ಬದುಕಿನಲ್ಲಿ ಪ್ರತಿಯೊಬ್ಬರೂ ವಿಭಿನ್ನ ಹೆಸರುಗಳಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸುತ್ತಿರುತ್ತಾರೆ. ನಾವು ಯಾರದ್ದೋ ಮಗುವಾಗಿರುತ್ತೇವೆ, ಮತ್ಯಾರಿಗೋ ತಂದೆಯೋ, ತಾಯಿಯೋ ಆಗಿರುತ್ತೇವೆ, ಇನ್ನು ಕೆಲವರಿಗೆ ನಾವು ಸೋದರ ಸಂಬಂಧಿಗಳು, ಮತ್ತೆ ಕೆಲವರಿಗೆ ಅಣ್ಣ ತಂಗಿ, ಪತಿ -ಪತ್ನಿ, ವಿದ್ಯಾರ್ಥಿ ಗುರು… ಹೀಗೆ ಜೀವನದಲ್ಲಿ ವಿಭಿನ್ನ ಪಾತ್ರಗಳಲ್ಲಿ ವ್ಯವಹರಿಸುತ್ತಿರುತ್ತೇವೆ.
ಅಂತಹ ಪಾತ್ರಗಳನ್ನು ನಿರ್ವಹಿಸುವಾಗ ಕೆಲವೊಮ್ಮೆ ಖುಷಿ ಇರುತ್ತದೆ. ಇನ್ನು ಕೆಲವೊಮ್ಮೆ ಬೇಸರವೂ ಇರುತ್ತದೆ. ಆದರೂ ಅದರ ನಿರ್ವಹಣೆ ಮಾಡಬೇಕಿರುತ್ತದೆ. ಈ ಸಂಬಂಧಗಳು ಹಾಗೂ ಪಾತ್ರಗಳ ನಡುವೆ ನಮ್ಮನ್ನು ನಾವು ಅರಿತುಕೊಳ್ಳದೇ ಜೀವನ ಮುಗಿದು ಹೋಗುತ್ತಿರುತ್ತದೆ.
‘ನಾನು’ ಎಂಬುದು ಲೋಟದಲ್ಲಿನ ನೀರಿನ ಹಾಗೆ. ಅದು ಮನಸ್ಸು ಮತ್ತು ದೇಹದಿಂದ ಸುತ್ತುವರಿದಿದೆ. ಲೋಟವೆಂಬ ಬೇಲಿ ಒಡೆದು ಹೋದರೆ ಅದರಿಂದ ನೀರು ಸ್ವತಂತ್ರವಾಗಿ ಹೊರಗೆ ಹರಿದು ಹೋಗುತ್ತದೆ. ಕೆಲವೊಮ್ಮೆ ಏನೂ ಉಳಿಸದೆ ನೀರು ಆವಿಯಾಗಿ ಹೋಗುತ್ತದೆ ಕೂಡಾ. ಹಾಗೆಯೇ ಜೀವನ ಕೂಡಾ. ತನ್ನನ್ನು ತಾನು ಅರಿತುಕೊಳ್ಳುವುದು, ಸ್ವಯಂ ಸಾಕ್ಷಾತ್ಕಾರ ಎಂಬುದು ಅಂತಿಮವಾಗಿ ಇದೇ ಆಗಿದೆ. ಅಂದರೆ ಸ್ವತಂತ್ರವಾಗಿರುವುದೇ ಆಗಿದೆ. ಅದಕ್ಕೆ ತನ್ನೊಳಗಿನ ನಕಾರಾತ್ಮಕ ಅಂಶಗಳಿಂದ ಹೊರಬರುವುದು ಹಾಗೂ ಮನಸ್ಸನ್ನು ನಿಯಂತ್ರಣದಲ್ಲಿರಿಸಿಕೊಳ್ಳಬೇಕಾದುದು ಬಹಳ ಅಗತ್ಯ.
ಆತ್ಮ ಸಾಕ್ಷಾತ್ಕಾರ ಎಂದರೆ ಕುಟುಂಬ, ಗೆಳೆಯರು ಅಥವಾ ಶತ್ರುಗಳಿಂದ ದೂರ ಇರುವುದು ಎಂದರ್ಥವಲ್ಲ. ಸಾಕ್ಷಾತ್ಕಾರ ಎಂದರೆ ತನ್ನ ಹಾಗೂ ಇತರ ಎಲ್ಲಾ ಜೀವ ಸೃಷ್ಟಿಗಳ ನಡುವಿನ ವ್ಯತ್ಯಾಸ ಹಾಗೂ ಅಂತರವನ್ನು ಇಲ್ಲವಾಗಿಸುವುದು. ಎಲ್ಲರೊಳಗೊಂದಾಗುವುದು. ನಮ್ಮನ್ನು ನಾವು ಅರಿತುಕೊಳ್ಳುವುದರಿಂದ ವ್ಯಕ್ತಿತ್ವದಲ್ಲಿಯೂ ಬದಲಾವಣೆ ತಂದುಕೊಳ್ಳಬಹುದು.
