ಮನೆ ಸುದ್ದಿ ಜಾಲ ಆರೋಗ್ಯದತ್ತ ಹೆಚ್ಚಿನ ಗಮನಹರಿಸಿ: ಐಇಸಿ ಸಂಯೋಜಕ ರವಿಕುಮಾರ್

ಆರೋಗ್ಯದತ್ತ ಹೆಚ್ಚಿನ ಗಮನಹರಿಸಿ: ಐಇಸಿ ಸಂಯೋಜಕ ರವಿಕುಮಾರ್

0

ಪಿರಿಯಾಪಟ್ಟಣ(Periyapattana) : ಗ್ರಾಮೀಣ ಭಾಗದ ಜನರು ಕೃಷಿ ಕೆಲಸಗಳ ಒತ್ತಡದ ನಡುವೆಯು ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು ಎಂದು ತಾಲ್ಲೂಕು ಮಾಹಿತಿ ಶಿಕ್ಷಣ ಸಂವಹನ ಸಂಯೋಜಕರಾದ ಡಿ.ರವಿಕುಮಾರ್ ಹೇಳಿದರು.

ತಾಲ್ಲೂಕಿನ ಕೋಮಲಾಪುರ ಗ್ರಾಮಪಂಚಾಯಿತಿ ವ್ಯಾಪ್ತಿಯ ನೇರಳೆಕುಪ್ಪೆ ಗ್ರಾಮದಲ್ಲಿ ಮ-ನರೇಗಾ ಯೋಜನೆಯ ಕೂಲಿ ಕಾರ್ಮಿಕರಿಗೆ ಗ್ರಾಮಪಂಚಾಯಿತಿ ವತಿಯಿಂದ ಆಯೋಜಿಸಿದ್ದಂತಹ “ಆರೋಗ್ಯ ತಪಾಸಣೆ ಹಾಗೂ ಇ-ಶ್ರಮ್ ನೋಂದಣಿ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗ್ರಾಮೀಣ ಭಾಗದ ಜನರು ಬಿಸಿಲು,ಮಳೆ ಎನ್ನದೇ, ನಿಗದಿತ ಸಮಯಕ್ಕೆ ಆಹಾರ ಸೇವಿಸದೇ ಕೃಷಿ ಚಟುವಟಿಕೆಗಳಲ್ಲಿ ಹೆಚ್ಚಿನದಾಗಿ ತೊಡಗಿಸಿಕೊಂಡು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಹೀಗಾಗಿಯು, ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳುವುದಕ್ಕೂ ಮುಂದಾಗುತ್ತಿಲ್ಲ. ಆರೋಗ್ಯದ ಬಗ್ಗೆ ಕಾಳಜಿಯಿಲ್ಲದಿರುವುದು ಇದಕ್ಕೆ ಕಾರಣವಾಗಿದೆ ಎಂದು ಬೇಸರವ್ಯಕ್ತಪಡಿಸಿದರು.

ಗ್ರಾ.ಪಂ ವತಿಯಿಂದ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುವಂತಹ ಕೂಲಿ ಕಾರ್ಮಿಕರ ಆರೋಗ್ಯವನ್ನು ಕಾಪಾಡುವ ಉದ್ದೇಶದಿಂದ ಈ ರೀತಿಯಾಗಿ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗಿದೆ. ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹಿಮೋಗ್ಲೋಬಿನ್ ಹಾಗೂ ತೂಕ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇ-ಶ್ರಮ್ ಯೋಜನೆಯಡಿ ೧೬ ರಿಂದ ೫೯ ವಯೋಮಿತಿಯ ಹಾಗೂ ಆದಾಯ ತೆರಿಗೆ ಪಾವತಿದಾರರಲ್ಲದವರು ನೋಂದಾಯಿಸಿಕೊಳ್ಳಬಹುದಾಗಿದೆ. ಇದರಿಂದ ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಯೋಜನೆಗಳನ್ನು ಪಡೆದುಕೊಳ್ಳಬಹುದು. ಒಂದು ವರ್ಷದ ಅವಧಿಗೆ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದರು.

ಆರೋಗ್ಯ ತಪಾಸಣೆ ಶಿಬಿರದಲ್ಲಿ ೨೬ಮಂದಿ ಪುರುಷರು ಹಾಗೂ ೨೪ ಮಂದಿ ಮಹಿಳೆಯರು ಸೇರಿದಂತೆ ೫೦ಕ್ಕೂ ಹೆಚ್ಚು ಮಂದಿ ಭಾಗವಹಿಸಿ ಚಿಕಿತ್ಸೆ ಪಡೆದುಕೊಂಡರು.

ಈ ಸಂದರ್ಭ ಆರೋಗ್ಯ ಅಮೃತ ಅಭಿಯಾನ ಸಂಯೋಜಕರಾದ ಜ್ಯೋತಿ, ಸಮುದಾಯ ಆರೋಗ್ಯ ಅಧಿಕಾರಿ ಸಂತೋಷ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಹಿಂದಿನ ಲೇಖನಐದು ರಾಜ್ಯಗಳ ಮತಾಂತರ ವಿರೋಧಿ ಕಾಯಿದೆಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಜಾಮಿಯತ್ ಉಲಾಮಾ- ಇ- ಹಿಂದ್
ಮುಂದಿನ ಲೇಖನಸೈಬರ್ ಕ್ರೈಂ ಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಅಗತ್ಯ: ಎಚ್ ಎಸ್ ರೇಣುಕಾರಾಧ್ಯ