ಮನೆ ಕಾನೂನು ಕನ್ನಡ ಭಾಷಾ ಮಾಧ್ಯಮ ಬಡ್ತಿ: ನಿವೃತ್ತ ಪ್ರಾಥಮಿಕ ಶಾಲಾ ಶಿಕ್ಷಕಿಗೆ ನೀಡಬೇಕಾದ ವೇತನ ಬಡ್ತಿಗೆ ಆದೇಶಿಸಿದ...

ಕನ್ನಡ ಭಾಷಾ ಮಾಧ್ಯಮ ಬಡ್ತಿ: ನಿವೃತ್ತ ಪ್ರಾಥಮಿಕ ಶಾಲಾ ಶಿಕ್ಷಕಿಗೆ ನೀಡಬೇಕಾದ ವೇತನ ಬಡ್ತಿಗೆ ಆದೇಶಿಸಿದ ಹೈಕೋರ್ಟ್‌

0

ಎಸ್‌ ಎಸ್‌ ಎಲ್‌ ಸಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ್ದು ಪಠ್ಯಕ್ರಮದಲ್ಲಿ ಕನ್ನಡವನ್ನು ಒಂದು ವಿಷಯವನ್ನಾಗಿ ಅಧ್ಯಯನ ಮಾಡಿದ ಸರ್ಕಾರಿ ನೌಕರರಿಗೆ ನೀಡಬೇಕಾದ ಒಂದು ಅವಧಿಯ ವೇತನ ಬಡ್ತಿ (ಇನ್ಕ್ರಿಮೆಂಟ್) ನಿರಾಕರಿಸಿದ್ದ ರಾಜ್ಯ ಸರ್ಕಾರದ ಕ್ರಮಕ್ಕೆ ಈಚೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್, ಪಿಂಚಣಿದಾರರನ್ನು ರಾಜ್ಯ ಸರ್ಕಾರ ಸಹಾನುಭೂತಿಯಿಂದ ನಡೆಸಿಕೊಳ್ಳಬೇಕು, ನಗುಮೊಗದಿಂದ ಆಲಿಸಬೇಕು ಎಂದಿದೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ನಿವೃತ್ತ ಪ್ರಾಥಮಿಕ ಶಾಲಾ ಶಿಕ್ಷಕಿ ಸೀತಾಲಕ್ಷ್ಮಿ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಕೃಷ್ಣ ಎಸ್.ದೀಕ್ಷಿತ್ ಮತ್ತು ಜಿ ಬಸವರಾಜ ಅವರ ನೇತೃತ್ವದ ವಿಭಾಗೀಯ ಪೀಠವು ಪುರಸ್ಕರಿಸಿದೆ.

2018ರ ಫೆಬ್ರವರಿಯಿಂದ ಜಾರಿಗೆ ಬರುವಂತೆ ಅರ್ಜಿದಾರರಿಗೆ ಮುಂದಿನ ಮೂರು ತಿಂಗಳ ಒಳಗಾಗಿ ಒಂದು ಬಾರಿ ವೇತನ ಹೆಚ್ಚಳ ಮಂಜೂರು ಮಾಡುವಂತೆ ಮತ್ತು ಹೆಚ್ಚಳದ ಬಾಕಿ ಮೊತ್ತವನ್ನು ಪಾವತಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿದೆ. ಈ ಆದೇಶ ಜಾರಿಯಲ್ಲಿ ವಿಫಲವಾದಲ್ಲಿ ವಿಳಂಬವಾದ ಪ್ರತಿ ತಿಂಗಳಿಗೆ ಶೇ. 2ರ ದರದಲ್ಲಿ ಬಡ್ಡಿ ಸೇರಿಸಿ ಪಾವತಿಸಬೇಕು. ಆ ಬಡ್ಡಿ ಮೊತ್ತವನ್ನು ಸರ್ಕಾರವೇ ಮೊದಲು ಪಾವತಿ ಮಾಡಿ ಬಳಿಕ ವಿಳಂಬಕ್ಕೆ ಕಾರಣವಾದ ಅಧಿಕಾರಿಯಿಂದ ಸರ್ಕಾರ ವಸೂಲಿ ಮಾಡಿಕೊಳ್ಳಬೇಕು ಎಂದು ಪೀಠ ಹೇಳಿದೆ.

ಅರ್ಜಿದಾರರು 24.09.1980 ರಿಂದ 31.10.2019 ರವರೆಗೆ ಕಳಂಕ ರಹಿತವಾಗಿ ಸೇವೆ ಸಲ್ಲಿಸಿದ್ದಾರೆ. ಮೂರು ದಶಕಗಳಿಗೂ ಹೆಚ್ಚು ಕಾಲ ಆಕರ್ಷಕ ಸಂಬಳವಿಲ್ಲದೇ ಬಡ ಮಹಿಳೆ ಸೇವೆ ಸಲ್ಲಿಸಿದ್ದಾರೆ ಎಂಬ ಅಂಶವನ್ನು ನಾವು ಮರೆಯಲಾಗದು. ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಅವರು ವಿನಮ್ರವಾಗಿ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಬಹುಶಃ ಆಕೆ ʼಶಾಲಾ ಮಾತಾʼ ಆಗಿ ಅನೇಕ ಮಕ್ಕಳ ಭವಿಷ್ಯ ರೂಪಿಸಿದ್ದಾರೆ. ಸೇವೆಯಿಂದ ನಿವೃತ್ತರಾಗಿ, ಕಡಿಮೆ ಪಿಂಚಣಿ ಪಡೆಯುತ್ತಿದ್ದಾರೆ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿದೆ.

