ಮೈಸೂರು(Mysuru): ಕಲಿಕೆಗಾಗಿ ಸಿಗುವ ಯಾವುದೇ ವೇದಿಕೆಯನ್ನು ಸದ್ಬಳಕೆ ಮಾಡಿಕೊಳ್ಳುವುದರ ಜೊತೆಗೆ ಕಲಿಕೆಯು ನಿರಂತರವಾಗಿರಬೇಕು ಎಂದು ಹಿರಿಯ ಚಲನಚಿತ್ರ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್ ಅವರು ಹೇಳಿದರು.
ಗುರುವಾರ ನಗರದ ಮೈಸೂರು ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಚಲನಚಿತ್ರೋತ್ಸವ ಉಪಸಮಿತಿಯ ವತಿಯಿಂದ ನಡೆದ ಚಿತ್ರ ನಿರ್ಮಾಣ ಪೂರ್ವ ತಯಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಲಿಕೆಗಳಿಗಾಗಿಯೇ ಬೆಂಗಳೂರಿನಲ್ಲಿ ಒಂದು ಪುಟ್ಟ ಸಿನಿಮಾ ಶಾಲೆಯನ್ನು ನಡೆಸುತ್ತೆನೆ. ಇದರ ಕಷ್ಟನಷ್ಟಗಳ ಬಗ್ಗೆ ನನಗೆ ಅರಿವಿದೆ. ನಿಶಂಶಯವಾಗಿ ಕಲಿಕೆಯನ್ನು 03 ದಿನಗಳಲ್ಲಿ ಕಲಿಯಲು ಸಾಧ್ಯವಿಲ್ಲ. ದಸರಾ ವಿಶೇಷವಾಗಿ ಹಲವಾರು ವೇದಿಕೆಗಳು ಸಿದ್ದಗೊಳ್ಳುತ್ತದೆ. ಅಂತಹ ವೇದಿಕೆಗಳನ್ನು ನಾವು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಇಲ್ಲಿಗೆ ಬಂದರೆ ಯಾರೇ ಆಗಲಿ ಬರಿ ಕೈಯಲ್ಲಿ ಹೋಗಬಾರದು. ಏನನ್ನಾದರೂ ಕಲಿತು ಹಾಗೂ ಪಡೆದುಕೊಂಡು ಹೋಗಬೇಕು. ಕಾರಣ ಅರಿವು ಎಂದು ತುಂಬಾ ಮುಖ್ಯ. ಪ್ರತಿಭೆಯು ವ್ಯಕ್ತಿಗತವಾದದ್ದು, ಹೃದ್ಘತವಾದದ್ದು. ಇದನ್ನು ಯಾರು ಹೇಳಿಕೊಡಲು ಸಾಧ್ಯವಿಲ್ಲ. ಹೀಗಾಗಿ ಪ್ರತಿಭೆಯನ್ನು ಆಸಕ್ತಿಯಿಂದ ಕಲಿಯಬೇಕು ಹಾಗೂ ಸಮಾಜದ ಜೊತೆ ಒಡನಾಟವಿಟ್ಟುಕೊಳ್ಳುವುದರಿಂದ ಪ್ರತಿಭೆಯನ್ನು ಮೊನಚುಗೊಳಿಸಿಕೊಳ್ಳಬೇಕು ಎಂದು ಹೇಳಿದರು.
ನಮ್ಮಲ್ಲಿರುವ ದಟ್ಟವಾದ ಪ್ರತಿಭೆಯನ್ನು ಹೊರಗಿನಿಂದ ಯಾರು ಕಲಿಸಲು ಸಾಧ್ಯವಿಲ್ಲ. ಯಾರಿಂದಲು ಕೊಡಲು ಹಾಗೂ ತೆಗೆದುಕೊಳ್ಳಲು ಸಾಧ್ಯವಿಲ್ಲ. ಪ್ರತಿಭೆ ಆಸ್ತಿ ಇದ್ದಹಾಗೆ. ಹೀಗಾಗಿ ಪ್ರತಿಭೆಯು ಸೃಜನಶೀಲ ಕಾರ್ಯದ ಮೂಲಕ ಹೊರಹೊಮ್ಮುತ್ತದೆ ಎಂದರು.
