ಮೇಲುಕೋಟೆ: ಪಟ್ಟಣದಲ್ಲಿ ಬುಧವಾರ ರಾತ್ರಿ ಚಿಲ್ಲರೆ ಅಂಗಡಿ ಸೇರಿದಂತೆ 7 ಮನೆಗಳಲ್ಲಿ ಕಳ್ಳರು ನಗದು ಹಾಗೂ ಆಭರಣವನ್ನು ಕಳ್ಳತನ ಮಾಡಿದ್ದಾರೆ.
ಇಲ್ಲಿನ ಒಕ್ಕಲಿಗರ ಬೀದಿಯ ರೈತಭವನದ ಪಕ್ಕದ ಲೇಟ್ ತಮ್ಮಣ್ಣೇಗೌಡರ ಪತ್ನಿ ಕೆಂಪಮ್ಮ ಅವರ ಮನೆಯಲ್ಲಿ ಮೇಕೆ ಮಾರಿ ಇಟ್ಟಿದ್ದ ₹60,000 ಹಣ, ಒಂದು ಚಿನ್ನದ ಉಂಗುರವನ್ನು ಕದ್ದೊಯ್ದಿದ್ದಾರೆ.
ನಂಜುಂಡೇಗೌಡ ಅವರ ಪುತ್ರ ಈರೇಗೌಡ, ಲೀಲಾವತಿ, ಸವಿತಾ ಸಮಾಜದ ಬೀದಿ ಮರಿಯಮ್ಮ, ಮೂಡಲಬಾಗಿಲು ರುಕ್ಷ್ಮಿಣಿ, ಬಸವರಾಜು ಅವರ ಮನೆಗಳಲ್ಲಿ ಸರಣಿ ಕಳ್ಳತನವಾಗಿದೆ. ಕಣಿವೆ ಬಳಿ ಅನಿಲ್ ಎಂಬುವವರ ಅಂಗಡಿಯಲ್ಲಿ ಬೆಳ್ಳಿ ದೀಪವನ್ನು ಕದ್ದೊಯ್ದಿದ್ದಾರೆ.
ಯೋಗಾನರಸಿಂಹ ಸ್ವಾಮಿ ಅರ್ಧ ಬೆಟ್ಟದಲ್ಲಿರುವ ರುಕ್ಮಿಣಿಯ ಮನೆಯಲ್ಲಿ ₹10 ಸಾವಿರ ಹಾಗೂ 20 ಸಾವಿರ ಮೌಲ್ಯದ ಬೆಳ್ಳಿಸಾಮಗ್ರಿಗಳು ಕಳವಾಗಿರುವ ಬಗ್ಗೆ ದೂರು ದಾಖಲಾಗಿದೆ.
ಗುರುವಾರ ಮುಂಜಾನೆ ಪ್ರಕರಣ ಬೆಳಕಿಗೆ ಬಂದಿದ್ದು, ಸ್ಥಳಕ್ಕೆ ಆಗಮಿಸಿದ ಸರ್ಕಲ್ ಇನ್‌ಸ್ಪೆಕ್ಟರ್ ಸಿದ್ದಪ್ಪ ಪರಿಶೀಲನೆ ನಡೆಸಿ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರನ್ನು ಕರೆಸಿ ತನಿಖೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ಶ್ವಾನವು ಕಳ್ಳತನವಾದ ಮನೆಗಳಿಗೆ ತೆರಳಿ ಕೊನೆಗೆ ಇಲ್ಲಿನ ಹೊಸಬಾವಿ ಕಾಳಿಕಾದೇವಿ ದೇವಾಲಯದವರೆಗೂ ತೆರಳಿ ನಂತರ ಹುಣಸೆತೋಪು ಬಳಿ ಇರುವ ಕೊಳದವರೆಗೂ ಕಳ್ಳರು ಸಂಚಾರಿಸಿರುವ ಸುಳಿವು ನೀಡಿತು.
ದಸರಾ ರಜೆ ಇದ್ದುದಿಂದ ಕೆಲವರು ಪ್ರವಾಸ ಹೋಗಿದ್ದರೆ, ಇನ್ನು ಕೆಲವರು ಸಂಬಂಧಿಕರ ಮನೆಗೆ ಹೋಗಿದ್ದರು. ಕೆಲವರು ಜಮೀನಿನ ಮನೆಯಲ್ಲಿ ನೆಲೆಸಿರುವುದನ್ನು ನೋಡಿಕೊಂಡೇ ಗುಂಪೊಂದು ಕಳ್ಳತನ ನಡೆಸಿರುವ ಸಂಶಯ ವ್ಯಕ್ತವಾಗಿದೆ.
ಕ್ಷೇತ್ರದಲ್ಲಿ ಹೆಚ್ಚಿದ ಕಳ್ಳತನ:
‘ಇತ್ತೀಚಿಗೆ ಇಲ್ಲಿನ ಪೊಲೀಸ್ ಕ್ವಾರ್ಟರ್ಸ್ ಪಕ್ಕದ ಕಾಳಿಕಾ ದೇವಿ, ಶನಿದೇವರ ದೇವಾಲಯದ ಸೇರಿದಂತೆ ಹಲವು ದೇವಾಲದಲ್ಲಿ ಹುಂಡಿ ಹಣ ಕಳ್ಳತನವಾಗಿತ್ತು. ವರ್ಷ ಕಳೆಯುವಷ್ಟರಲ್ಲಿ ಮನೆಗಳಲ್ಲಿ ಸರಣಿ ಕಳ್ಳತನವಾಗಿದೆ. ಅಲ್ಲದೇ ಮೇಲಕೋಟೆ ಕೆಲ ಮನೆಗಳಿಗೆ ಕಳ್ಳತನದ ಯತ್ನ ಕೂಡ ನಡೆದಿದ್ದು, ಪೊಲೀಸ್ ವೈಫಲ್ಯವೇ ಕಾರಣ’ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.