ಬೆಂಗಳೂರು (Bengaluru): ಆರ್ಥಿಕವಾಗಿ ಸಂಪಾದನೆ ಮಾಡುವ ಸಾಮರ್ಥ್ಯ ಹೊಂದಿರುವ ಸಶಕ್ತ ಪುರುಷ ತನ್ನ ಪತ್ನಿಯಿಂದ ಶಾಶ್ವತ ಜೀವನಾಂಶ ಕೇಳಲು ಅವಕಾಶವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಉಡುಪಿಯ ಬಡನಿಡಿಯೂರು ಗ್ರಾಮದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಅಲೋಕ್ ಅರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಮೇಲಿನಂತೆ ಹೇಳಿದೆ.
‘ದೇವಾಲಯವೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದ ಮೇಲ್ಮನವಿದಾರರು ಕೆಲಸ ಕಳೆದುಕೊಂಡಿದ್ದು, ತಮ್ಮ ಜೀವನ ನಿರ್ವಹಣೆಗೆ ಯಾವುದೇ ಆದಾಯವಿಲ್ಲ’ ಎಂದು ಮಂಡಿಸಿದ್ದ ವಾದವನ್ನು ತಳ್ಳಿಹಾಕಿರುವ ನ್ಯಾಯಪೀಠ, ಹಿಂದೂ ವಿವಾಹ ಕಾಯ್ದೆಯ ಕಲಂ 25ರ ಅಡಿ ಪತ್ನಿಯಿಂದ ಜೀವನಾಂಶ ಕೋರಿದ್ದ ಪತಿಯ ಅರ್ಜಿಯನ್ನು ವಜಾಗೊಳಿಸಿದೆ.