ಮನೆ ಪೌರಾಣಿಕ ಮಹರ್ಷಿ ದಧೀಚಿ ಮತ್ತು ಸಾರಸ್ವತ ಮುನಿ

ಮಹರ್ಷಿ ದಧೀಚಿ ಮತ್ತು ಸಾರಸ್ವತ ಮುನಿ

0

ಈ ಕಥೆಯನ್ನು ವೈಶಂಪಾಯನನು ಜನಮೇಜಯನಿಗೆ ಶಲ್ಯ ಪರ್ವದ ಸಾರಸ್ವತಪರ್ವದ ಅಧ್ಯಾಯ 50ರಲ್ಲಿ ಹೇಳುತ್ತಾನೆ.

ಸೋಮತೀರ್ಥದಲ್ಲಿ ಉಡುಪತೀ ಚಂದ್ರನು ರಾಜಸೂಯವನ್ನು ನಡೆಸಿದ್ದನು. ಅಲ್ಲಿ ಹಿಂದೆ ಸಾರಸ್ವತ ಮುನಿಯು ಹನ್ನೆರಡು ವರ್ಷಗಳ ಅನಾವೃಷ್ಟಿಯಿಂದ ಪೀಡಿತರಾಗಿದ್ದ ದ್ವಿಜೋತ್ತಮರಿಗೆ ವೇದಾಧ್ಯಯವನ್ನು ಮಾಡಿಸಿದ್ದನು.

ಹಿಂದೆ ದಧೀಚ ಎಂದು ವಿಖ್ಯಾತನಾದ ಬ್ರಹ್ಮಚಾರೀ ಜಿತೇಂದ್ರಿಯ ಮಹಾತಪಸ್ವಿ ಧೀಮಾನ್ ಮುನಿಯಿದ್ದನು. ಅವನ ತಪಸ್ಸಿನಿಂದ ಶಕ್ರನು ಸತತವೂ ಭಯಪಡುತ್ತಿದ್ದನು. ಬಹುವಿಧದ ಫಲಗಳಿಂದಲೂ ಅವನನ್ನು ಲೋಭಗೊಳಿಸಲು ಶಕ್ಯವಾಗಲಿಲ್ಲ. ಅವನನ್ನು ಲೋಭಗೊಳಿಸಲು ಪಾಕಶಾಸನನು ದಿವ್ಯ ಪುಣ್ಯೆ ಸುಂದರಿ ಅಪ್ಸರೆ ಅಲಂಬುಸಳನ್ನು ಕಳುಹಿಸಿದನು. ಆ ಮಹಾತ್ಮನು ಸರಸ್ವತೀ ತೀರದಲ್ಲಿ ದೇವತೆಗಳಿಗೆ ತರ್ಪಣೆಗಳನ್ನು ನೀಡುತ್ತಿರುವಾಗ ಆ ಭಾಮಿನಿಯು ಅವನ ಸಮೀಪ ಹೋದಳು. ಅವಳ ದಿವ್ಯ ದೇಹವನ್ನು ಕಂಡು ಭಾವಿತಾತ್ಮ ಋಷಿಯ ರೇತಸ್ಸು ಸರಸ್ವತಿಯಲ್ಲಿಯೇ ಸ್ಖಲನವಾಯಿತು. ಅದನ್ನು ಆ ನದಿಯು ಸ್ವೀಕರಿಸಿದಳು. ತನ್ನ ಮಡಿಲಲ್ಲಿ ಬಿದ್ದ ಆ ರೇತಸ್ಸನ್ನು ನೋಡಿ ಪುತ್ರನಿಗೋಸ್ಕರ ಆ ಮಹಾನದಿಯು ಅದನ್ನು ಗರ್ಭದಲ್ಲಿ ಧರಿಸಿದಳು. ಸಮಯಾನಂತರದಲ್ಲಿ ಆ ಶ್ರೇಷ್ಠ ನದಿಯು ಹೆತ್ತು, ಮಗನನ್ನು ಎತ್ತಿಕೊಂಡು ಋಷಿಯ ಬಳಿ ಹೋದಳು. ಋಷಿಸಂಸದಿಯಲ್ಲಿದ್ದ ಆ ಮುನಿಸತ್ತಮನನ್ನು ಕಂಡು ಅವನಿಗೆ ಪುತ್ರನನ್ನು ನೀಡುತ್ತಾ ನದಿಯು ಹೇಳಿದಳು: “ಬ್ರಹ್ಮರ್ಷೇ! ಇವನು ನಿನ್ನ ಮಗ. ಹಿಂದೆ ಅಪ್ಸರೆ ಅಲಂಬುಸಳನ್ನು ನೋಡಿ ನಿನ್ನ ರೇತಸ್ಕಲನವಾದಾಗ ನಿನ್ನ ಮೇಲಿನ ಭಕ್ತಿಯಿಂದ ಇವನನ್ನು ನನ್ನ ಗರ್ಭದಲ್ಲಿ ಧರಿಸಿದ್ದೆ. ನಿನ್ನ ತೇಜಸ್ಸು ನಾಶವಾಗಬಾರದೆಂದು ನಿಶ್ಚಯಿಸಿ ನಿನ್ನ ಮೇಲಿನ ಭಕ್ತಿಯಿಂದ ನಾನು ಅದನ್ನು ನನ್ನ ಉದರದಲ್ಲಿ ಧರಿಸಿದ್ದೆ. ನಾನು ನಿನಗೊಪ್ಪಿಸುತ್ತಿರುವ ನಿನ್ನ ಈ ಅನಿಂದಿತ ಮಗನನ್ನು ಸ್ವೀಕರಿಸು!”

