ಮಂಡ್ಯ, ಮೇ 25: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕು ಕಂದಾಯ ಇಲಾಖೆಯಲ್ಲಿ ನಡೆದಿದ್ದ ಬಗರ್ಹುಕುಂ ಭೂ ಮಂಜೂರಾತಿ ಹಗರಣಕ್ಕೆ ಸಂಬಂಧಿಸಿದ ಲೋಕಾಯುಕ್ತ ತನಿಖೆಯಲ್ಲಿ ಶಾಕಿಂಗ್ ಮಾಹಿತಿ ಬೆಳಕಿಗೆ ಬಂದಿದೆ. ಕಂದಾಯ ಇಲಾಖೆಯ ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿಕೊಂಡು ನಡೆಸಿದ್ದ ಭೂ ಮಾಫಿಯಾದ ಅಕ್ರಮದಲ್ಲಿ ಸುಮಾರು 1,000 ಎಕರೆ ಸರ್ಕಾರಿ ಜಮೀನು ದುರುಪಯೋಗವಾಗಿರುವುದು ತನಿಖೆಯಿಂದ ತಿಳಿದು ಬಂದಿದೆ.
ಅರ್ಹತೆ ಇಲ್ಲದ ಸ್ಥಳೀಯ ಪ್ರಭಾವಿಗಳು, ಹಣ ನೀಡಿ ಭೂ ಮಂಜೂರಾತಿ ಪಡೆದ ಆರೋಪಿಗಳು ಹಾಗೂ ಹೊರ ರಾಜ್ಯದ ವ್ಯಕ್ತಿಗಳಿಗೂ ನಕಲಿ ದಾಖಲೆ ಸೃಷ್ಟಿಸಿ ಕಾನೂನು ಬಾಹಿರವಾಗಿ ಮಂಜೂರಾತಿ ಖಾತೆ ಮಾಡಿಕೊಡಲಾಗಿತ್ತು ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಮಾಹಿತಿ ನೀಡಿದ್ದಾರೆ.
ಈ ಅಕ್ರಮ ಪ್ರಕರಣದಲ್ಲಿ ಭಾಗಿಯಾಗಿರುವ ಸಣ್ಣ ಸಿಬ್ಬಂದಿಯಿಂದ ಹಿಡಿದು ಹಿರಿಯ ಅಧಿಕಾರಿಗಳವರೆಗೆ ಯಾರನ್ನೂ ಬಿಡುವುದಿಲ್ಲ. ಎಲ್ಲರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉಪಲೋಕಾಯುಕ್ತರು ಎಚ್ಚರಿಕೆ ನೀಡಿದ್ದಾರೆ.ಈ ಹಿಂದೆ ಜನವರಿ ತಿಂಗಳಲ್ಲಿ ಲೋಕಾಯುಕ್ತ ಪೊಲೀಸರು ನಾಗಮಂಗಲ ತಾಲೂಕು ಕಚೇರಿ ಸೇರಿದಂತೆ ಹಲವು ಕಡೆ ಏಕಕಾಲದಲ್ಲಿ ದಾಳಿ ನಡೆಸಿ ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆದು ಐವರನ್ನು ಬಂಧಿಸಿದ್ದರು. ಬಳಿಕ ಪ್ರಕರಣದ ಗಂಭೀರತೆ ಹೆಚ್ಚಿರುವ ಅನುಮಾನ ವ್ಯಕ್ತವಾದ ಹಿನ್ನೆಲೆ ವಿಸ್ತೃತ ತನಿಖೆಗೆ ಆದೇಶ ನೀಡಲಾಗಿತ್ತು.ಅಧಿಕಾರಿಗಳು ಮೂಲ ದಾಖಲೆಗಳ ಪುಟಗಳನ್ನು ಹರಿದು ತಿದ್ದುಪಡಿ ನಡೆಸಿ ಈ ಅಕ್ರಮ ಎಸಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಸದ್ಯ ಎಎಸ್ಪಿ ನೇತೃತ್ವದ ತಂಡ ಸಂಪೂರ್ಣ ವರದಿ ಸಿದ್ಧಪಡಿಸುತ್ತಿದ್ದು, ಇನ್ನಷ್ಟು ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.


















