ಬೆಂಗಳೂರು: ಬೆಂಗಳೂರಿನ ಅಬಕಾರಿ ಕಚೇರಿಗಳನ್ನು ಪರಿಶೀಲನೆಗೆ ವಾರೆಂಟ್ ಬೆನ್ನಲ್ಲೇ ಇಂದು (ಸೆಪ್ಟೆಂಬರ್ 24) ಲೋಕಾಯುಕ್ತ ದಾಳಿ ಮಾಡಿದ್ದು, ಸರ್ಕಾರಿ ಕಚೇರಿಯಲ್ಲಿ ಗಾಂಜಾ, ಲಿಕ್ಕರ್ ಬಾಟಲ್ ಪತ್ತೆಯಾಗಿವೆ.
ಯಶವಂತಪುರ, ಬ್ಯಾಟರಾಯನಪುರ ಕಚೇರಿಗಳಲ್ಲಿ ಸಿಗರೇಟ್ನ ತಂಬಾಕು ತೆಗೆದು ಗಾಂಜಾ ತುಂಬಿಟ್ಟಿದ್ದು ಪತ್ತೆಯಾಗಿದ್ದು, ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್, ಉಪಲೋಕಾಯುಕ್ತ ಬಿ. ವೀರಪ್ಪ ಪರಿಶೀಲನೆ ನಡೆಸಿದ್ದಾರೆ.
ಯಶವಂತಪುರ ಮತ್ತು ಬ್ಯಾಟರಾಯನಪುರ ಅಬಕಾರಿ ಕಚೇರಿಗಳಲ್ಲಿ ಖುದ್ದು ಪರಿಶೀಲನೆಗೆ ಲೋಕಾಯುಕ್ತ ನ್ಯಾಯಮೂರ್ತಿ.ಬಿ.ಎಸ್ ಪಾಟೀಲ್ ಅವರು ಸರ್ಚ್ ವಾರಂಟ್‌ಗಳನ್ನು ಹೊರಡಿಸಿದ್ದರು. ಯಶವಂತಪುರ ಮತ್ತು ಬ್ಯಾಟರಾಯನಪುರ ಅಬಕಾರಿ ಕಚೇರಿಗಳಲ್ಲಿ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಖುದ್ದು ಪರಿಶೀಲನೆಗೆ ವಾರೆಂಟ್ ಹೊರಡಿಸಲಾಗಿತ್ತು. ಅದರಂತೆ ಸಂಜೆ ವೇಳೆ ಯಶವಂತಪುರ ಮತ್ತು ಬ್ಯಾಟರಾಯನಪುರ ಅಬಕಾರಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ಮಾಡಿದ್ದು, ಈ ವೇಳೆ ಸರ್ಕಾರಿ ಕಚೇರಿಗಳಲ್ಲೇ ಗಾಂಜಾ ಮತ್ತು ಮದ್ಯದ ಬಾಟಲಿಗಳು ಪತ್ತೆಯಾಗಿವೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್, ಇವತ್ತು 61 ಅಬಕಾರಿ ಅಧಿಕಾರಿಗಳ ಮೇಲೆ ಸರ್ಚ್ ಮಾಡಲಾಗಿದೆ. ಲೊಕಾಯುಕ್ತ ಕಚೇರಿಗೆ ಸುಮಾರು 132 ದೂರುಗಳು ಬಂದಿವೆ. ಅದೆಲ್ಲವನ್ನೂ ವಿಚಾರ ಮಾಡಲಾಗಿ ಜೊತೆಗೆ ಅಬಕಾರಿ ಕಚೇರಿಯ ವ್ಯವಹಾರಗಳ ಬಗ್ಗೆ ಪರಿಶೀಲನೆ ನಡೆಸಲು ಸರ್ಚಿಂಗ್ ಮಾಡಲಾಗುತ್ತಿದೆ. ಎಸ್ಪಿಗಳು, ಡಿವೈಎಸ್ಪಿಗಳು, ಇನ್ಸ್ ಪೆಕ್ಟರ್ ಗಳು, ಜ್ಯೂಡಿಷಲ್ ಆಫೀಸರ್ಸ್ ಹಾಗೂ ನಾನು ಮತ್ತು ಉಪಲೋಕಾಯುಕ್ತರು ಬೆಂಗಳೂರಿನ ಎಲ್ಲಾ ಕಡೆ ತುಂಬಾ ಓಡಾಡುತ್ತಿದ್ದು, ಪರಿಶೀಲನೆ ವೇಳೆ ಹಲವಾರು ಲೋಪದೋಷಗಳು ಕಂಡು ಬಂದಿವೆ ಎಂದು ಸ್ಪಷ್ಟಪಡಿಸಿದರು.