ಹೀಗೆ ಹೇಳಲು ಸಂತೋಷದಿಂದ ಆ ದ್ವಿಜೋತ್ತಮನು ಪುತ್ರನನ್ನು ಕೈಗೆತ್ತಿಕೊಂಡು ಪ್ರೀತಿಯಿಂದ ಅವನ ನೆತ್ತಿಯನ್ನು ಆಘ್ರಾಣಿಸಿದನು, ಅವನನ್ನು ಬಹಳ ಹೊತ್ತು ಅಪ್ಪಿಕೊಂಡೇ ಇದ್ದ ಆ ಮಹಾಮುನಿಯು ಪ್ರೀತಿಯಿಂದ ಸರಸ್ವತಿಗೆ ವರವನ್ನಿತ್ತನು: “ಸುಭಗೇ! ನಿನ್ನ ನೀರಿನಿಂದ ತರ್ಪಣೆಯನ್ನು ಸ್ವೀಕರಿಸಿದ ವಿಶ್ವೇದೇವರು, ಮತ್ತು ಪಿತೃಗಣಗಳೊಂದಿಗೆ ಗಂಧರ್ವಾಪ್ಸರ ಗಣಗಳು ತೃಪ್ತಿಹೊಂದುತ್ತಾರೆ.”

ಹೀಗೆ ಹೇಳಿ ಪರಮಹೃಷ್ಟನಾದ ಅವನು ಆ ಮಹಾನದಿಯನ್ನು ಸ್ತುತಿಸಿದನು: “ಮಹಾಭಾಗೇ! ಹಿಂದೆ ನೀನು ಬ್ರಹ್ಮಸರಸ್ಸಿನಿಂದ ಹರಿದುಬಂದೆ. ನದಿಶ್ರೇಷ್ಠಳೇ! ಸಂಶಿತವ್ರತ ಮುನಿಗಳು ನಿನ್ನನ್ನು ತಿಳಿದಿದ್ದಾರೆ. ಪ್ರಿಯದರ್ಶನೇ! ನನಗೆ ಕೂಡ ನೀನು ಸತತವೂ ಪ್ರಿಯವನ್ನುಂಟುಮಾಡುತ್ತಿರುವೆ. ಆದುದರಿಂದ ವರವರ್ಣಿನೀ! ನಿನ್ನ ಈ ಮಗನು ಮಹಾನ್ ಸಾರಸ್ವತನೆಂದಾಗುತ್ತಾನೆ. ನಿನ್ನ ಲೋಕಭಾವನ ಮಗನು ನಿನ್ನದೇ ಹೆಸರಿನಿಂದ ಪ್ರಥಿತನಾಗುವನು. ಸಾರಸ್ವತನೆಂದು ಖ್ಯಾತನಾಗಿ ಮಹಾತಪಸ್ವಿಯಾಗುತ್ತಾನೆ. ಈ ಸಾರಸ್ವತನು ಹನ್ನೆರಡು ವರ್ಷಗಳ ಅನಾವೃಷ್ಟಿಯಾದಾಗ ದ್ವಿಜರ್ಷಭರಿಗೆ ವೇದಾಧ್ಯಯವನ್ನು ನೀಡುತ್ತಾನೆ. ಸರಸ್ವತೀ! ನನ್ನ ಪ್ರಸಾದದಿಂದ ನೀನು ಎಲ್ಲ ಪುಣ್ಯ ನದಿಗಳಿಗಿಂತಲೂ ಹೆಚ್ಚಿನ ಪುಣ್ಯೆಯಾಗುತ್ತೀಯೆ.” ಹೀಗೆ ಅವನಿಂದ ಸ್ತುತಿಸಲ್ಪಟ್ಟು ಮತ್ತು ವರವನ್ನು ಪಡೆದು ಮಹಾನದಿಯು ಸಂತಸದಿಂದ ಪುತ್ರನನ್ನು ಕರೆದುಕೊಂಡು ಹೋದಳು.

