ಮನೆ ರಾಜಕೀಯ ಬೆಂಗಳೂರಿನಲ್ಲಿ ನಂದಿನಿ ನಕಲಿ ತುಪ್ಪ ಮಾರಾಟ ಜಾಲ ಪತ್ತೆಯಾಗಿರೋದು ಆತಂಕಕಾರಿ: ಡಿಕೆ ಶಿವಕುಮಾರ್

ಬೆಂಗಳೂರಿನಲ್ಲಿ ನಂದಿನಿ ನಕಲಿ ತುಪ್ಪ ಮಾರಾಟ ಜಾಲ ಪತ್ತೆಯಾಗಿರೋದು ಆತಂಕಕಾರಿ: ಡಿಕೆ ಶಿವಕುಮಾರ್

0

ಬೆಂಗಳೂರು: ಬೆಂಗಳೂರಿನಲ್ಲಿ ನಂದಿನಿ ಬ್ರ್ಯಾಂಡ್‌ನ ನಕಲಿ ತುಪ್ಪ ಮಾರಾಟ ಜಾಲ ಪತ್ತೆಯಾಗಿರುವುದು ಆತಂಕಕಾರಿ ವಿಷಯ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು,‘ರಾಜ್ಯದ ರೈತರ ಹಿತ ಕಾಯುತ್ತಿರುವ ಸರ್ಕಾರಿ ಸ್ವಾಮ್ಯದ ನಂದಿನಿ ಹಾಲಿನ ಉತ್ಪನ್ನಗಳ ಬ್ರ್ಯಾಂಡ್‌ಗೆ ಕಳಂಕ ತರುವ ಪ್ರಯತ್ನಗಳು ಮೇಲಿಂದ ಮೇಲೆ ನಡೆಯುತ್ತಿಲೇ ಇವೆ. ಬೆಂಗಳೂರಿನಲ್ಲಿ ನಂದಿನಿ ಬ್ರ್ಯಾಂಡ್‌ನ ನಕಲಿ ತುಪ್ಪ ಮಾರಾಟ ಜಾಲ ಪತ್ತೆಯಾಗಿರುವುದು ಆತಂಕಕಾರಿ ವಿಷಯ ಈ ಮೊದಲು ಮೈಸೂರಿನಲ್ಲಿ ನಂದಿನಿ ಹೆಸರಿನಲ್ಲಿ ನಕಲಿ ತುಪ್ಪ ತಯಾರಾಗಿದೆ ಎಂದು ಹೇಳಿದ್ದಾರೆ.

ರಾಜ್ಯದ ನಂದಿನಿ ಬ್ರ್ಯಾಂಡ್‌ ತುಪ್ಪವು ದೇಶದಲ್ಲೇ ಖ್ಯಾತಿ ಪಡೆದಿದೆ ಎಂದಿರುವ ಡಿಕೆಶಿ, ಈಗಾಗಲೇ ಖಾಸಗಿ ಕಂಪನಿಗಳು, ನೆರೆ ರಾಜ್ಯದ ಹಾಲಿನ ಉತ್ಪನ್ನಗಳ ಸ್ಪರ್ಧೆಯು ಕೆಎಂಎಫ್‌ಗೆ ಸವಾಲಾಗಿದೆ. ಇದರ ನಡುವೆ ನಕಲಿ ಉತ್ಪನ್ನಗಳ ಮಾರಾಟವು ಹಾಲು ಒಕ್ಕೂಟಕ್ಕೆ ಕಂಟಕಪ್ರಾಯವಾಗಬಹುದು. ನಷ್ಟದ ಕಾರಣ ಹೇಳಿ ಒಂದು ದಿನ ಸರ್ಕಾರ ಕೆಎಂಎಫ್‌ಗೂ ಕೊನೇ ಮೊಳೆ ಹೊಡೆಯಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ಇನ್ನು ‘ವರ್ಗೀಸ್‌ ಕುರಿಯನ್‌ ಅವರ ಕನಸುಗಳು ರೈತರ ಭಾಗ್ಯದ ಬಾಗಿಲು ತೆರೆದವು. ನಂದಿನಿ ಬ್ರ್ಯಾಂಡ್‌ ರಕ್ಷಿಸದಿದ್ದರೆ ಅದರ ನೇರ ಪರಿಣಾಮ ಬೀರುವುದು ನಮ್ಮ ರಾಜ್ಯದ ರೈತರು, ಹೋಟೆಲ್‌ ಉದ್ಯಮ ಹಾಗೂ ಜನರ ಆರೋಗ್ಯದ ಮೇಲೆ ಎಂಬುದನ್ನು ಸರ್ಕಾರ ಯಾವುದೇ ಕಾರಣಕ್ಕೂ ಮರೆಯಬಾರದು. ಈ ಕೂಡಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು ಎಂದು ಡಿಕೆಶಿ ಸರ್ಕಾರವನ್ನು ಆಗ್ರಹಿಸಿದ್ದಾರೆ.