ಸ್ವಾಮಿ ಸುಖಬೋಧಾನಂದ ಅವರು ತಮ್ಮದೊಂದು ಲೇಖನದಲ್ಲಿವ್ಯಕ್ತಿಯ ವ್ಯಕ್ತಿತ್ವ ಹೇಗಿರಬೇಕು ಎಂಬುದಕ್ಕೆ ಒಂದು ಉದಾಹರಣೆ ನೀಡುತ್ತಾರೆ. ಅದು ಈ ರೀತಿ ಇದೆ: ಮಲಿನಗೊಂಡಿರುವ ನೀರನ್ನು ಕುಡಿಯುವುದಕ್ಕೆ ಸಾಧ್ಯವಾಗದೇ ಇರಬಹುದು. ಆದರೆ ಅದನ್ನು ಹೊತ್ತಿ ಉರಿಯುತ್ತಿರುವ ಬೆಂಕಿಯನ್ನು ನಂದಿಸುವುದಕ್ಕೆ ಬಳಸಬಹುದು ಎಂದು. ಹಾಗಾಗಿ ಈ ಪ್ರಪಂಚದಲ್ಲಿ ಬಳಕೆಗೆ ಬರದೇ ಸಂಪೂರ್ಣ ವೇಸ್ಟ್ ಅಂತನ್ನಿಸಿಕೊಳ್ಳುವಂತಹದ್ದು ಯಾವುದೂ ಇಲ್ಲ ಎಂದು. ಒಂದಲ್ಲ ಒಂದು ರೀತಿಯಲ್ಲಿ ಪ್ರಯೋಜನಕ್ಕೆ ಬರುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಕೂಡಾ ಬಲ ಹಾಗೂ ಬಲಹೀನತೆಯನ್ನು ಹೊಂದಿರುತ್ತಾರೆ. ಬಲದ ಬಗ್ಗೆ ಹೆಮ್ಮೆ ಪಟ್ಟುಕೊಂಡು ಬಲಹೀನತೆಯನ್ನು ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡಬೇಕು.
ಸ್ವಯಂ ಪರಿಕಲ್ಪನೆ ಅಂದರೆ ನಮ್ಮ ಬಗೆಗಿನ ನಮ್ಮ ದೃಷ್ಟಿಕೋನ. ನಾವು ಹೀಗೆಯೇ ಇರಬೇಕು, ಜೀವನದಲ್ಲಿ ಯಶಸ್ಸನ್ನು ಪಡೆಯಬೇಕೆಂಬ ಕನಸು ಎಲ್ಲರಿಗೂ ಇದ್ದೇ ಇರುತ್ತದೆ. ನಮ್ಮನ್ನು ನಾವು ನೋಡಿಕೊಳ್ಳುವ ರೀತಿ, ಸದ್ಯ ಜೀವನವನ್ನು ಯಾವ ರೀತಿ ಅನುಭವಿಸುತ್ತಿದ್ದೇವೆ, ಹಿಂದೆ ಹೇಗಿದ್ದೆ, ಮುಂದೆ ಹೇಗಿರಬೇಕು ಎಂಬುದೆಲ್ಲವನ್ನು ಪರಿಗಣಿಸಿ ಬದುಕನ್ನು ರೂಪಿಸಿಕೊಳ್ಳುವ ಸ್ವಾತಂತ್ರ್ಯ ನಮ್ಮ ಕೈಯಲ್ಲೇ ಇದೆ. ಜೀವನವನ್ನು ಸಕಾರಾತ್ಮಕವಾಗಿ, ಆರೋಗ್ಯಕರವಾಗಿ ರೂಢಿಸಿಕೊಂಡರೆ ಅದರ ಫಲಿತಾಂಶ ಕೂಡಾ ಸಕಾರಾತ್ಮಕವಾಗಿರುತ್ತದೆ. ಹಾಗಂತ ಬದುಕು ಸವಾಲುಗಳಿಂದ ಮುಕ್ತವಾಗಿದ್ದು ಪ್ರತಿಕೂಲತೆಯಿಂದ ಕೂಡಿರುತ್ತದೆ ಎಂದರ್ಥವಲ್ಲ. ಜೀವನದಲ್ಲಿ ಬರುವ ಪ್ರತಿ ಸವಾಲುಗಳನ್ನು ಯಾವ ರೀತಿಯಲ್ಲಿ ನಿರ್ವಹಿಸುತ್ತೇವೆ ಎಂಬುದು ಕೂಡಾ ಮುಖ್ಯವಾಗಿರುತ್ತದೆ. ಅದರೆಡೆಗಿನ ದೂರದೃಷ್ಟಿ, ಪ್ರಯತ್ನ ನಮ್ಮದಾಗಿರಬೇಕು.