ಇದೇ ಸಮಯದಲ್ಲಿ ದೇವ-ದಾನವರ ವಿರೋಧವುಂಟಾಗಲು ಶಕ್ರನು ಆಯುಧಗಳನ್ನು ಹುಡುಕುತ್ತಾ ಮೂರು ಲೋಕಗಳಲ್ಲಿಯೂ ಸಂಚರಿಸತೊಡಗಿದನು. ಆದರೆ ದೇವದ್ವೇಷಿಗಳನ್ನು ವಧಿಸಲು ಯೋಗ್ಯವಾದ ಆಯುಧಗಳು ಅವನಿಗೆ ದೊರಕಲೇ ಇಲ್ಲ. ಆಗ ಶಕ್ರನು ಸುರರಿಗೆ ಹೇಳಿದನು: “ದಧೀಚಿಯ ಅಸ್ಥಿಯಲ್ಲದೇ ಬೇರೆ ಯಾವುದರಿಂದಲೂ ದೇವದ್ವೇಷೀ ಮಹಾಸುರರನ್ನು ಸಂಹರಿಸಲು ನನಗೆ ಶಕ್ಯವಿಲ್ಲ. ಆದುದರಿಂದ ಋಷಿಶ್ರೇಷ್ಠ ದಧೀಚಿಯಲ್ಲಿಗೆ ಹೋಗಿ ಅಸ್ಥಿಯನ್ನು ನೀಡೆಂದು ಪ್ರಾರ್ಥಿಸಿಕೊಳ್ಳಿ. ಅದರಿಂದ ನಾವು ಶತ್ರುಗಳನ್ನು ವಧಿಸಬಲ್ಲೆವು.” ದೇವತೆಗಳು ಪ್ರಯತ್ನಪಟ್ಟು ಅಸ್ಥಿಗಳನ್ನು ಕೇಳಲು ಆ ಋಷಿವರನು ಏನೂ ವಿಚಾರಮಾಡದೇ ಪ್ರಾಣತ್ಯಾಗಮಾಡುತ್ತೇನೆಂದು ಹೇಳಿ ಹಾಗೆಯೇ ಮಾಡಿದನು. ದೇವತೆಗಳ ಪ್ರಿಯವಾದುದನ್ನು ಮಾಡಿದ ಅವನು ಅಕ್ಷಯಲೋಕಗಳನ್ನು ಪಡೆದನು. ಅವನ ಅಸ್ಥಿಗಳಿಂದ ಸಂತೋಷಗೊಂಡ ಶಕ್ರನು ಅದರಿಂದ ನಾನಾರೀತಿಯ ದಿವ್ಯ ಆಯುಧಗಳನ್ನು – ಅನೇಕ ವಜ್ರಗಳನ್ನೂ, ಚಕ್ರಗಳನ್ನೂ, ಗದೆಗಳನ್ನೂ, ಗುರುದಂಡಗಳನ್ನೂ ಮಾಡಿಸಿದನು. ಪ್ರಜಾಪತಿಸುತ ಲೋಕಭಾವನ ಪರಮಋಷಿ ಭೃಗುವು ದಧೀಚಿಯನ್ನು ತೀವ್ರ ತಪಸ್ಸಿನಿಂದ ಪಡೆದುಕೊಂಡಿದ್ದನು. ಲೋಕಗಳ ಸಾರಗಳಿಂದ ನಿರ್ಮಿತನಾಗಿದ್ದ ಅವನು ಅತಿಕಾಯನೂ ತೇಜಸ್ವಿಯೂ ಆಗಿದ್ದನು. ಪರ್ವತದಂತೆ ಎತ್ತರವಾಗಿಯೂ ಭಾರವಾಗಿಯೂ ಇದ್ದನು. ಆ ಪ್ರಭುವು ತನ್ನ ಮಹಿಮೆಯಿಂದ ಸರ್ವತ್ರ ವಿಖ್ಯಾತನಾಗಿದ್ದನು. ಪಾಕಶಾಸನ ಇಂದ್ರನು ಅವನ ಮಹಾತೇಜಸ್ಸಿಗೆ ಹೆದರಿ ಸದಾ ಉದ್ವಿಗ್ನನಾಗುತ್ತಿದ್ದನು. ಮಂತ್ರಯುಕ್ತವಾದ ಬ್ರಹ್ಮತೇಜಸ್ಸಿನಿಂದ ಹುಟ್ಟಿದ್ದ ಆ ವಜ್ರವನ್ನು ತುಂಬಾ ಕ್ರೋಧದಿಂದ ಪ್ರಯೋಗಿಸಿ ಭಗವಾನ್ ಇಂದ್ರನು ಎಂಟುನೂರಾಹತ್ತು ದೈತ್ಯ-ದಾನವ ವೀರರನ್ನು ಸಂಹರಿಸಿದನು.

