ಮನೆ ರಾಜ್ಯ ಆ.28 ರಂದು ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಸಮಾರಂಭ

ಆ.28 ರಂದು ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಸಮಾರಂಭ

0

ಬೆಂಗಳೂರು (Bengaluru): ಪ್ರವೀಣ್‌ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ ರದ್ದುಗೊಂಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಒಂದು ವರ್ಷದ ಜನೋತ್ಸವ ಸಮಾರಂಭ ಆ.28 ರಂದು ನಡೆಯಲಿದೆ.

ಆಗಸ್ಟ್ 28 ಕ್ಕೆ ದೊಡ್ಡಬಳ್ಳಾಪುರದಲ್ಲಿ ಸರ್ಕಾರದ ಸಾಧನೆಯ ಜನೋತ್ಸವವನ್ನು ಆಚರಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಸಾಧನೆಯನ್ನು ಜನರಿಗೆ ತಲುಪಿಸಲು ರಾಜ್ಯದ ಐದು ಕಡೆಗಳಲ್ಲಿ ಜನೋತ್ಸವ ನಡೆಸಲಾಗುವುದು‌. ಜುಲೈ 28ಕ್ಕೆ ಆಗಬೇಕಿದ್ದ ಜನೋತ್ಸವವನ್ನು ಅನಿವಾರ್ಯ ಕಾರಣಗಳಿಂದ ರದ್ದು ಮಾಡಲಾಗಿತ್ತು. 10-15 ದಿನಗಳಿಂದ ಈ ಭಾಗದ ಜನರ ಒತ್ತಾಯ ಹೆಚ್ಚಾಗಿದೆ. ಬೇರೆ ಕಡೆ ಸಮಾವೇಶ ಮಾಡಲು ಜನ ಒಪ್ಪಲಿಲ್ಲ. ನಾವು ಸಾಕಷ್ಟು ತಯಾರಿ ನಡೆಸಿದ್ದು ದೊಡ್ಡಬಳ್ಳಾಪುರದಿಂದಲೇ  ಜನೋತ್ಸವ ಪ್ರಾರಂಭವಾಗಬೇಕು. ಇಲ್ಲಿಂದಲೇ ಜನೋತ್ಸವ ಆರಂಭ ಆಗಲಿ ಎಂದು ನಮಗಿಂತಲೂ ಹೆಚ್ಚಿನ ದೃಢ ನಿರ್ಧಾರ ಅವರದಾಗಿದೆ. ಅವರ ಉತ್ಸಾಹ ನಿರ್ಣಯಕ್ಕೆ ತಲೆಬಾಗಿ ಈ ತೀರ್ಮಾನಕ್ಕೆ ಬಂದಿದ್ದೇವೆ ಎಂದರು.

ಇನ್ನು ಏಳು ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು ಅದನ್ನು ಗಮನದಲ್ಲಿಟ್ಟುಕೊಂಡು ಜನೋತ್ಸವ ಸಮಾವೇಶವನ್ನು ಬಿಜೆಪಿ ನಡೆಸುವ ಸಾಧ್ಯತೆಯಿದೆ. ಕಾರ್ಯಕ್ರಮದಲ್ಲಿ ಕೇಂದ್ರದ ನಾಯಕರು ಭಾಗವಹಿಸಲಿದ್ದಾರೆ. ಇತ್ತೀಚೆಗೆ ದಾವಣಗೆರೆಯಲ್ಲಿ ಕಾಂಗ್ರೆಸ್ ವತಿಯಿಂದ ನಡೆದ ಸಿದ್ದರಾಮಯ್ಯನವರ ಅಮೃತ ಮಹೋತ್ಸವ ಕಾರ್ಯಕ್ರಮ ಯಶಸ್ವಿಯಾಗಿದೆ. ಇದಕ್ಕೆ ಕೌಂಟರ್ ಕೊಡಲು ಬಿಜೆಪಿ ಜನೋತ್ಸವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸುವ ಸಾಧ್ಯತೆಯಿದೆ.

ಹಿಂದಿನ ಲೇಖನಕೋವಿಡ್:‌ ದೇಶದಲ್ಲಿ 14,092 ಹೊಸ ಪ್ರಕರಣ ವರದಿ
ಮುಂದಿನ ಲೇಖನಸ್ವಾತಂತ್ರ್ಯ ಹೋರಾಟಗಾರರ ಜಾಹೀರಾತಿನಲ್ಲಿ ನೆಹರೂ ಅವರನ್ನು ಕೈ ಬಿಟ್ಟ ಸರ್ಕಾರ: ಆಕ್ರೋಶ ವ್ಯಕ್ತ