ಮನೆ ರಾಜಕೀಯ ಜೆಡಿಎಸ್ ಬಿಜೆಪಿಯನ್ನು ಸ್ಪಷ್ಟವಾಗಿ ವಿರೋಧಿಸುತ್ತಿಲ್ಲ: ವೈಎಸ್ ವಿ ದತ್ತ

ಜೆಡಿಎಸ್ ಬಿಜೆಪಿಯನ್ನು ಸ್ಪಷ್ಟವಾಗಿ ವಿರೋಧಿಸುತ್ತಿಲ್ಲ: ವೈಎಸ್ ವಿ ದತ್ತ

0

ಬೆಂಗಳೂರು: ಜೆಡಿಎಸ್ ಪಕ್ಷ ಬಿಜೆಪಿಯನ್ನು ಸ್ಪಷ್ಟವಾಗಿ ವಿರೋಧ ಮಾಡುತ್ತಿಲ್ಲ ಎಂಬ ಅಭಿಪ್ರಾಯ ಅಲ್ಪಸಂಖ್ಯಾತ, ಹಿಂದುಳಿದವರಲ್ಲಿದೆ ಎಂದು ಮಾಜಿ ಶಾಸಕ ವೈಎಸ್ ವಿ ದತ್ತ ಪರೋಕ್ಷವಾಗಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ವಿಧಾನಸೌಧದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಒಳಗಡೆ ಸ್ಪಷ್ಟವಾದ ಸೈದ್ದಾಂತಿಕ ನಿಲುವು ಬೇಕು. ಅದು ಕಾಲಕಾಲಕ್ಕೆ ಬದಲಾಗಬಾರದು. ಇದನ್ನು ಪಕ್ಷದ ಒಳಗೂ ಹೊರಗೂ ಹೇಳಿದ್ದೇನೆ. ಪಕ್ಷದಲ್ಲಿ ನಿರಂತರತೆ, ಸ್ಪಷ್ಟವಾದ ನಿಲುವು ಇರಬೇಕು. ರಾಷ್ಟ್ರೀಯ ಪಕ್ಷಗಳ ನಡುವೆ ಸಮಾನ ಅಂತರ ಕಾಯಬೇಕು, ಜಾತ್ಯಾತೀತ,ಸಾಮಾಜಿಕ ನ್ಯಾಯ ನಿಲುವು ಇರಬೇಕು ಎಂಬ ಕಾರಣಕ್ಕೆ ಪಕ್ಷದಲ್ಲಿ ಹಲವು ವರ್ಷಗಳಿಂದ ಇದ್ದೇನೆ. ಆದರೆ ಈ ನಿಲುವು ಎಲ್ಲೋ ಒಂದು ಕಡೆ ಶಿಥಿಲವಾಗುತ್ತಿದೆ ಎಂದು ಮತದಾರರಲ್ಲಿ ಗೊಂದಲ ಉಂಟು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆದರೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ವಿಚಾರವಾಗಿ ಕ್ಲಿಯರ್ ಕಟ್ ಇದೆ, ನೋ ಡೌಟ್. ಅವರು ಎಲ್ಲಾ ಕಾಲದಲ್ಲಿ ಸೆಕ್ಯೂಲರ್ ಆಗಿ ಎಲ್ಲ ಕಾಲದಲ್ಲಿ ಓಪನ್ ನಿರ್ಧಾರ ಕೈಗೊಂಡಿದ್ದಾರೆ. ನಮಗೂ ಈಗಲೂ ದೇವೇಗೌಡರ ಮೇಲೆ ಆಶಾಭಾವನೆ ಇದೆ ಎಂದರು.

ರಾಗಿ ಬೆಳೆ ಖರೀದಿ ಕಡಿತಕ್ಕೆ ಆಕ್ರೋಶ: ಸರ್ಕಾರ ಯಾವುದೇ ಮುನ್ಸೂಚನೆ ನೀಡದೆ ರಾಜ್ಯದ ಒಟ್ಟು ರಾಗಿ ಖರೀದಿ ಪ್ರಮಾಣದಲ್ಲಿ ಶೇ 30 ರಷ್ಟು ಮಾತ್ರ ಖರೀದಿಸಲು ಆದೇಶ ನೀಡಿದ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದರು‌.

ಸರ್ಕಾರದ ಆದೇಶದಿಂದ ಕರ್ನಾಟಕ ರಾಜ್ಯದ ಬಯಲು ಸೀಮೆಯ ರಾಗಿ ಬೆಳೆಗಾರರಿಗೆ ಸಮಸ್ಯೆ ಆಗುತ್ತಿದೆ. ರಾಗಿ ಬೆಳೆಗಾರ ರೈತರು ಕಷ್ಟದಲ್ಲಿದ್ದಾರೆ. ಕ್ಷೇತ್ರದಲ್ಲಿ ಈಗಾಗಲೇ ಪ್ರತಿಭಟನೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳಲ್ಲಿ ಪ್ರಶ್ನಿಸಿದರೆ ಸರ್ಕಾರ ಆದೇಶ, ಬೆಂಗಳೂರಿನಲ್ಲಿ ಬದಲಾವಣೆ ಮಾಡಿ ಎಂದು ಹೇಳುತ್ತಾರೆ ಎಂದರು.

ಸಣ್ಣ ರೈತರಿಂದ 20 ಕ್ವಿಂಟಾಲ್ ಮಾತ್ರ ಖರೀದಿ ಮಾಡುತ್ತೇವೆ ಎಂದು ಸರ್ಕಾರ ಆದೇಶ ಮಾಡಿದೆ. ಇದರಿಂದ ರೈತರು ಸಂಕಷ್ಟದಲ್ಲಿ ಅನುಭವಿಸುವಂತಾಗಿದೆ. ಹೀಗಾದರೆ ರೈತರು ಬೆಳೆದ ಉಳಿದ ರಾಗಿಯನ್ನು ಏನು ಮಾಡಬೇಕು? ಎಂದು ಪ್ರಶ್ನಿಸಿದ ಅವರು, ಸರ್ಕಾರದ ಆದೇಶವನ್ನು ಹಿಂಪಡೆಯಬೇಕು. ಎಲ್ಲ ರೈತರಿಂದ ಕಳೆದ ವರ್ಷದಂತೆ ಗರಿಷ್ಠ 50 ಕ್ವಿಂಟಾಲ್ ಖರೀದಿಸಲು ಅವಕಾಶ ನೀಡಬೇಕು. ಹಾಗೂ ರಾಗಿ ಬೆಳೆದ ಎಲ್ಲ ರೈತರಿಂದ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸಲು ಸರ್ಕಾರ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಹಿಂದಿನ ಲೇಖನಐಪಿಎಲ್​ 2022 : ತಂಡದ ಅಧಿಕೃತ ಹೆಸರನ್ನು ಖಚಿತಪಡಿಸಿದ ಅಹ್ಮದಾಬಾದ್​ ಫ್ರಾಂಚೈಸಿ
ಮುಂದಿನ ಲೇಖನಎಲ್ಲಾ ಇಲಾಖೆಗಳಲ್ಲಿ ನಗದು ನಿರ್ವಹಣೆ `ವಹಿ’ ಘೋಷಿಸಲು ಸೂಚನೆ