ಬೆಂಗಳೂರು: ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂವನ್ನು ಇಂದು ರಾಜ್ಯ ಸರ್ಕಾರ ಹಿಂಪಡೆದಿದೆ.
ಕೋವಿಡ್ ನಿಯಂತ್ರಣ ಸಂಬಂಧ ಪ್ರಸ್ತುತ ಇರುವ ಕೊರೊನಾ ಮಾರ್ಗಸೂಚಿಗಳಲ್ಲಿ ಬದಲಾವಣೆ ಹಾಗೂ ಇತರ ನಿರ್ಧಾರಗಳ ಕುರಿತು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಗೃಹಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಸಭೆಯಲ್ಲಿ ತಜ್ಞರು, ಅಧಿಕಾರಿಗಳು ಹಾಗೂ ಸಚಿವರು ಭಾಗಿಯಾಗಿದ್ದರು. ಸಚಿವರಾದ ಡಾ.ಕೆ ಸುಧಾಕರ್, ಆರಗ ಜ್ಞಾನೇಂದ್ರ, ಆರ್. ಅಶೋಕ್, ಗೋವಿಂದ್ ಕಾರಜೋಳ, ಬಿಸಿ ನಾಗೇಶ್ ಭಾಗಿಯಾಗಿದ್ದರು. ಅಂತೆಯೇ ವಿಶ್ವ ಆರೋಗ್ಯ ಸಂಸ್ಥೆಯ ಓರ್ವ ಪ್ರತಿನಿಧಿ, ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಸುದರ್ಶನ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಕೆಂಡ್ ಕರ್ಫ್ಯೂಗೆ ವಿರೋಧ ವ್ಯಕ್ತವಾಗಿತ್ತು: ಈ ಹಿಂದೆ ವೀಕೆಂಡ್, ನೈಟ್ ಕರ್ಫ್ಯೂಗೆ ಹಲವು ನಾಯಕರು, ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿತ್ತು. ಈ ಸಲಹೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಸಭೆಯಲ್ಲಿ ವೀಕೆಂಡ್ ಕರ್ಫ್ಯೂ ತೆರವಿಗೆ ತಜ್ಞರು ಶಿಫಾರಸು ಮಾಡಿದ್ದರು. ಕೊವಿಡ್ ಕಡಿಮೆ ಇರುವ ಜಿಲ್ಲೆಗಳಲ್ಲಿ 50:50 ರೂಲ್ಸ್ ಮಾಡಿ. ಕೊವಿಡ್ ಹೆಚ್ಚಿರುವ ಕಡೆ ನಿರ್ಬಂಧ ಅಗತ್ಯ. ಬೆಂಗಳೂರು ನಗರದಲ್ಲಿ ಕೊವಿಡ್ ಪಾಸಿಟಿವಿಟಿ ದರ ಹೆಚ್ಚಿದೆ. ಅಲ್ಲಿ ಕಟ್ಟೆಚ್ಚರ ಅಗತ್ಯ ಎಂದು ಟಿಎಸಿ ಅಧ್ಯಕ್ಷ ಡಾ.ಸುದರ್ಶನ್ ರಿಂದ ಸಭೆಯಲ್ಲಿ ವರದಿಯನ್ನು ಸಲ್ಲಿಸಲಾಗಿತ್ತು.