ಮನೆ ರಾಜ್ಯ ಕೋಲಾರ ಲೋಕಸಭೆ ಕ್ಷೇತ್ರ; ಜಿಲ್ಲಾ ನಾಯಕರ ಜತೆ ಹೆಚ್.ಡಿ.ಕುಮಾರಸ್ವಾಮಿ ಮಹತ್ವದ ಸಮಾಲೋಚನೆ

ಕೋಲಾರ ಲೋಕಸಭೆ ಕ್ಷೇತ್ರ; ಜಿಲ್ಲಾ ನಾಯಕರ ಜತೆ ಹೆಚ್.ಡಿ.ಕುಮಾರಸ್ವಾಮಿ ಮಹತ್ವದ ಸಮಾಲೋಚನೆ

0

ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿಗಳು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಕೋಲಾರ ಲೋಕಸಭೆ ಕ್ಷೇತ್ರದ ಮುಖಂಡರು, ಶಾಸಕರು, ಮಾಜಿ ಶಾಸಕರು ಹಾಗೂ ವಿಧಾನಸಭೆ ಚುನಾವಣೆಯ ಪರಾಜಿತ ಅಭ್ಯರ್ಥಿಗಳ ಜತೆ ಮಹತ್ವದ ಸಮಾಲೋಚನೆ ನಡೆಸಿದರು.

ಬಿಡದಿಯ ತಮ್ಮ ತೋಟದ ಮನೆಯಲ್ಲಿ ಈ ಸಭೆಯನ್ನು ನಡೆಸಿದ ಮಾಜಿ ಮುಖ್ಯಮಂತ್ರಿಗಳು; ಕ್ಷೇತ್ರದ ಪರಿಸ್ಥಿತಿ, ಪಕ್ಷದ ಸಂಘಟನೆ, ಸಿದ್ಧತೆ, ಅಭ್ಯರ್ಥಿ ಇತ್ಯಾದಿ ಅಂಶಗಳ ಬಗ್ಗೆ ನಾಯಕರಿಂದ ಮಾಹಿತಿ ಪಡೆದುಕೊಂಡರು.

ಮಾಜಿ ಸಚಿವರಾದ ಬಂಡೆಪ್ಪ ಕಾಷೇಂಪೂರ್ ಅವರೊಂದಿಗೆ ಪಕ್ಷದ ಕೋಲಾರ ಜಿಲ್ಲಾಧ್ಯಕ್ಷ ಹಾಗೂ ಶಾಸಕರಾದ ವೆಂಕಟ ಶಿವಾರೆಡ್ಡಿ, ಶಾಸಕರಾದ ಸಮೃದ್ಧಿ ಮಂಜುನಾಥ್, ಮೇಲೂರು ರವಿ, ಮಾಜಿ ಉಪ ಸ್ಪೀಕರ್ ಕೆ.ಎಂ.ಕೃಷ್ಣಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ವಿಧಾನ ಪರಿಷತ್ ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ, ಮಾಲೂರಿನ ರಾಮೇಗೌಡ, ಬಂಗಾರಪೇಟೆಯ ಮಲ್ಲೇಶ್ ಬಾಬು, ಕೋಲಾರದ ಸಿಎಂಆರ್ ಶ್ರೀನಾಥ ಅವರು ಸೇರಿ ಹಲವಾರು ಪ್ರಮುಖ ನಾಯಕರು ಈ ಸಭೆಯಲ್ಲಿ ಹಾಜರಿದ್ದರು.

ಕೋಲಾರ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಹಾಗೂ ಲೋಕಸಭೆ ಚುನಾವಣೆಯ ಬಗ್ಗೆ ನಡೆದಿರುವ ತಯಾರಿ ಬಗ್ಗೆ ಪ್ರತಿ ನಾಯಕರಿಂದ ಕುಮಾರಸ್ವಾಮಿ ಅವರು ಮಾಹಿತಿ ಸಂಗ್ರಹಿಸಿದರು.