ಅನಂತರ ಕಾಲವು ಕಳೆಯಲು ಮಹಾಭಯಂಕರವಾದ ಹನ್ನೆರಡು ವರ್ಷಗಳ ಅನಾವೃಷ್ಟಿಯು ಬಂದೊದಗಿತು. ಹನ್ನೆರಡು ವರ್ಷಗಳ ಆ ಬರಗಾಲದಲ್ಲಿ ಹಸಿವು ಬಾಯಾರಿಕೆಗಳಿಂದ ಬಳಲಿದ ಮಹರ್ಷಿಗಳು ಜೀವಿಕೆಗಾಗಿ ಎಲ್ಲ ದಿಕ್ಕುಗಳಿಗೂ ಓಡಿ ಹೋದರು. ದಿಕ್ಕಾಪಾಲಾಗಿ ಓಡಿ ಹೋಗುತ್ತಿರುವ ಅವರನ್ನು ನೋಡಿ ಸಾರಸ್ವತ ಮುನಿಯು ತಾನೂ ಹೋಗಲು ಮನಸ್ಸುಮಾಡಿದನು. ಆಗ ಸರಸ್ವತಿಯು ಅವನಿಗೆ ಹೇಳಿದಳು: “ಮಗನೇ! ಇಲ್ಲಿಂದ ಹೋಗಬೇಡ! ನಿನಗೆ ಆಹಾರವಾಗಿ ಸದಾ ಉತ್ತಮ ಮೀನುಗಳನ್ನು ಇಲ್ಲಿಯೇ ನೀಡುತ್ತೇನೆ!”

