ಕೋಲಾರ(Kolar): ಒತ್ತುವರಿ ತೆರವು ವೇಳೆ ತಹಶೀಲ್ದಾರ್ ಅವರ ಮೇಲೆ ಕಲ್ಲಿನಿಂದ ಹಲ್ಲೆಗೆ ಯತ್ನಿಸಿರುವಂತಹ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಸಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬಂಗಾರಪೇಟೆ ತಹಶೀಲ್ದಾರ್ ದಯಾನಂದ್ ಅವರ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ.
ಇನ್ನು ಸಕ್ಕನಹಳ್ಳಿ ಗ್ರಾಮದ ಸರ್ವೆ ನಂ 29 ನಲ್ಲಿ ರವಿ ಸಿಂಗ್ ಎಂಬುವರು ಅಕ್ರಮವಾಗಿ ಸರ್ಕಾರಿ ಜಮೀನಿನಲ್ಲಿ ಕಾಂಪೌಂಡ್ ನಿರ್ಮಿಸಿಕೊಂಡಿದ್ದರು.
ಈ ಸಂಬಂಧ ತಹಶೀಲ್ದಾರ್ ಅವರಿಗೆ ಸ್ಥಳೀಯರು ದೂರು ನೀಡಿದ್ದ ಹಿನ್ನೆಲೆ ತಹಶೀಲ್ದಾರ್ ದಯಾನಂದ್ ಅವರು, ಜಿಲ್ಲಾ ಭೂಮಾಪನ ಅಧಿಕಾರಿಗಳಿಂದ ಸರ್ವೆ ನಡೆಸಿ, ಒತ್ತುವರಿದಾರರಿಗೆ ಎರಡು ಬಾರಿ ನೋಟಿಸ್ ನೀಡಿದ್ರು ಪ್ರತಿಕ್ರಿಯೆ ನೀಡದ ಹಿನ್ನೆಲೆ ಇಂದು ಒತ್ತುವರಿ ತೆರವಿಗೆ ಮುಂದಾಗಿದ್ದರು.
ಈ ವೇಳೆ ಒತ್ತುವರಿ ತೆರವಿಗೆ ಅಡ್ಡಿಪಡಿಸಿದ್ದಲ್ಲದೇ ತಹಶೀಲ್ದಾರ್ ದಯಾನಂದ್ ಅವರ ಮೇಲೆ ಒತ್ತುವರಿದಾರ ರವಿಸಿಂಗ್ ಕಲ್ಲುಗಳಿಂದ ಹಲ್ಲೆ ನಡೆಸಲು ಮುಂದಾದ ವೇಳೆ, ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.