ಕ್ಷೇತ್ರಗಳ ಹಂಚಿಕೆ ವೇಳೆ ಚರ್ಚೆ:

ಕೋಲಾರ ಕ್ಷೇತ್ರದಲ್ಲಿ ಮೂವರು ಶಾಸಕರು ಇದ್ದು, ಕಳೆದ ವಿಧಾನಸಭೆಯಲ್ಲಿ ಅತ್ಯುತ್ತಮ ಮತ ಪ್ರಮಾಣವನ್ನು ಜೆಡಿಎಸ್ ಗಳಿಸಿದೆ. ಹೀಗಾಗಿ ನಮ್ಮ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಪಕ್ಷದ ನಿಷ್ಠಾವಂತ ದಲಿತ ನಾಯಕರೊಬ್ಬರನ್ನು ಗೆಲ್ಲಿಸಿಕೊಳ್ಳಬಹುದು ಎಂದು ಎಲ್ಲಾ ಮುಖಂಡರು ಕುಮಾರಸ್ವಾಮಿ ಆವರಿಗೆ ಸಲಹೆ ಮಾಡಿದರು.

ಸಭೆಯಲ್ಲಿ ಮೂಡಿಬಂದ ಸಲಹೆಗಳನ್ನು ಗಂಭೀರವಾಗಿ ಆಲಿಸಿದ ಮಾಜಿ ಮುಖ್ಯಮಂತ್ರಿಗಳು; ಕೋಲಾರ ಕ್ಷೇತ್ರದಲ್ಲಿ ಉತ್ತಮ ವಾತಾವರಣ ಇದೆ. ಜೆಡಿಎಸ್ ಈಗ ಎನ್ ಡಿಎ ಮೈತ್ರಿಕೂಟಕ್ಕೆ ಸೇರಿರುವ ಕಾರಣಕ್ಕೆ ಇನ್ನೂ ಅನುಕೂಲಕರ ವಾತಾವರಣ ಇದೆ. ಕ್ಷೇತ್ರದ ಎಲ್ಲಾ ಸ್ಥಿತಿಗತಿಗಳನ್ನು ನಾನು ಕ್ಷೇತ್ರ ಹಂಚಿಕೆ ಚರ್ಚೆ ಸಂದರ್ಭದಲ್ಲಿ ಪ್ರಧಾನಿಗಳಾದ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವರಾದ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಹಾಗೂ ರಾಜ್ಯ ಬಿಜೆಪಿ ನಾಯಕರ ಜತೆ ಚರ್ಚೆ ಮಾಡುತ್ತೇನೆ ಎಂದು ಮುಖಂಡರಿಗೆ ತಿಳಿಸಿದರು.

ಮೈತ್ರಿ ಧರ್ಮ ಪಾಲನೆ ಮಾಡಿ:

ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಬಗ್ಗೆ ಜಿಲ್ಲೆಯಲ್ಲಿ ಯಾವುದೇ ಗೊಂದಲ ಇಲ್ಲ. ಪರಸ್ಪರ ಹೊಂದಾಣಿಕೆ ಹಾಗೂ ಸಹಮತ ಭಾವದ ವಾತಾವರಣ ಇದೆ ಎಂದು ಮುಖಂಡರು ಮಾಜಿ ಮುಖ್ಯಮಂತ್ರಿ ಅವರ ಗಮನಕ್ಕೆ ತಂದರು.

ಮೈತ್ರಿ ಧರ್ಮ ಪಾಲನೆ ಮಾಡಬೇಕು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಬದ್ಧತೆ, ನಿಷ್ಠೆಯಿಂದ ಕೆಲಸ ಮಾಡಬೇಕು. ಜತೆಗೆ, ಕ್ಷೇತ್ರದಲ್ಲಿ ಆಗಬೇಕಿರುವ ಪಕ್ಷದ ಕೆಲಸ, ಸಂಘಟನೆ ಬಗ್ಗೆ ಮುಖಂಡರಿಗೆ ಕೆಲ ಸಲಹೆ, ಸೂಚನೆಗಳನ್ನು ನೀಡಿದರು.

ಹಿಂದಿನ ಲೇಖನವನ್ಯಜೀವಿಗಳನ್ನು ಗಡಿಗೆ ಸೀಮಿತಗೊಳಿಸುವುದು ಅಸಮರ್ಥನೀಯ: ಈಶ್ವರ ಖಂಡ್ರೆ
ಮುಂದಿನ ಲೇಖನಸಿಬಿಐಗೆ ಆರ್‌ ಟಿಐನಿಂದ ಪೂರ್ಣ ವಿನಾಯಿತಿ ಇಲ್ಲ; ಭ್ರಷ್ಟತೆಯಂತಹ ವಿಚಾರಗಳ ಬಗ್ಗೆ ಮಾಹಿತಿ ನೀಡಬೇಕು: ದೆಹಲಿ ಹೈಕೋರ್ಟ್‌