ಹೀಗೆ ಹೇಳಲು ಅವನು ನಿತ್ಯವೂ ಆಹಾರವನ್ನು ಸೇವಿಸಿಕೊಂಡು ಪ್ರಾಣಗಳನ್ನೂ ವೇದಗಳನ್ನೂ ಉಳಿಸಿಕೊಂಡು ಪಿತೃ-ದೇವತೆಗಳನ್ನು ತೃಪ್ತಿಪಡಿಸಿದ್ದನು. ಆ ಅನಾವೃಷ್ಟಿಯು ಮುಗಿಯಲು ಮಹರ್ಷಿಗಳು ಪುನಃ ವೇದಾಧ್ಯಯನದ ಕಾರಣದಿಂದ ಅನ್ಯೋನ್ಯರನ್ನು ಪ್ರಶ್ನಿಸತೊಡಗಿದರು. ಹಸಿವುಬಾಯಾರಿಕೆಗಳಿಂದ ಬಳಲಿದ್ದ ಆ ವಿಧ್ವಾಂಸರಲ್ಲಿ ವೇದವು ನಷ್ಟವಾಗಿ ಹೋಗಿತ್ತು. ಅವರೆಲ್ಲರಲ್ಲಿ ವೇದಗಳನ್ನು ತಿಳಿದಿದ್ದ ಒಬ್ಬ ಪ್ರತಿಭಾವಂತನೂ ಇರಲಿಲ್ಲ. ಅವರಲ್ಲಿಯೇ ಒಬ್ಬ ಋಷಿಯು ವೇದಾಧ್ಯಯನ ಮಾಡುತ್ತಿದ್ದ ಸಂಶಿತಾತ್ಮ ಋಷಿಸತ್ತಮ ಸಾರಸ್ವತನ ಬಳಿ ಬಂದನು. ಅವನು ಹೋಗಿ ಇತರರಿಗೆ ನಿರ್ಜನ ವನದಲ್ಲಿ ಸ್ವಾಧ್ಯಾಯಮಾಡುತ್ತಿರುವ ಅತಿಪ್ರಭೆಯುಳ್ಳ, ಅಮರನಂತಿದ್ದ ಸಾರಸ್ವತ ಮುನಿಯ ಕುರಿತು ಹೇಳಿದನು. ಆ ಎಲ್ಲ ಮಹರ್ಷಿಗಳೂ ಅಲ್ಲಿಗೆ ಒಟ್ಟಾಗಿ ಹೋಗಿ ಮುನಿಶ್ರೇಷ್ಠ ಸಾರಸ್ವತನಿಗೆ ಹೇಳಿದರು: “ನಮಗೂ ವೇದಾಧ್ಯಯನ ಮಾಡಿಸು!” ಎಂದು ಅವರು ಹೇಳಲು ಮುನಿಯು “ನೀವುಗಳು ವಿಧಿವತ್ತಾಗಿ ನನ್ನ ಶಿಷ್ಯತ್ವವನ್ನು ಅಂಗೀಕರಿಸಿರಿ!” ಎಂದನು. ಆಗ ಆ ಋಷಿಗಣವು “ಪುತ್ರಕ! ನೀನು ಬಾಲಕನಾಗಿರುವೆ!” ಎಂದು ಹೇಳಿದರು. ಆಗ ಅವನು ಪುನಃ ಮುನಿಗಳಿಗೆ ಹೇಳಿದನು: “ಇದರಿಂದ ಧರ್ಮವು ನಶಿಸುವುದಿಲ್ಲ! ಅಧರ್ಮದಿಂದ ಯಾರು ಹೇಳಿಕೊಡುತ್ತಾರೋ, ಅಧರ್ಮದಿಂದ ಮತ್ತೆ ಯಾರು ಅದನ್ನು ಸ್ವೀಕರಿಸುತ್ತಾರೋ ಅವರಿಬ್ಬರೂ ಬೇಗನೆ ನಾಶಹೊಂದುತ್ತಾರೆ ಅಥವಾ ವೈರಿಗಳಾಗುತ್ತಾರೆ. ಸಣ್ಣವರು ದೊಡ್ದವರೆಂದಾಗಲೀ, ಸಂಪತ್ತಿರುವವರಿಗಾಗಲೀ, ಬಂಧುಗಳಿಗಾಗಲೀ ಋಷಿಗಳು ಧರ್ಮವನ್ನು ಮಾಡಿಟ್ಟಿರುವುದಿಲ್ಲ. ಧರ್ಮವನ್ನು ಅನುಸರಿಸುವವನೇ ದೊಡ್ಡವನು!”

ಅವನ ಆ ಮಾತನ್ನು ಕೇಳಿ ಮುನಿಗಳು ವಿಧಿಪೂರ್ವಕವಾಗಿ ಅವನಿಂದ ವೇದಗಳನ್ನು ಪಡೆದು ಪುನಃ ಧರ್ಮನಿರತರಾದರು. ಅರವತ್ತು ಸಾವಿರ ಮುನಿಗಳು ವೇದಾಧ್ಯಯನ ಕಾರಣದಿಂದ ವಿಪ್ರರ್ಷಿ ಸಾರಸ್ವತನ ಶಿಷ್ಯತ್ವವನ್ನು ವಹಿಸಿಕೊಂಡರು. ಬಾಲಕನಾಗಿದ್ದರೂ ಗುರುಸ್ಥಾನದಲ್ಲಿದ್ದ ಆ ವಿಪ್ರರ್ಷಿಯ ಆಸನಾರ್ಥವಾಗಿ ಎಲ್ಲರೂ ಮುಷ್ಟಿ ಮುಷ್ಟಿ ದರ್ಭೆಗಳನ್ನು ಹಿಡಿದುಕೊಂಡು ಬರುತ್ತಿದ್ದರು.

ಹಿಂದಿನ ಲೇಖನಅಪಘಾತ ಪ್ರಕರಣಗಳಲ್ಲಿ ವಿಮೆ ಇಲ್ಲದ ಕಾರಣ ನೀಡಿ ವಾಹನ ಬಿಡುಗಡೆ ಮಾಡಲು ನಿರಾಕರಿಸುವಂತಿಲ್ಲ: ಹೈಕೋರ್ಟ್
ಮುಂದಿನ ಲೇಖನಕರ್ನಾಟಕದ ಮರಾಠಿಗರಿಗಾಗಿ ಎಂಥ ಹೋರಾಟಕ್ಕೂ ಸಿದ್ದ: ದೇವೇಂದ್ರ ಫಡಣವೀಸ್