ಮನೆ ಕಾನೂನು ಜಾನುವಾರು ಹತ್ಯೆ ನಿಷೇಧ ಕಾಯಿದೆ: ನಿಯಮ ರೂಪಿಸಿದ ಸರ್ಕಾರ; ಜಾನುವಾರು ಸಾಗಣೆ ವಿರುದ್ಧ ಕ್ರಮಕ್ಕೆ ಹೈಕೋರ್ಟ್‌...

ಜಾನುವಾರು ಹತ್ಯೆ ನಿಷೇಧ ಕಾಯಿದೆ: ನಿಯಮ ರೂಪಿಸಿದ ಸರ್ಕಾರ; ಜಾನುವಾರು ಸಾಗಣೆ ವಿರುದ್ಧ ಕ್ರಮಕ್ಕೆ ಹೈಕೋರ್ಟ್‌ ಅಸ್ತು

0

ಕರ್ನಾಟಕ ಗೋವಧೆ ಪ್ರತಿಬಂಧಕ ಹಾಗೂ ಜಾನುವಾರು ಸಂರಕ್ಷಣೆ ನಿಯಮಗಳನ್ನು (ಜಾನುವಾರು ಸಾಗಣೆ 2021ರ ನಿಯಮಗಳು) ರೂಪಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ಗೋವಧೆ ಪ್ರತಿಬಂಧಕ ಹಾಗೂ ಜಾನುವಾರು ಸಂರಕ್ಷಣಾ ಕಾಯಿದೆ- 2020ರ ಸೆಕ್ಷನ್ 5 ಮತ್ತು ಅದರ ಅಡಿ ರೂಪಿಸಿರುವ ನಿಯಮಗಳ ಜಾರಿಗೆ ಸೋಮವಾರ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಅನುಮತಿಸಿದ್ದು, ಅದು ಅಂತಿಮ ನಿರ್ಧಾರಕ್ಕೆ ಒಳಪಟ್ಟಿರುತ್ತದೆ ಎಂದು ಸ್ಪಷ್ಟಪಡಿಸಿದೆ.

ಕಾಯಿದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಮೊಹಮ್ಮದ್‌ ಆರೀಫ್‌ ಜಮೀಲ್‌ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು “2021ರ ಜನವರಿ 20ರಂದು ಕರ್ನಾಟಕ ಗೋವಧೆ ಪ್ರತಿಬಂಧಕ ಹಾಗೂ ಜಾನುವಾರು ಸಂರಕ್ಷಣಾ ಕಾಯಿದೆ ಸೆಕ್ಷನ್ 5ರಡಿ ನಿಯಮ ರೂಪಿಸಿ ಅವುಗಳನ್ನು ಜಾರಿಗೆ ತರುವವರೆಗೆ ಯಾವುದೇ ವ್ಯಕ್ತಿಯ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ನ್ಯಾಯಾಲಯವು ಸರ್ಕಾರವನ್ನು ನಿರ್ಬಂಧಿಸಿತ್ತು. ನ್ಯಾಯಾಲಯದ ಆದೇಶದಂತೆ ಕಾಯಿದೆಯ ಸೆಕ್ಷನ್‌ 5ರ ಜಾನುವಾರು ಸಾಗಣೆ 2021ರ ನಿಯಮಗಳನ್ನು ರೂಪಿಸಿರುವುದರಿಂದ ಕಾಯಿದೆಯ ಸೆಕ್ಷನ್‌ 5 ಅನ್ನು ಜಾರಿ ಮಾಡುವ ಸಂಬಂಧ ನ್ಯಾಯಾಲಯದ ಹಿಂದಿನ ಆದೇಶದಲ್ಲಿ ಮಾರ್ಪಾಡು ಮಾಡಬೇಕು” ಎಂದು ಕೋರಿದರು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲರು “ಕಾಯಿದೆಯ ಸಿಂಧುತ್ವವನ್ನು ಪ್ರಶ್ನಿಸಿದ್ದು, ಕಾಯಿದೆ ಮತ್ತು ನಿಯಮಗಳು ಜಾರಿ ಮಾಡುವುದರಿಂದ ನಿರ್ದಿಷ್ಟ ಸಮುದಾಯದ ಕುರಿತು ಪೂರ್ವಾಗ್ರಹ ಉಂಟು ಮಾಡಲಿದೆ. ಹೀಗಾಗಿ, ಅದಕ್ಕೆ ಅನುಮತಿಸಬಾರದು” ಎಂದು ಆಕ್ಷೇಪಿಸಿದರು.

