ಹೈದರಾಬಾದ್: ಮುಂಬರಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆ ಸಿದ್ದಿಪೇಟ್ ಜಿಲ್ಲೆಯ ದೌಲ್ತಾಬಾದ್ ಮಂಡಲದ ಸೂರಂಪಲ್ಲಿ ಗ್ರಾಮದಲ್ಲಿ ಪ್ರಚಾರ ನಡೆಸುತ್ತಿದ್ದ ಮೇದಕ್ ನ ಸಂಸದ ಕೋತಾ ಪ್ರಭಾಕರ್ ರೆಡ್ಡಿ ಅವರ ಮೇಲೆ ದುಷ್ಕರ್ಮಿಯೊಬ್ಬ ಚಾಕುವಿನಿಂದ ಇರಿದಿದ್ದಾನೆ.
ದುಬ್ಬಾಕದಿಂದ ಬಿಆರ್ ಎಸ್ ಅಭ್ಯರ್ಥಿಯಾಗಿದ್ದ ಕೋತಾ ಪ್ರಭಾಕರ್ ರೆಡ್ಡಿ ಸೋಮವಾರ (ಅ.30) ಪ್ರಚಾರ ಮಾಡುವಾಗ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ.
ಕಳೆದ ಚುನಾವಣೆಯಲ್ಲಿ ಮೇದಕ್‌ನಿಂದ ಸಂಸದರಾಗಿ ಗೆದ್ದಿದ್ದ ರೆಡ್ಡಿ, ಪ್ರಸ್ತುತ ದುಬ್ಬಾಕದಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ. ಈಗಾಗಲೇ ಬಿ ಫಾರ್ಮ್ ಪಡೆದಿರುವ ಅವರು ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ, ಇಂದು ಬೆಳಗ್ಗೆ ಪಾದ್ರಿಯೊಬ್ಬರ ಕುಟುಂಬವನ್ನು ಭೇಟಿ ಮಾಡಲು ತೆರಳಿದ್ದ ವೇಳೆ ರೆಡ್ಡಿ ಮೇಲೆ ದುಷ್ಕರ್ಮಿಯೊಬ್ಬ ಹಲ್ಲೆ ನಡೆಸಿದ್ದಾನೆ.
ಕಾರ್ಯಕರ್ತನ ವೇಷಧಾರಿ ವ್ಯಕ್ತಿಯೊಬ್ಬ ಪ್ರಭಾಕರ ರೆಡ್ಡಿ ಅವರ ಹತ್ತಿರ ಬಂದು ಕೈ ಕುಲುಕುವಂತೆ ನಟಿಸಿದ್ದಾನೆ. ಕೂಡಲೇ ಜೇಬಿನಿಂದ ಚಾಕು ಹೊರತೆಗೆದು ಸಂಸದರ ಹೊಟ್ಟೆಗೆ ಇರಿದಿದ್ದಾನೆ. ದಾಳಿಕೋರನನ್ನು ಬಿಆರ್ ಎಸ್ ಕಾರ್ಯಕರ್ತರು ಹಿಡಿದು ಥಳಿಸಿದ್ದಾರೆ. ಘಟನೆ ನಡೆದ ತಕ್ಷಣ ರೆಡ್ಡಿಯವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನಂತರ ಅವರನ್ನು ಸಿಕಂದರಾಬಾದ್ ನ ಯಶೋದಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಆರೋಪಿಯನ್ನು ದುಬ್ಬಾಕ ಕ್ಷೇತ್ರದ ಚೆಪ್ಯಾಳಕು ಗ್ರಾಮದ ರಾಜು ಎಂದು ಪೊಲೀಸರು ಗುರುತಿಸಿದ್ದಾರೆ. ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿ ಕುಡಿತದ ಅಮಲಿನಲ್ಲಿ ಈ ಕೃತ್ಯ ಎಸಗಿದ್ದಾನೆ.ಆತನಿಗೆ ಕೌಟುಂಬಿಕ ಸಮಸ್ಯೆಗಳಿದ್ದವು ಎಂದು ಸಿದ್ದಿಪೇಟೆ ಸಿಪಿ ಶ್ವೇತಾ ತಿಳಿಸಿದ್ದಾರೆ.