ಬೆಂಗಳೂರು (Bengaluru): ಕ್ರಿಕೆಟಿಗ ಕೆ.ಎಲ್.ರಾಹುಲ್ ಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಿಂದಾಗಿ ಅವರು ಮುಂಬರಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ.
ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಪುನಶ್ಚೇತನ ಶಿಬಿರದಲ್ಲಿರುವ ರಾಹುಲ್, ಅವರಲ್ಲಿ ಕೋವಿಡ್-19 ಸೋಂಕು ಪತ್ತೆಯಾಗಿದೆ. ಸದ್ಯ ಕ್ವಾರಂಟೈನ್ ನಲ್ಲಿರುವ ರಾಹುಲ್ ವೈದ್ಯರ ಸಲಹೆ-ಸೂಚನೆಗಳನ್ನು ಆಧರಿಸಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ತೊಡೆ ಸಂಧು ನೋವಿನ ಕಾರಣ ಕಳೆದ ತಿಂಗಳು ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಕ್ರಿಕೆಟ್ ಸರಣಿಯ ಮೊದಲ ಪಂದ್ಯಕ್ಕೂ ಹಿಂದಿನ ದಿನ ಭಾರತ ತಂಡದಿಂದ ಹೊರಗುಳಿದ ರಾಹುಲ್, ನಂತರ ಜರ್ಮನಿಗೆ ತೆರಳಿ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರು. ನಂತರ ಅಲ್ಲಿಂದ ಬೆಂಗಳೂರಿಗೆ ಆಗಮನಿಸಿ ಪುನಶ್ಚೇತನ ಶಿಬಿರಕ್ಕೆ ಒಳಪಟ್ಟಿದ್ದರು. ವೆಸ್ಟ್ ಇಂಡೀಸ್ ವಿರುದ್ಧ ಜುಲೈ 29ರಂದು ಶುರುವಾಗಲಿರುವ ಟಿ20 ಕ್ರಿಕೆಟ್ ಸರಣಿ ಹೊತ್ತಿಗೆ ಭಾರತ ತಂಡ ಸೇರಲು ಎದುರು ನೋಡುತ್ತಿದ್ದ ಸ್ಟಾರ್ ಓಪನರ್ ರಾಹುಲ್ ಇದೀಗ ಕೋವಿಡ್ ಸೋಂಕಿನಿಂದಾಗಿ ಸರಣಿಯಿಂದ ಹೊರಗುಳಿಯುವಂತಾಗಿದೆ.
ಇದೀಗ ರಾಹುಲ್ ಆಗಸ್ಟ್‌ನಲ್ಲಿ ನಡೆಯಲಿರುವ ಜಿಂಬಾಬ್ವೆ ಪ್ರವಾಸದಲ್ಲಿನ ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಗಳಲ್ಲಿ ಭಾರತ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ. ಇದಾದ ಬಳಿಕ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸೇವೆಗೆ ಹಾಜರಾಗಲಿದ್ದಾರೆ. ಈ ನಡುವೆ ಫಿಟ್ನೆಸ್ ಟೆಸ್ಟ್ ತೆಗೆದುಕೊಂಡ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್, ವಿಂಡೀಸ್ ಪ್ರವಾಸ ಕೈಗೊಳ್ಳಲು ಸಜ್ಜಾಗಿದ್ದಾರೆ.