ಮೈಸೂರು: ಆದಿತ್ಯ ಅಧಿಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯತೆಯಿಂದ ಬಿ ಶಿವಣ್ಣ ಎಂಬ ವ್ಯಕ್ತಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನೋಂದಣಿ ಪ್ರಾಧಿಕಾರದಲ್ಲಿ ಜರುಗಿದ ವಿಚಾರಣೆಯಲ್ಲಿ ಮೇಲ್ನೋಟಕ್ಕೆ ಡಾ.ಚಂದ್ರಶೇಖರ್ ವೈದ್ಯಕೀಯ ನಿರ್ಲಕ್ಷ್ಯತೆ ತೋರಿರುವುದು ಸಾಬೀತಾಗಿದೆ.
ಸದರಿ ಪ್ರಕರಣ ಮುಂದಿನ ಕ್ರಮಕ್ಕಾಗಿ ದೂರನ್ನು ಕೆಎಂಸಿಗೆ ವರ್ಗಾಯಿಸಲಾಗಿದೆ. ಮಾತ್ರವಲ್ಲದೇ ಡಾ.ಚಂದ್ರಶೇಖರ್ ಬೇಜವಬ್ದಾರಿಯುತ ವೈದ್ಯನಾಗಿ ಕೆಲಸವನ್ನು ನಿರ್ವಹಿಸಿರುವುದು ಕಂಡು ಬಂದಿದ್ದು, 50 ಸಾವಿರ ದಂಡವನ್ನು ವಿಧಿಸಿ ಮೈಸೂರು ಜಿಲ್ಲಾಧಿಕಾರಿ ಹಾಗೂ ಕೆಪಿಎಂಇ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿ.ಲಕ್ಷ್ಮಿಕಾಂತ ರೆಡ್ಡಿ ಆದೇಶಿಸಿದ್ದಾರೆ.
ಏನಿದು ಪ್ರಕರಣ?
ಡಾ.ವಾಸನ್ ನ್ಯೂರೋ ಸರ್ಜನ್ ಇವರ ಸಲಹೆ ಮೇರೆಗೆ ಬಿ. ಶಿವಣ್ಣ ಅವರು ಮೈಸೂರು ನಗರದ ಗೋಕುಲಂ ಬಡಾವಣೆಯ ಕಾಂಟೂರ ರಸ್ತೆಯಲ್ಲಿರುವ ಆದಿತ್ಯ ಅಧಿಕಾರಿ ಆಸ್ಪತ್ರೆಗೆ Cranioplasty ಸರ್ಜರಿಗಾಗಿ ದಾಖಲಾಗಿದ್ದು, ಡಾ.ಚಂದ್ರಶೇಖರ್ ಅನಸ್ತೇಶಿಯ ಕೊಟ್ಟು, ಡಾ.ವಾಸನ್ ಸರ್ಜರಿ ಮಾಡಿದ್ದಾರೆ.

ಇದಾದ ಬಳಿಕ Tracheostramy ಕ್ರೇನಿಯಾ ಪ್ಲಸ್ಟಿ ಸರ್ಜರಿ ಹಾಗೂ ಟ್ರೇಕಿಯಾಸ್ಟೊಮಿ ಸರ್ಜರಿ ಮಾಡಿದ್ದಾರೆ. ಸರ್ಜರಿ ಆದ ಜಾಗದಲ್ಲಿ ಪಸ್ ಫಾರ್ಮೇಶನ್ ತೆಗೆಯಲು ಡಾ.ಚಂದ್ರಶೇಖರ್’ರವರು ವಾಸನ್ ಅವರಿಗೆ ತಿಳಿಸದೇ ಸ್ವಇಚ್ಚೆಯಿಂದ ತೆಗೆಯಲು ಹೋಗಿ ತಲೆ ಮೂಳೆಯನ್ನು ಮುರಿದು ಹಾಕಿದ್ದಾರೆ. ಇದರ ವಿಡಿಯೋ ರೆಕಾರ್ಡಿಂಗ್ ಕೂಡ ಮಾಡಿದ್ದಾರೆ. ಈ ವೇಳ ನರ್ಸ್’ಗಳು ತಮ್ಮ ಕಾರ್ಯ ನಿರ್ವಹಣೆ ಮಾಡದಿರುವುದು ಕಂಡು ಬಂದಿದೆ. ಕ್ರೇನಿಯೋ ಫ್ಲಸ್ಟಿ ವಿಫಲವಾಗಿದ್ದು, ಪದೇ ಪದೇ ಪಸ್ ಫಾರ್ಮೇಷನ್ ಆಗುತ್ತಿದ್ದರಿಂದ ಸ್ಕಲ್ ಅನ್ನು ತೆಗೆದು ಪ್ಲಾಸ್ಟಿಕ್ ಸರ್ಜರಿ ಮಾಡಿದ್ದಾರೆ. ಈ ಎಲ್ಲಾ ಸರ್ಜರಿಗೂ ಜನರಲ್ ಅನಸ್ತೇಷಿಯಾವನ್ನು ಡಾ.ಚಂದ್ರಶೇಖರ್ ನೀಡಿದ್ದು, ಕುಟುಂಬದವರ ಅನುಮತಿ ಪಡೆದಿರುವುದಿಲ್ಲ.