ಸಿನಿಮಾ ಎಂಬುದು ಇಂದು ಎಷ್ಟರ ಮಟ್ಟಿಗೆ ಬೆಳೆದಿದೆ ಎಂದರೆ ಸಾವಿರಾರು ವರ್ಷಗಳಿಂದ ಬಂದಿದ್ದ ಸಂಗೀತ, ಸಾಹಿತ್ಯ, ನಾಟಕಗಳನ್ನು ಮೊಸಕುಗೊಳಿಸಿ ಅದರ ಮೇಲೆ ನಿಂತು ವಿಜೃಂಭಿಸುತ್ತಿರುವ ಒಂದು ಪ್ರಭಾವಶಾಲಿ ಮಾಧ್ಯಮ. ಅದರ ಭಾಗಗವಾಗಿ ವೆಬ್ ಸಿರೀಸ್, ಡ್ಯಾಕುಮೆಂಟರಿ, ಕಿರುಚಿತ್ರಗಳಿವೆ. ಇವುಗಳಲ್ಲಿ ನೀವು ತೊಡಗಿಸಿಕೊಳ್ಳಲು ಹಾಗೂ ಬೆಳೆಯಲು ಸಾಕಷ್ಟು ಅವಕಾಶಗಳಿವೆ ಅಷ್ಟೇ ಕಠಿಣವಾದ ಸ್ಪರ್ಧೆ ಇದೆ. ಹೀಗಾಗಿ ಇದರಲ್ಲಿ ಯಶಸ್ಸು ಪಡೆಯಲು ಬಯಸುವವರು ಶ್ರಮ ಪಡಬೇಕು ಎಂದರು.
ಸಿನಿಮಾಕ್ಕೆ ಅದರದ್ದೆ ಆದ ವ್ಯಾಕರಣ ಹಾಗೂ ಮಾನದಂಡಗಳಿವೆ. ಇಂತಹ ಕಡೆಗೆ ತರುಣ ವಿದ್ಯಾರ್ಥಿಗಳು, ಆಸಕ್ತರು ಗಮನ ಹರಿಸಬೇಕು. ಸಿನಿಮಾ ಎಂಬುದು ಸಾಹಿತ್ಯ, ಸಂಗೀತ, ನೃತ್ಯ, ಶಿಲ್ಪಕಲೆ ಹಾಗೂ ಚಿತ್ರಕಲೆಗಳಿಗಿಂತ ತುಂಬಾ ಭಿನ್ನವಾದದ್ದು. ಇದೊಂದು ಬಹುಪ್ರತಿಭೆಗಳನ್ನು ಬೆಳಕಿಗೆ ತರುವ ಮಾಧ್ಯಮವಾಗಿದೆ ಎಂದರು.
ದಸರಾ ಚಲನಚಿತ್ರೋತ್ಸವದ ವಿಶೇಷಾಧಿಕಾರಿ ಆರ್.ಶೇಷ ಅವರು ಮಾತನಾಡಿ, ಇಂತಹ ಕಾರ್ಯಾಗಾರವನ್ನು ಶಿಬಿರಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು. ಅಲ್ಲದೆ ಚಲನಚಿತ್ರೋತ್ಸವವು ಶೀಘ್ರವಾಗಿ ನಡೆಲಿದ್ದು ಅದರ ಉದ್ಘಾಟನೆಯನ್ನು ಚಲನಚಿತ್ರ ನಟ ಶಿವರಾಜ್ ಕುಮಾರ್ ಉದ್ಘಾಟಿಸುವರು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಕೆಯ ಸಹಾಯಕ ನಿದೇಶಕರಾದ ಹಾಗೂ ಚಲನಚಿತ್ರ ಉಪಸಮಿತಿಯ ಕಾರ್ಯದರ್ಶಿ ಟಿ.ಕೆ ಹರೀಶ್, ನಿರ್ದೇಶಕರಾದ ಮಂಸೋರೆ, ಪ್ರವೀಣ್ ಕೃಪಾಕರ್ ಸೇರಿದಂತೆ ಇತರರು ಹಾಜರಿದ್ದರು.