ನ್ಯಾಯಾಲಯದ ಆದೇಶದ ತೆರವಿಗೆ ಸಂಬಂಧಿಸಿದ ರಾಜ್ಯ ಸರ್ಕಾರದ ಮನವಿ ಮತ್ತು ಅದಕ್ಕೆ ಅರ್ಜಿದಾರರು ಸಲ್ಲಿಸಿರುವ ಆಕ್ಷೇಪಣೆಯನ್ನು ಪೀಠವು ಪರಿಗಣಿಸಿದೆ.

ಇದನ್ನು ಆದೇಶದಲ್ಲಿ ದಾಖಲಿಸಿಕೊಂಡ ನ್ಯಾಯಾಲಯವು “ಕರ್ನಾಟಕ ಗೋವಧೆ ಪ್ರತಿಬಂಧಕ ಹಾಗೂ ಜಾನುವಾರು ಸಂರಕ್ಷಣಾ ಕಾಯಿದೆ- 2020 ಅನ್ನು 2021ರ ಫೆಬ್ರವರಿ 15ರಂದು ಜಾರಿ ಮಾಡಿದ್ದು, 2021ರ ಮೇ 24ರಂದು ಅಧಿಸೂಚನೆ ಹೊರಡಿಸಲಾಗಿದೆ. 2021ರ ಮೇ 25ರಂದು ಗೆಜೆಟ್‌ನಲ್ಲಿ ಪ್ರಕಟಿಸಲಾಗಿದೆ. ಈಗ ಕಾಯಿದೆ ಸೆಕ್ಷನ್‌ 5ರ ಅಡಿ ಕರ್ನಾಟಕ ಗೋವಧೆ ಪ್ರತಿಬಂಧಕ ಹಾಗೂ ಜಾನುವಾರು ಸಂರಕ್ಷಣೆ (ಪ್ರಾಣಿಗಳ ಸಾಗಣೆ 2021ರ ನಿಯಮಗಳು) ರೂಪಿಸಲಾಗಿದೆ. ಈಗ ಸರ್ಕಾರವು ಸೆಕ್ಷನ್‌ 5 ಮತ್ತು ಅದರ ಅಡಿ ರೂಪಿಸಿರುವ ನಿಯಮ ಜಾರಿಗೊಳಿಸುವ ಸಂಬಂಧ ನ್ಯಾಯಾಲಯದ ಅನುಮತಿ ಕೋರಿದ್ದು, ಈ ಸಂಬಂಧ 2021ರ ಜನವರಿ 20ರ ಆದೇಶದಲ್ಲಿ ಮಾರ್ಪಾಡು ಮಾಡುವಂತೆ ಕೋರಿರುವುದಕ್ಕೆ ಅನುಮತಿಸಲಾಗಿದೆ. ಇದು ಮನವಿಯ ಅಂತಿಮ ನಿರ್ಧಾರಕ್ಕೆ ಒಳಪಟ್ಟಿರುತ್ತದೆ” ಎಂದು ಪೀಠವು ಆದೇಶಿಸಿ, ವಿಚಾರಣೆ ಮುಂದೂಡಿದೆ.

