ಮನೆ ಕಾನೂನು ನಕಲಿ ಚಿಕಿತ್ಸಕರ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕ್ರಮಕೈಗೊಳ್ಳಲು ಇದು ಸಕಾಲ: ಕರ್ನಾಟಕ ಹೈಕೋರ್ಟ್‌

ನಕಲಿ ಚಿಕಿತ್ಸಕರ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕ್ರಮಕೈಗೊಳ್ಳಲು ಇದು ಸಕಾಲ: ಕರ್ನಾಟಕ ಹೈಕೋರ್ಟ್‌

0

“ಸಾಮಾಜಿಕ ಜಾಲತಾಣದಲ್ಲಿ ಕಂಡುಬರುತ್ತಿರುವ ನಕಲಿ ಚಿಕಿತ್ಸಕರನ್ನು (ಥೆರಪಿಸ್ಟ್‌) ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ನಿಯಂತ್ರಣ ಕ್ರಮ ಜಾರಿಗೊಳಿಸಲು ಇದು ಸಕಾಲ” ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಹೇಳಿದ್ದು, ಥೆರಪಿಸ್ಟ್‌ ಒಬ್ಬರ ವಿರುದ್ಧದ ವಿಚಾರಣಾಧೀನ ನ್ಯಾಯಾಲಯದಲ್ಲಿನ ಪ್ರಕ್ರಿಯೆ ವಜಾ ಮಾಡಲು ನಿರಾಕರಿಸಿದೆ.

ಬೆಂಗಳೂರಿನ ಸಂಜನಾ ಫರ್ನಾಂಡೀಸ್‌ ಅಲಿಯಾಸ್‌ ರವೀರಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ‘ಕ್ಷೇಮ ಚಿಕಿತ್ಸೆ’ ಅನಾರೋಗ್ಯ ಉಂಟು ಮಾಡಿದೆ ಎಂದು ಅರ್ಜಿದಾರರು ಹೇಳಿದ್ದಾರೆ ಎಂದಿದೆ.

 “ಸಾಮಾಜಿಕ ಜಾಲತಾಣಗಳಾದ ಇನ್‌ಸ್ಟಾಗ್ರಾಂ, ಟ್ವಿಟರ್‌ ಅಥವಾ ಫೇಸ್‌ಬುಕ್‌ಗಳಲ್ಲಿ ವ್ಯಾಪಕವಾಗಿ ಥೆರಪಿ ಮತ್ತು ಥೆರಪಿಸ್ಟ್‌ಗಳ ಬಗ್ಗೆ ಪ್ರಚಾರ ಮಾಡಲಾಗುತ್ತಿದೆ. ಈ ಚಿಕಿತ್ಸಕರು ತಾವು ಚಿಕಿತ್ಸೆಯ ಕ್ಷೇತ್ರದಲ್ಲಿದ್ದೇವೆ ಎಂದು ಬಿಂಬಿಸಿಕೊಳ್ಳುತ್ತಾರೆ. ಇವರೆಲ್ಲರೂ ನಕಲಿ ಚಿಕಿತ್ಸಕರು ಎಂಬುದು ಸಾರ್ವಜನಿಕವಾಗಿದ್ದು, ಅವರೆಲ್ಲರೂ ಇನ್‌ಸ್ಪಾಗ್ರಾಂನಲ್ಲಿ ಪ್ರಭಾವಿಸುವವರಾಗಿದ್ದಾರೆ. ಹಾಲಿ ಪ್ರಕರಣವು ಮನೋದೈಹಿಕ ಥೆರಪಿ ಅಥವಾ ‘ಕ್ಷೇಮ ಚಿಕಿತ್ಸೆ’ಗೆ ಸಂಬಂಧಿಸಿದ್ದಾಗಿದೆ. ಈ ರೀತಿಯ ಥೆರಪಿಸ್ಟ್‌ಗಳು ಅಪಾರ ಪ್ರಮಾಣದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿದ್ದು, ಅವರಿಗೆ ಯಾವುದೇ ನೈತಿಕ ಚೌಕಟ್ಟಿಲ್ಲ ಹಾಗೂ ಯಾವುದೇ ನಿಬಂಧನೆಗೆ ಅವರು ಒಳಪಟ್ಟಿಲ್ಲ. ಈ ರೀತಿಯ ಪ್ರಕರಣಗಳು ವ್ಯಾಪಕವಾಗಿದ್ದು, ಯಾವುದೋ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಮುಂದಾಗುವ ಜನರು ನಕಲಿ ಥೆರಪಿಸ್ಟ್‌ಗಳ ಕೈಗೆ ಸಿಲುಕಿಕೊಳ್ಳುತ್ತಿದ್ದಾರೆ. ಹೀಗಾಗಿ, ನಕಲಿ ಥೆರಪಿಸ್ಟ್‌ಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ನಿಯಂತ್ರಣ ಕ್ರಮಕೈಗೊಳ್ಳಲು ಇದು ಸಕಾಲವಾಗಿದೆ” ಎಂದು ಪೀಠ ಆದೇಶದಲ್ಲಿ ಹೇಳಿದೆ.

