ಬೆಂಗಳೂರು, : 50 ಶಾಸಕರನ್ನು ಖರೀದಿಸಲು ಬೇಕಾದ 2,500 ಕೋಟಿ ರೂ. ಎಲ್ಲಿದೆ, ಯಾವ ವ್ಯಕ್ತಿ ಖರೀದಿಸಲು ಮುಂದಾಗಿದ್ದಾರೆಂದು ಸಿಎಂ ಸಿದ್ದರಾಮಯ್ಯ ತಿಳಿಸಬೇಕು. ಈ ಕುರಿತು ಜಾರಿ ನಿರ್ದೇಶನಾಲಯ ತನಿಖೆ ಮಾಡಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವ ಕಾಲ ಸನ್ನಿಹಿತವಾಗಿದ್ದು, ಅದಕ್ಕಾಗಿ ಶಾಸಕರಿಗೆ ದರ ನಿಗದಿ ಮಾಡಿದ್ದಾರೆ. ಗುಪ್ತಚರ ವಿಭಾಗ ಅವರ ಕೈಯಲ್ಲೇ ಇದ್ದು, ಎಲ್ಲಿ ಯಾರಿಗೆ ಎಷ್ಟು ಹಣ ನೀಡಲಾಗಿದೆ ಎಂಬ ವರದಿಯನ್ನು ಅವರು ತರಿಸಿಕೊಳ್ಳಬಹುದಿತ್ತು. ತಮ್ಮ ಸ್ಥಾನ ಅಸ್ಥಿರವಾಗಿರುವುದರಿಂದ ಹೀಗೆ ಮಾತಾಡಿದ್ದಾರೆ. ಹೊಸ ಸರ್ಕಾರ ರಚನೆಯಾಗಲು 50 ಕ್ಕೂ ಅಧಿಕ ಶಾಸಕರು ಪಕ್ಷ ಬಿಟ್ಟು ಹೊರಗೆ ಬರಬೇಕಾಗುತ್ತದೆ. ಆ ಲೆಕ್ಕದಲ್ಲೂ ಅವರು ತಪ್ಪಾಗಿ ಹೇಳಿದ್ದಾರೆ ಎಂದರು.
50 ಶಾಸಕರಿಗೆ ತಲಾ 50 ಕೋಟಿ ರೂ. ಎಂದರೆ 2,500 ಕೋಟಿ ರೂ. ಬೇಕಾಗುತ್ತದೆ. ಇಷ್ಟೊಂದು ಹಣ ಯಾರ ಬಳಿ ಇದೆ? ಹರಾಜಾಗುವ ಶಾಸಕರು ಯಾರು ಎಂಬ ಪ್ರಶ್ನೆಗೆ ಉತ್ತರಿಸಲಿ. 2,500 ಕೋಟಿ ರೂ. ಬೇನಾಮಿ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಕೂಡಲೇ ವಶಕ್ಕೆ ಪಡೆಯಬೇಕು. ಖರೀದಿ ಮಾಡುವ ಆ ವ್ಯಕ್ತಿಯನ್ನು ಬಂಧಿಸಬೇಕು. ಜಾರಿ ನಿರ್ದೇಶನಾಲಯದ ಮುಖ್ಯಮಂತ್ರಿಯನ್ನು ವಿಚಾರಣೆ ಮಾಡಿ ಈ ಕುರಿತು ಮಾಹಿತಿ ಪಡೆಯಬೇಕು ಎಂದು ಆಗ್ರಹಿಸಿದರು.