ಬದುಕಿನ ಇಳಿ ಸಂಜೆಯಲ್ಲಿ ವಯೋಸಹಜ ತೊಂದರೆಗಳು ಎದುರಾಗುತ್ತವೆ. ಇದನ್ನು ಹಣದ ಸಹಾಯದಿಂದ ತಗ್ಗಿಸಬಹುದು. ಯಾವುದೇ ಪರಿಹಾರವನ್ನು ಸಂಪೂರ್ಣವಾಗಿ ನಿರಾಕರಿಸುವುದರಿಂದ ಪಿಂಚಣಿದಾರರಿಗೆ ದೊಡ್ಡ ಅನ್ಯಾಯ ಮಾಡಿದಂತಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಶೈಕ್ಷಣಿಕ ಅರ್ಹತೆ ಕಾರಣದಿಂದ ತಮ್ಮ ಕಕ್ಷಿದಾರರಿಗೆ ಒಂದು ವೇತನ ಬಡ್ತಿ ನೀಡಬೇಕಾಗಿತ್ತು. ಅಂತಹ ಸೌಲಭ್ಯವನ್ನು ನಿರಾಕರಿಸಿರುವುದು ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗಿದೆ. ಸಂಬಳ ಮತ್ತು ವೇತನವಾಗಿ ಪಾವತಿಸಬೇಕಾದ ಹಣವು ಉದ್ಯೋಗಿಯ ಆಸ್ತಿಯಾಗಿರಲಿದೆ. ಆದ್ದರಿಂದ, ಈ ಮೊತ್ತ ಪಾವತಿಸದಿರುವುದು ಸಂವಿಧಾನದ 300ಎ ವಿಧಿಯಡಿ ಸಾಂವಿಧಾನಿಕ ಖಾತರಿಯ ಉಲ್ಲಂಘನೆಯಾಗಿದೆ ಎಂದು ವಾದಿಸಿದ್ದರು.

ಇದಕ್ಕೆ ಆಕ್ಷೇಪಿಸಿದ್ದ ಸರ್ಕಾರದ ವಕೀಲರು, ಅರ್ಜಿದಾರರು ಸಾಕಷ್ಟು ವಿಳಂಬವಾಗಿ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಧಿಕರಣದ ತೀರ್ಪು ಸರಿಯಾಗಿದ್ದು, ಅರ್ಜಿ ವಜಾಗೊಳಿಸಬೇಕು ಎಂದು ಮನವಿ ಮಾಡಿದ್ದರು.

ಪ್ರಕರಣದ ಹಿನ್ನೆಲೆ: ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನ ಸೀತಾಲಕ್ಷ್ಮಿ ಅವರು ಎಸ್‌ಎಸ್‌ಎಲ್‌ಸಿವರೆಗೆ ಕನ್ನಡ ಮಾಧ್ಯಮದಲ್ಲಿ ಕನ್ನಡ ಪಠ್ಯಕ್ರಮದಲ್ಲಿ ಒಂದು ವಿಷಯವಾಗಿ ಅಧ್ಯಯನ ಮಾಡಿದ್ದರು. ಸುಮಾರು ಮೂರು ದಶಕಗಳಿಗೂ ಹೆಚ್ಚು ಸೇವೆಯ ನಂತರ ಅವರು 2019ರ ಅಕ್ಟೋಬರ್ 31ರಂದು ಸೇವೆಯಿಂದ ನಿವೃತ್ತರಾಗಿದ್ದರು. ಅವರಿಗೆ ಕನ್ನಡ ಭಾಷೆಯಲ್ಲಿ ಅಧ್ಯಯನ ಮಾಡಿದ್ದ ಆಧಾರದಲ್ಲಿ ವೇತನದ ಬಡ್ತಿಯೊಂದನ್ನು (ಇನ್ಕ್ರಿಮೆಂಟ್) ಶಿಕ್ಷಣ ಇಲಾಖೆ ನೀಡಬೇಕು ಎಂಬ ನಿಯಮವಿತ್ತು. ಆದರೆ, ಇಲಾಖೆ ಅರ್ಜಿದಾರರ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿತ್ತು. ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಾಧಿಕರಣಕ್ಕೆ ಅವರು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಧಿಕರಣವು ಅರ್ಜಿಯನ್ನು ವಜಾಗೊಳಿಸಿತ್ತು ಈ ಆದೇಶ ಪ್ರಶ್ನಿಸಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು.