ಮೈಸೂರು: ಬಾಲ ಕಾರ್ಮಿಕ ಮತ್ತು ಕಿಶೋರಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆಯನ್ವಯ ನೇಮಕಗೊಂಡಿರುವ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮೈಸೂರು ಜಿಲ್ಲೆಯನ್ನು ‘ಬಾಲಕಾರ್ಮಿಕ ಮುಕ್ತ ಜಿಲ್ಲೆ’ಯನ್ನಾಗಿಸುವಲ್ಲಿ ಕೈ ಜೋಡಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಜಿ. ಲಕ್ಷ್ಮೀಕಾಂತ ರೆಡ್ಡಿ ಅವರು ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಡಿ.9 ರಂದು ಮೈಸೂರು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿ ಸಭೆ ಹಾಗೂ ಕಾರ್ಯ ಪಡೆ (ಟಾಸ್ಕ್ ಫೋರ್ಸ್) ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೈಸೂರು ಜಿಲ್ಲೆಯನ್ನು ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸುವ ಸಲುವಾಗಿ ಗ್ಯಾರೇಜುಗಳು, ಗುಜರಿ, ಕಸ ವಿಲೇವಾರಿ ಘಟಕ ಮುಂತಾದ ಬಾಲ/ಕಿಶೋರ ಕಾರ್ಮಿಕರು ಹೆಚ್ಚಾಗಿ ಕಂಡುಬರುವಂತಹ ಸ್ಥಳಗಳಲ್ಲಿ ಹೆಚ್ಚು ತಪಾಸಣೆ ನಡೆಸಿ ದುಡಿಮೆಯಲ್ಲಿ ತೊಡಗಿರುವ ಬಾಲ ಮತ್ತು ಕಿಶೋರ ಕಾರ್ಮಿಕರನ್ನು ರಕ್ಷಿಸಿ ಪುನರ್ವಸತಿಗೊಳಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಅವರು ಸೂಚಿಸಿದರು.
ವಲಸೆ ಕಾರ್ಮಿಕರ ಜೊತೆ ಬಂದಿರುವ ಮಕ್ಕಳು ಶಿಕ್ಷಣದಿಂದ ವಂಚಿತರಾಗಿರುತ್ತಾರೆ. ಅಂತಹ ಮಕ್ಕಳು ಶಿಕ್ಷಣ ಪಡೆಯುವ ಸಲುವಾಗಿ ಕಾರ್ಮಿಕ ಇಲಾಖೆಯೊಂದಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಶಿಕ್ಷಣ ಇಲಾಖೆಗಳು ಸಹಭಾಗಿತ್ವ ವಹಿಸಿ ಮಕ್ಕಳನ್ನು ಟೆಂಟ್ ಶಾಲೆ ಅಥವಾ ಅಂಗನವಾಡಿ ಕೇಂದ್ರಗಳಿಗೆ ಮಕ್ಕಳನ್ನು ದಾಖಲಿಸಲು ಸೂಚಿಸಿದರು.
ಬಾಲಕಾರ್ಮಿಕ /ಕಿಶೋರಕಾರ್ಮಿಕ (ನಿಷೇಧ ಹಾಗೂ ನಿಯಂತ್ರಣ)ಕಾಯ್ದೆ 1986 ರಡಿ ಬಾಲಕಾರ್ಮಿಕತೆ ನಿರ್ಮೂಲನೆ ಕುರಿತಂತೆ ಜಿಲ್ಲಾವಾರು ಹಾಗೂ ತಾಲ್ಲೂಕುವಾರು ಅರಿವು ಕಾರ್ಯಕ್ರಮಗಳನ್ನು ಎಲ್ಲಾ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಲು ಅಗತ್ಯ ಕ್ರಮ ಬೇಕು ಎಂದು ಅವರು ತಿಳಿಸಿದರು.
2024-25 ನೇ ಸಾಲಿನಲ್ಲಿ ಒಟ್ಟು 832 ತಪಾಸಣೆಗಳು, 40 ಬಾಲ/ಕಿಶೋರಕಾರ್ಮಿಕರು ಪತ್ತೆಯಾಗಿದ್ದು, ಪೊಲೀಸ್ ಠಾಣೆಯಲ್ಲಿ ಬಾಲ/ಕಿಶೋರಕಾರ್ಮಿಕರನ್ನು ನೇಮಿಸಿಕೊಂಡ ಮಾಲೀಕರ ವಿರುದ್ದ 06 ಪ್ರಕರಣಗಳಲ್ಲಿ ಎಫ್.ಐ.ಆರ್ ಆಗಿದ್ದು, 16 ಪ್ರಕರಣಗಳಲ್ಲಿ ಘನ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗಿರುತ್ತದೆ.
ಸಭೆಯಲ್ಲಿ ಪೊಲೀಸ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ಸ್ಥಳೀಯ ಸರ್ಕಾರೇತರ ಸಂಸ್ಥೆಯ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.