ಘಟನೆ ಹಿನ್ನೆಲೆ: ದೂರುದಾರ ಬೆಂಗಳೂರಿನ ಮಲ್ಲೇಶ್ವರಂನ ಪಿ ಜೆ ಶಂಕರ್‌ ಗಣೇಶ್‌ ಅವರು ಐಟಿ ಉದ್ಯೋಗಿಯಾಗಿದ್ದಾರೆ. ಅರ್ಜಿದಾರೆ ಆರ್‌ ಟಿ ನಗರದ ಸಂಜನಾ ಮತ್ತು ಶಂಕರ್‌ ಅವರು ಡೇಟಿಂಗ್‌ ಅಪ್ಲಿಕೇಶನ್‌ ಆದ ʼಟಿಂಡರ್‌ʼ ಮೂಲಕ ಪರಿಚಿತರಾಗಿದ್ದರು. ಹೀಗೆ ಚಾಟ್‌ ಮಾಡುತ್ತಿರಬೇಕಾದರೆ ಶಂಕರ್‌ ಅವರು ತೀರಾ ಒತ್ತಡಕ್ಕೆ ಒಳಗಾಗಿರುವುದಾಗಿ ಸಂಜನಾಗೆ ತಿಳಿಸಿದ್ದರು. ಆಗ ಆಕೆಯು ಇನ್‌ಸ್ಟಾಗ್ರಾಂನಲ್ಲಿ ʼಪಾಸಿಟಿವಿಟಿ ಫಾರ್‌ ಎ 360 ಲೈಫ್‌ʼ ಎಂಬ ಪೇಜ್‌ ಹೊಂದಿದ್ದು, ತಾನು ಕ್ಷೇಮ ಚಿಕಿತ್ಸಕಿ ಎಂದು ಹೇಳಿಕೊಂಡಿದ್ದರು. ಮಿದುಳು, ದೇಹ ಮತ್ತು ಮನಸ್ಸಿನ ಆರೋಗ್ಯ ವೃದ್ಧಿಸಲು ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದರು.

ಥೆರಪಿಸ್ಟ್‌ ಆಗಿ ಸಂಜನಾ ಅನುಭವ ಹೇಳಿಕೊಂಡಿದ್ದರಿಂದ ಅವರಲ್ಲಿ ಶಂಕರ್‌ ಸಲಹೆ ಪಡೆದಿದ್ದರು. ಇದಕ್ಕೆ ಪ್ರತಿ ಬಾರಿ ಹಣ ಪಾವತಿಸಿದ್ದರು. ಅಂತೆಯೇ ಒಟ್ಟಾರೆ 3.15 ಲಕ್ಷ ರೂಪಾಯಿಯನ್ನು ಅವರು ಸಂಜನಾ ಖಾತೆಗೆ ವರ್ಗಾವಣೆ ಮಾಡಿದ್ದರು. ಇದು ಕೋವಿಡ್‌ನಿಂದ ಲಾಕ್‌ಡೌನ್‌ ಘೋಷಣೆಯಾಗುವವರೆಗೆ ಮುಂದುವರಿದಿತ್ತು. ಇದೆಲ್ಲವೂ ಇನ್‌ಸ್ಟಾಗ್ರಾಂ ಮೂಲಕವೇ ನಡೆದಿತ್ತು. ಒಮ್ಮೆ ಶಂಕರ್‌ ಅವರು ಸಂಜನಾ ಭೇಟಿ ಮಾಡಬೇಕು ಎಂದಾಗ ಕ್ಷೇಮ ಥೆರಪಿ ಹಳಿ ತಪ್ಪಿತ್ತು. ಸಂಜನಾ ಮೇಲೆ ಒಲವು ಬೆಳೆಸಿಕೊಂಡಿದ್ದ ಶಂಕರ್‌ ಅವರು ಅಸಭ್ಯ ಸಂದೇಶಗಳನ್ನು ಹಂಚಿಕೊಳ್ಳಲು ಆರಂಭಿಸಿದ್ದರು. ಈ ಹಿನ್ನೆಲೆಯಲ್ಲಿ ಶಂಕರ್‌ ಅವರನ್ನು ಇನ್‌ಸ್ಟಾಗ್ರಾಂನಲ್ಲಿ ಸಂಜನಾ ನಿರ್ಬಂಧಿಸಿದ್ದರು.

ಇದರಿಂದ ಕೆರಳಿದ ಶಂಕರ್‌ ಅವರು ಸಂಜನಾ ಮತ್ತು ಆಕೆ ನೀಡುತ್ತಿರುವ ಥೆರಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು, ಸಂಜನಾ 15 ಇನ್‌ಸ್ಟಾಗ್ರಾಂ ಖಾತೆಗಳನ್ನು ಹೊಂದಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿತ್ತು. ಇದನ್ನು ಆಧರಿಸಿ ಶಂಕರ್‌ ಅವರು ವಂಚನೆ ಮತ್ತು ಐಟಿ ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಪೊಲೀಸರು ಆರೋಪ ಪಟ್ಟಿಯನ್ನೂ ಕಳೆದ ವರ್ಷದ ಆಗಸ್ಟ್‌ನಲ್ಲಿ ಸಲ್ಲಿಸಿದ್ದಾರೆ. ಇದನ್ನು ವಜಾ ಮಾಡುವಂತೆ ಕೋರಿ ಸಂಜನಾ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.