ಅಧಿಕಾರಿಗಳು ಪರಿಶೀಲನೆ ನಡೆಸುತಿದ್ದಾರೆ. ಅಪ್ಲಿಕೇಶನ್ ಗಳನ್ನು ಹಾಕುವುದರಲ್ಲಿ ಫಿಸಿಕಲ್, ಆನ್ಲೈನ್ ಎರಡರಲ್ಲೂ ಹಾಕಬೇಕು. ಅವರಿಗೆ ಆಗುತ್ತಿರುವ ಸಮಸ್ಯೆಗಳೇನು? ಇಲ್ಲಿ ನಡೆಯುತ್ತಿರುವ ಅವ್ಯವಹಾರವೇನು? ಕೆಲವು ಅಧಿಕಾರಿಗಳಿಗೆ ಕರೆ ಮಾಡಿದರೂ ಉತ್ತರವಿಲ್ಲ. ಡೆಪ್ಯೂಟಿ ಕಮಿಷನರ್ ಫೋನ್ ಪಿಕ್ ಮಾಡುತ್ತಿಲ್ಲ. ಯಶವಂತಪುರ ಹಾಗೂ ಬ್ಯಾಟರಾಯನಪುರ ಎರಡರಲ್ಲೂ ಅಧಿಕಾರಿಗಳು ಇಲ್ಲ. ರಿಜಿಸ್ಟರ್ ನಲ್ಲಿ ಎಂಟ್ರಿ ಮಾಡದೇ ಕೆಲ ಅಧಿಕಾರಿಗಳು ಹೊರಗಡೆ ಹೋಗಿದ್ದಾರೆ. ಕೆಲವು ಕಡೆ ಡ್ರಗ್ಸ್ ಗಳು ಸಿಕ್ಕಿವೆ. ಲೆಕ್ಕಕ್ಕೆ ಸಿಗದ ೨ ಲಕ್ಷ ಕ್ಯಾಶ್ ಸಹ ಸಿಕ್ಕಿದ್ದು, ಎಲ್ಲವನ್ನೂ ಸೀಜ್ ಮಾಡಲಾಗುವುದು ಎಂದು ಹೇಳಿದರು.
ಅಪ್ಲಿಕೆಂಟ್ಸ್ ಗೆ ಅಪ್ಲಿಕೇಶನ್ ಹಾಕುವ ಪ್ರೊಸಿಜರ್. ಅರ್ಜಿಗಳನ್ನು ಯಾಕೆ ರಿಜೆಕ್ಟ್ ಮಾಡುತ್ತಾರೆ. ಅವರಿಗೇನು ಕಿರುಕುಳವಾಗುತ್ತಿದೆ? ಲೈಸನ್ಸ್ ವರ್ಗಾವಣೆ, ಅನುಮತಿ, ರಿನಿವಲ್, ಶಿಫ್ಟಿಂಗ್, ಈ ಎಲ್ಲಾ ವಿಭಾಗದಲ್ಲೂ ಸಹ ಅವ್ಯವಹಾರ ನಡೆಯುತ್ತಿದೆ ಎಂದು ನಮಗೆ ದೂರು ಬಂದಿದೆ. ಡೆಪ್ಯುಟಿ ಕಮಿಷನರ್ ಗಳಿಗೆ ನಮ್ಮ ಸಿಬ್ಬಂದಿಗಳು ಕರೆ ಮಾಡಿದರೇ ಸ್ವಿಚ್ ಆಫ್ ಬರುತ್ತಿದೆ. ಲೊಕಾಯುಕ್ತರು ಬಂದಿದ್ದಾರೆ ಎಂದು ಆಫ್ ಮಾಡಿಕೊಂಡು ಕೂತ್ರೆ ಬಿಡೊತ್ತೇವೆಯೇ ನಾವು. ನಾಳೆ ಕರೆಸುತ್ತೇವೆ. ಎಲ್ಲಾ ಫೈಲ್ ಸೀಜ್ ಮಾಡಿ ತೆಗೆದುಕೊಂಡು ಹೊಗಲಾಗುವುದು ಎಂದರು.
ಏನು ಲೊಪ ಇದೆ ಎಂದು ಪರಿಶೀಲಿಸಿ ಪತ್ತೆ ಮಾಡುತ್ತೇವೆ. ಸರಿ ಮಾಡಲು ಹಲವಾರು ವಿಧಾನಗಳಿವೆ. ಕೆಲವು ಕಡೆ ಸಿಬ್ಬಂದಿಗಳಲ್ಲದ ವ್ಯಕ್ತಿಗಳು ಕೆಲಸ ಮಾಡುತಿದ್ದಾರೆ.. ಒಬ್ಬ ವ್ಯಕ್ತಿ ಸಿಬ್ಬಂದಿಯಲ್ಲ. ಆದರೆ ಆತನನ್ನು ಇನ್ಸ್ ಪೆಕ್ಟರ್ ಅಪಾಯಿಂಟ್ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಯಾಕೆ ಎಂದರೇ ಪೊಸ್ಟ್ ಇಲ್ಲ. ಕೆಲಸ ಜಾಸ್ತಿ ಇದೆ.. ಅದಕ್ಕಾಗಿ ಆತನ ಕಂಪ್ಯೂಟರ್ ಆಪರೇಟರ್ ಆಗಿ ತಗೊಂಡಿದ್ದೇವೆ ಎಂದಿದ್ದಾರೆ. ಅವರ ಹೇಳಿಕೆ ಪಡೆದುಕೊಳ್ಳುತ್ತೇವೆ. ಅದು ಸರಿಯೋ ತಪ್ಪೊ.. ಅದನ್ನು ಯಾಕೆ ಹಾಗೆ ಮಾಡಲಿಕ್ಕೆ ಬರತ್ತೆ ಎಂದು ವಿಚಾರಣೆ ಮಾಡಲಾಗುವುದು ಎಂದು ತಿಳಿಸಿದರು.
ಕಚೇರಿಗೆ ಬರದೇ ಇರುವವರಿಗೆ ಕಾರಣ ಹೇಳಲು ಅವಕಾಶ ಕೊಡಬೇಕು. ನಂತರ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ತಪ್ಪುಗಳಿಗೆ ಸಮಂಜಸ ಉತ್ತರ ಇದ್ದರೇ ಒಪ್ಪಿಕೊಳ್ಳುತ್ತೇವೆ. ಇಲ್ಲದಿದ್ದರೇ ಕಾನೂನು ಪ್ರಕಾರ ಏನು ಮಾಡಬೇಕು ಅದು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.