ಪ್ರಕರಣದ ಹಿನ್ನೆಲೆ: 2021ರ ಜನವರಿ 5ರಂದು ಜಾರಿಗೆ ಬಂದಿದ್ದ ಕರ್ನಾಟಕ ಗೋವಧೆ ಪ್ರತಿಬಂಧಕ ಹಾಗೂ ಜಾನುವಾರು ಸಂರಕ್ಷಣೆ ಸುಗ್ರೀವಾಜ್ಞೆ ಸೆಕ್ಷನ್ 4ರ ಅಡಿ ಜಾನುವಾರು ವಧೆ ನಿಷೇಧಿಸಲಾಗಿದೆ. ತಪ್ಪಿದಲ್ಲಿ ಕನಿಷ್ಠ ಮೂರು ವರ್ಷ ಮತ್ತು ಗರಿಷ್ಠ ಏಳು ವರ್ಷ ಜೈಲು ಶಿಕ್ಷೆ ಮತ್ತು/ಅಥವಾ ಪ್ರತಿ ರಾಸಿಗೆ ರೂ 50,000ಕ್ಕೆ ಕಡಿಮೆಯಿಲ್ಲದಂತೆ 5 ಲಕ್ಷ ರೂಪಾಯಿವರೆಗೆ ದಂಡ ವಿಧಿಸಬಹುದಾಗಿದೆ. ಪುನರಾವರ್ತಿತ ಅಪರಾಧಗಳಿಗಾಗಿ ರೂಪಾಯಿ ಒಂದು ಲಕ್ಷಕ್ಕಿಂತ ಕಡಿಮೆಯಿಲ್ಲದಂತೆ 10 ಲಕ್ಷ ರೂಪಾಯಿವರೆಗೆ ವಿಸ್ತೃತ ದಂಡ ವಿಧಿಸಬಹುದು ಎಂದು ಹೇಳಲಾಗಿದೆ.

ಅಂದಿನ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕ್‌ ಅವರು “ಒಬ್ಬ ರೈತನ ಮನೆ ಪಕ್ಕದಲ್ಲಿ ದನಗಳ ಕೊಟ್ಟಿಗೆ ಇರುತ್ತದೆ. ಆತ ಅವುಗಳನ್ನು ತನ್ನ ಜಮೀನಿಗೆ ಕೊಂಡೊಯ್ಯಲು ಪ್ರತಿ ಬಾರಿಯೂ ಪ್ರಮಾಣಪತ್ರ ತೆಗೆದುಕೊಳ್ಳಬೇಕೆ?” ಎಂದು ಸೆಕ್ಷನ್‌ 5ರ ಅಸಮಂಜಸತೆಯ ಬಗ್ಗೆ ಬೆರಳು ಮಾಡಿತ್ತು.

ಆಗ ಎಜಿ ನಾವದಗಿ ಅವರು ಮೊದಲ ಹದಿನೈದು ಕಿಮೀ ವ್ಯಾಪ್ತಿಗೆ ವಿನಾಯ್ತಿ ಇದೆ. ಈ ನಿಟ್ಟಿನಲ್ಲಿ ಇನ್ನಷ್ಟೇ ನಿಯಮ ಜಾರಿಗೆ ತರಬೇಕಿದೆ” ಎಂದು ಹೇಳಿದರು. ಆದರೆ ಇದರಿಂದ ಅಸಮಾಧಾನಗೊಂಡ ಅಂದಿನ ಮುಖ್ಯ ನ್ಯಾಯಮೂರ್ತಿ ಓಕ್‌ ಅವರು, “ಇದು (ಸೆಕ್ಷನ್‌ 5ರ ನಿಬಂಧನೆ) ಸಮಸ್ಯೆ ಸೃಷ್ಟಿಸುತ್ತದೆ. ಇದು ಪೊಲೀಸರ ವಿವೇಚನೆಗೆ ಬಿಟ್ಟದ್ದು” ಎಂದು ಹೇಳಿ, ನಿಯಮ ರೂಪಿಸುವವರೆಗೆ ಸೆಕ್ಷನ್‌ 5ರ ಜಾರಿಗೆ ಅವಕಾಶ ನೀಡಲಾಗದು ಎಂದು ನಿರ್ಬಂಧ ವಿಧಿಸಿತ್ತು.