟ್ರಿ. ಬಜರಂಗದಳದವರು ಹಲ್ಲೆ ಮಾಡಿದ್ದಕ್ಕೆ ಸತ್ತು ಹೋಗಿರುವ ನರಗುಂದ ಸಾಬ್ರ (ಮುಸ್ಲಿಂ) ಹುಡುಗ ನಿಮ್ಮ ಕಣ್ಣಿಗೆ ಕಾಣಲಿಲ್ಲ. ಉಕ್ರೇನ್‌ದಾಗ ರಷ್ಯಾ ಬಾಂಬ್‌ಗೆ ಬಲಿಯಾದವರು ಕಾಣಲಿಲ್ಲ. ಇವರಿಗೆ ಒಂದೂ ನಯಾ ಪೈಸೆ ಕೊಟ್ಟಿಲ್ಲ. ನಿಮ್ಮದೆಂತಹ ಸರಕಾರ,” ಎಂದು ತರಾಟೆಗೆ ತೆಗೆದುಕೊಂಡರು.
ನಿಮ್ಮ ಬಿಜೆಪಿ ಶಾಸಕರೇ ಹೇಳ್ತಾರೆ, ಉಕ್ರೇನ್‌ದಿಂದ ವಿಮಾನದಲ್ಲಿ ಶವ ತರಲು ಜಾಗ ಇರಲಿಲ್ಲವಂತೆ. ಇದೆಂತಹ ಹೇಳಿಕೆ. ಇದನ್ನು ನಾನು ಖಂಡಿಸುತ್ತೇನೆ ಎಂದು ಹರಿಹಾಯ್ದರು.