ಮನೆ ಸುದ್ದಿ ಜಾಲ ಲಸಿಕೆಯ ಪರಿಣಾಮ ಶೇ.80ಕ್ಕಿಂತ ಹೆಚ್ಚು ಸಾವು ನಿಯಂತ್ರಣಕ್ಕೆ; ತೈವಾನ್‌ ನಲ್ಲಿ ಒಂದೇ ದಿನ 10,000ಕ್ಕೂ ಕೋವಿಡ್‌...

ಲಸಿಕೆಯ ಪರಿಣಾಮ ಶೇ.80ಕ್ಕಿಂತ ಹೆಚ್ಚು ಸಾವು ನಿಯಂತ್ರಣಕ್ಕೆ; ತೈವಾನ್‌ ನಲ್ಲಿ ಒಂದೇ ದಿನ 10,000ಕ್ಕೂ ಕೋವಿಡ್‌ ಪಾಸಿಟಿವ್‌

0

ವಾಷಿಂಗ್ಟನ್ (Washington)-ಲಸಿಕೆಯ ಪರಿಣಾಮ ಕೋವಿಡ್‌ನಿಂದ ಸಂಭವಿಸಬಹುದಾಗಿದ್ದ ಶೇ.80ಕ್ಕಿಂತ ಹೆಚ್ಚು ಸಾವುಗಳು ನಿಯಂತ್ರಣಕ್ಕೆ ಬಂದಿವೆ ಎಂದು ಅಮೆರಿಕದ ಅಧ್ಯಯನ ವರದಿಯೊಂದರಿಂದ ತಿಳಿದುಬಂದಿದೆ.

ಅಮೆರಿಕದ 48 ರಾಜ್ಯಗಳು ಮತ್ತು 2558 ಕೌಂಟಿಗಳನ್ನು ಒಳಗೊಂಡ ಈ ಅಧ್ಯಯನದಲ್ಲಿ ಲಸಿಕೆ ಪಡೆಯದ ಕೌಂಟಿಗಳಿಗೆ ಹೋಲಿಸಿದರೆ, ಲಸಿಕೆ ಪಡೆದ ಕೌಂಟಿಗಳಲ್ಲಿ ಸಾವಿನ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಿದೆ ಎಂದು ಉಲ್ಲೇಖಿಸಲಾಗಿದೆ.

2022ರ ಏಪ್ರಿಲ್ 11ರವರೆಗೆ ಜಾಗತಿಕವಾಗಿ 1,100 ಕೋಟಿ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ. 2022ರ ಮಧ್ಯಂತರ ಅವಧಿ ವೇಳೆಗೆ ವಿಶ್ವದ ಒಟ್ಟಾರೆ ಜನಸಂಖ್ಯೆಯ ಪೈಕಿ ಶೇ 70ರಷ್ಟು ಮಂದಿಗೆ ಲಸಿಕೆ ನೀಡುವುದು ವಿಶ್ವ ಆರೋಗ್ಯ ಸಂಸ್ಥೆಯ ಗುರಿಯಾಗಿದೆ.

ಇನ್ನು ತೈವಾನ್ ದೇಶದಲ್ಲಿ ಗುರುವಾರ ಒಂದೇ ದಿನ 10,000ಕ್ಕೂ ಹೆಚ್ಚು ಮಂದಿಗೆ ಕೊರೊನಾ ವೈರಸ್ ದೃಢಪಟ್ಟಿದೆ. ದೇಶದಲ್ಲಿ ಶೂನ್ಯ ಕೋವಿಡ್ ನಿಯಮದಿಂದ ಸರ್ಕಾರ ಹಿಂದೆ ಸರಿದ ಬಳಿಕ ಇದೇ ಮೊದಲ ಬಾರಿಗೆ ಇಷ್ಟು ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಅಲ್ಲದೆ ಒಂದು ವಾರದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 37,000ಕ್ಕಿಂತ ಹೆಚ್ಚಾಗಲಿದೆ ಎಂದು ಆರೋಗ್ಯ ಸಚಿವಾಲಯ ಎಚ್ಚರಿಕೆ ನೀಡಿದೆ.

ಈ ವರ್ಷದ ಜನವರಿ 1ರಿಂದ ಈವರೆಗೆ 51,504 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಇದರಲ್ಲಿ ಶೇ. 99.7ರಷ್ಟು ಮಂದಿ ಸೌಮ್ಯ ಪ್ರಮಾಣದ ಅಥವಾ ಲಕ್ಷಣ ರಹಿತ ಸೋಂಕಿತರಾಗಿದ್ದಾರೆ ಎಂದು ತೈವಾನ್ ಆರೋಗ್ಯ ಇಲಾಖೆ ಹೇಳಿದೆ.

ಏಷ್ಯಾದ ಕೆಲವು ದೇಶಗಳಲ್ಲಿ ಕೊರೊನಾ ವೈರಸ್ ಹಾವಳಿ ಮತ್ತೆ ಹೆಚ್ಚಾಗಿರುವ ಬೆನ್ನಲ್ಲೇ, ಲ್ಯಾಟಿನ್ ಅಮೆರಿಕದ ದೇಶಗಳಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಹೇರಲಾಗಿದ್ದ ಬಿಗಿ ಕ್ರಮಗಳನ್ನು ಸಡಿಲಗೊಳಿಸಲು ನಿರ್ಧರಿಸಲಾಗಿದೆ.

ಎರಡು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ದಕ್ಷಿಣ ಅಮೆರಿಕದ ಚಿಲಿ ದೇಶವು ಮುಂದಿನ ವಾರದಲ್ಲಿ ತನ್ನೆಲ್ಲಾ ಗಡಿಗಳನ್ನು ಮುಕ್ತಗೊಳಿಸಲು ನಿರ್ಧರಿಸಿದೆ. ಕೊರೊನಾ ಸಾಂಕ್ರಮಿಕ ಅಂತ್ಯವಾಗಿದೆ ಎಂದು ಮೆಕ್ಸಿಕೊ ಅಧ್ಯಕ್ಷರು ಘೋಷಿಸಿದ್ದಾರೆ. ಅಲ್ಲದೆ ಲ್ಯಾಟಿನ್ ಅಮೆರಿಕದ ದೇಶಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂಬುದು ಸೇರಿದಂತೆ ಕೋವಿಡ್ ನಿಯಮಗಳನ್ನು ಸಡಿಲಗೊಳಿಸಲಾಗುತ್ತಿದೆ.

ಹಿಂದಿನ ಲೇಖನದೆಹಲಿ ಆಡಳಿತಾತ್ಮಕ ಸೇವೆಗಳ ನಿಯಂತ್ರಣ ವಿವಾದ: ಸಾಂವಿಧಾನಿಕ ಪೀಠಕ್ಕೆ ವಹಿಸುವ ಬಗ್ಗೆ ಶೀಘ್ರ ನಿರ್ಧಾರ; ಸುಪ್ರೀಂ ಕೋರ್ಟ್‌
ಮುಂದಿನ ಲೇಖನಶ್ವಾನದೊಂದಿಗೆ ವ್ಯಕ್ತಿಯ ಡ್ಯಾನ್ಸ್: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್