ಇವರನ್ನು ಮುಟ್ಟಿದರೆ ಜನರು ದಂಗೆ ಏಳುತ್ತಾರೆ ಎನ್ನಲು ಇವರು ಮೇಲಿಂದ ಇಳಿದು ಬಂದವರಲ್ಲ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ನ್ಯಾಯಾಂಗದ ಬಗ್ಗೆ ಗೌರವವಿಲ್ಲ. ಇವರ ಪರವಾಗಿ ತೀರ್ಪು ಬಂದರೆ ನ್ಯಾಯಾಲಯ ಸರಿ ಇದೆ, ಇಲ್ಲವಾದರೆ ಸರಿ ಇಲ್ಲ ಎನ್ನುತ್ತಾರೆ. ಸಚಿವ ಜಮೀರ್ ಅಹ್ಮದ್ ಕೂಡ ಇದೇ ರೀತಿ ಮಾತಾಡಿದ್ದಾರೆ. ಕಾಂಗ್ರೆಸ್ ಗೆದ್ದಾಗ ಇವಿಎಂ ಸರಿ ಇದೆ, ಸೋತಾಗ ಇವಿಎಂ ಸರಿ ಇಲ್ಲ ಎನ್ನುತ್ತಾರೆ ಎಂದು ವ್ಯಂಗ್ಯವಾಡಿದರು.
ಕೋವಿಡ್ ವರದಿ ಬಿಡುಗಡೆ ಮಾಡಲಿ
ಅಬಕಾರಿ ಇಲಾಖೆಯಲ್ಲಿ ಹಗರಣ ಹಾಗೂ ವಕ್ಫ್ ಭೂ ಕಬಳಿಕೆ ಮುಂದುವರಿದಿದೆ. ಅಬಕಾರಿ ಇಲಾಖೆಯ ಹಗರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತಾಡಿದ್ದಾರೆ. ಇದನ್ನು ಸಿಬಿಐ ತನಿಖೆಗೆ ವಹಿಸುವುದು ಸೂಕ್ತ. ಕೋವಿಡ್ ತನಿಖೆಯ ಭಾಗ 1 ಮಾತ್ರ ಬಂದಿದೆ. ನ್ಯಾ.ಕೆಂಪಣ್ಣ ಆಯೋಗದ ಭಾಗ 1 ಕೂಡ ಬಂದಿಲ್ಲ. ಅದರ ವರದಿ ಸಂಪೂರ್ಣವಾಗಿ ಹೊರಬರಲಿ. ಕೋವಿಡ್ ಇಡೀ ಜಗತ್ತಿನಲ್ಲಿತ್ತು. ಆಗ ಯಾವ ಸರಕು ಯಾವ ದರದಲ್ಲಿತ್ತು ಎಂಬುದನ್ನು ಮೊದಲು ತಿಳಿಸಲಿ. ಎಲ್ಲ ರಾಜ್ಯದಲ್ಲಿ ಕಿಟ್‌ಗಳನ್ನು ಎಷ್ಟು ದರಕ್ಕೆ ಖರೀದಿ ಮಾಡಲಾಗಿದೆ ಎಂದು ತಿಳಿಸಲಿ. ತುರ್ತು ಖರೀದಿ ಮಾಡದೆ 60 ದಿನಗಳ ಟೆಂಡರ್‌ಗೆ ಕಾದುಕೊಂಡು ಕೂತಿದ್ದರೆ ಎಲ್ಲವೂ ಮುಗಿದು ಹೋಗುತ್ತಿತ್ತು. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನೆ ಮಾಡಬೇಕು. ಕೋವಿಡ್‌ನ ಪೂರ್ಣ ವರದಿಯನ್ನು ಸದನದಲ್ಲಿ ಬಿಡುಗಡೆ ಮಾಡಲಿ ಎಂದರು.
ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಈಗಾಗಲೇ ಗೆದ್ದಿದ್ದಾರೆ. ಸಚಿವ ಜಮೀರ್ ಅಹ್ಮದ್ ಕರಿಯ ಎಂದು ಹೀಯಾಳಿಸಿದ್ದು, ದೇವೇಗೌಡರ ಕುಟುಂಬ ಖರೀದಿಸುತ್ತೇನೆಂದು ಹೇಳಿದ್ದು, ಮೊದಲಾದ ಹೇಳಿಕೆಗಳಿಂದಾಗಿ ಜನರು ಕಾಂಗ್ರೆಸ್‌ಗೆ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ. ವಕ್ಫ್, ಮುಡಾ, ವಾಲ್ಮೀಕಿ ನಿಗಮದ ಹಗರಣ ಚುನಾವಣೆಯಲ್ಲಿ ಪ್ರಭಾವ ಬೀರಿದೆ ಎಂದರು.