ಡಾ.ಚಂದ್ರಶೇಖರ್ ಅವರು ಅನಸ್ತೇಷಿಯಾ ವಿದ್ಯಾರ್ಹತೆ ಹೊಂದದೆ ಚಿಕಿತ್ಸೆ ನೀಡಿರುವುದು ಅಪರಾಧ ಮತ್ತು ವೈದ್ಯ ವೃತ್ತಿಗೆ ಕಾನೂನು ಬಾಹಿರವಾಗಿದೆ ಎಂದು ವೈದ್ಯಕೀಯ ಜಂಟಿ ನಿರ್ದೇಶಕರ ಆದೇಶದಲ್ಲಿ ತಿಳಿಸಲಾಗಿದೆ.
ಪ್ರಕರಣ ಸಂಬಂಧ ವೈದ್ಯಕೀಯ ನಿರ್ಲಕ್ಷ್ಯತೆಯೆಂದು ಆರೋಪಿಸಿ ಆಸ್ಪತ್ರೆ ಹಾಗೂ ಡಾ.ಚಂದ್ರಶೇಖರ್ ವಿರುದ್ಧ ಬಿ.ಶಿವಣ್ಣ ಅವರ ಮಗಳು ಸುಧಾ ಕೆಪಿಎಂಇ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ್ದು, ವಿಚಾರಣೆ ನಡೆಸಿದ ಪ್ರಾಧಿಕಾರವು ಕೆಎಂಸಿಗೆ ಮುಂದಿನ ಪ್ರಕ್ರಿಯೆಗಾಗಿ ಪ್ರಕರಣವನ್ನು ವರ್ಗಾಯಿಸಿದೆ.
2019ರ ಡಿಸೆಂಬರ್’ನಲ್ಲಿ ಆದಿತ್ಯ ಅಧಿಕಾರಿ ಆಸ್ಪತ್ರೆಯ ಡಾ.ಚಂದ್ರಶೇಖರ್ ಅವರು ಅನಸ್ತೇಷಿಯಾ ವಿಷಯದಲ್ಲಿ ಪರಿಣಿತಿ ಹೊಂದಿಲ್ಲ ಎಂಬ ಆರೋಪಕ್ಕೆ ಒಳಗಾಗಿದ್ದು, ಅವರು ಅನಸ್ತೇಷಿಯಾ ವೈದ್ಯ ವೃತ್ತಿ ಮಾಡಬಾರದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ ಆದೇಶ ಮಾಡಿರುತ್ತದೆ.
ಆದಿತ್ಯ ಅಧಿಕಾರಿ ಆಸ್ಪತ್ರೆ ಪರವಾನಗಿ ಅರ್ಜಿ ರದ್ದು
ಆದಿತ್ಯ ಅಧಿಕಾರಿ ಆಸ್ಪತ್ರೆಯು ನವೀಕರಣಕ್ಕೆ ಆನ್’ಲೈನ್’ನಲ್ಲಿ ಅರ್ಜಿ ಸಲ್ಲಿಸಿದ್ದು, ದಾಖಲಾತಿಗಳು ಕರ್ನಾಟಕ ಸರ್ಕಾರ ಹೊರಡಿಸಿರುವ ಚೆಕ್ ಲೀಸ್ಟ್ ಗೆ ಅನುಗುಣವಾಗಿರುವುದಿಲ್ಲ. ಆದ್ದರಿಂದ ಪರವಾನಗಿ ಪುನರ್ ನವೀಕರಣಗೊಳಿಸಲು ಸಾಧ್ಯವಿಲ್ಲ ಎಂದು ಆನ್’ಲೈನ್ ಅರ್ಜಿಯನ್ನು ರದ್ದುಗೊಳಿಸಲಾಗಿದೆ. ಆಸ್ಪತ್ರೆ ಪರವಾನಗಿ ನವೀಕರಣವಾಗುವ ತನಕ ಯಾವುದೇ ರೋಗಿಗಳನ್ನು ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಬಾರದೆಂದು ಆದೇಶಿಸಲಾಗಿದೆ.