ಬುದ್ದ ಮುಗುಳ್ನಗುತ್ತಲೇ ಇದ್ದಾನೆ
ನಗುವುದು ಅವನಿಗೆ ಹೊಸತೇನಲ್ಲ
ನಾನು ಅಳು ಅಳುತ್ತಲೇ ಇದ್ದೇನೆ
ಅಳುವುದು ನನಗೆ ಹೊಸತೇನಲ್ಲ.!
ಎಲ್ಲ ಬಿಟ್ಟಂತೆಲ್ಲ ಕಳೆದುಕೊಂಡತೆಲ್ಲ
ಅವನದು ನಿರ್ಲಿಪ್ತ ನಿರ್ಮಲ ನಗೆ
ಎಲ್ಲ ಕಟ್ಟಿಕೊಂಡು ಪಡೆದಂತೆಲ್ಲಾ
ನನ್ನದು ಅತೃಪ್ತ ಅವಿರತ ಅಳು.!
ಅವನ ವಿರಾಗದ ನಿಶ್ಚಿಂತ ನಗುವಿಗೆ
ಸಾವಿರ ರೆಕ್ಕೆಗಳ ಜೀವ ಸಂಚಲನ
ನನ್ನಯ ರಾಗದ್ವೇಷಗಳ ಅಳುವಿಗೆ
ಸಾವಿರ ಸಂಕೋಲೆಗಳ ಬಿಗಿಬಂಧನ.!
ನಕ್ಕಷ್ಟು ಅವನು ಹಗುರಾಗುತ್ತಾನೆ
ಭವ ಬೇಗುದಿಗಳಿಂದ ದೂರಾಗುತ್ತಾನೆ
ತನ್ನೊಳಗೆ ತನ್ನನ್ನು ಗೆಲ್ಲುತ್ತಿದ್ದಾನೆ
ತಮಸ್ಸಿನಿಂದ ಬೆಳಕಿನಡೆ ಸಾಗುತ್ತಿದ್ದಾನೆ.!
ಅತ್ತಷ್ಟು ನಾನು ಭಾರವಾಗುತ್ತಿದ್ದೇನೆ
ಬಂಧಗಳೊಳಗೆ ಬಂಧಿಯಾಗುತ್ತಿದ್ದೇನೆ
ಹೊರಗೆ ಒಳಗೆ ಎಲ್ಲೆಡೆ ಸೋಲುತ್ತಿದ್ದೇನೆ
ಕತ್ತಲೊಳಗೆ ನಿತ್ಯ ಜಾರುತ್ತಲೇ ಇದ್ದೇನೆ.!
ಬುದ್ದ ನಗುತ ಅಣಕಿಸುತ್ತಲೇ ಇದ್ದಾನೆ
ಬುದ್ದನ ಮುಗುಳ್ನಗು ಕೆಣಕುತ್ತಲೇ ಇದೆ
ಬುದ್ದನಂತಾಗದೆ ಬೆಳಕಿಗೆ ಬದ್ದನಾಗದೆ
ನಾನು ಪ್ರತಿಕ್ಷಣ ಅಳುಕುತ್ತಲೇ ಇದ್ದೇನೆ.!
ಮೋಹ ದಾಹಗಳೊಳಗೆ ನರಳುವ
ನನ್ನನು ಬುದ್ದನ ಮಂದಸ್ಮಿತ ಕಾಡುತಿದೆ
ಬುದ್ದನ ತತ್ವ ಸತ್ವಗಳರಿಯದ ನನಗೆ
ಬೆಳಕು ಮರೀಚಿಕೆಯಾಗಿಯೇ ಕಾಣುತಿದೆ.!
- ಎ.ಎನ್.ಆರ್