ನೆನೆಯುತ್ತೇನೆ ಗೆಳತಿ
ಸಂಭ್ರಮದಿ ಮುಗಿಲಾದುದಕ್ಕಲ್ಲ,
ಸಂಕಟದಿ ಹೆಗಲಾದುದಕ್ಕೆ.
ಅಭಿಮಾನಿಸುತ್ತೇನೆ ಗೆಳತಿ
ಗೆದ್ದು ಬೀಗುವಾಗ ಬೆನ್ತಟ್ಟಿದ್ದಕ್ಕಲ್ಲ,
ಸೋತು ಕುಸಿದಾಗ ಕೈ ಹಿಡಿದದ್ದಕ್ಕೆ.
ವಂದಿಸುತ್ತೇನೆ ಗೆಳತಿ,
ಒಪ್ಪುಗಳ ಹೇಳಿ ಕೊಟ್ಟಿದ್ದಕ್ಕಲ್ಲ, ತಪ್ಪುಗಳ ತಿಳಿಸಿಕೊಟ್ಟಿದ್ದಕ್ಕೆ.
ಅಭಿನಂದಿಸುತ್ತೇನೆ ಗೆಳತಿ,
ಸದ್ಗುಣಗಳ ಮೆಚ್ಚಿಕೊಂಡಿದ್ದಕ್ಕಲ್ಲ,
ದುರ್ಗುಣಗಳ ಸಹಿಸಿಕೊಂಡಿದ್ದಕ್ಕೆ.
ಆರಾಧಿಸುತ್ತೇನೆ ಗೆಳತಿ,
ಸಿರಿಯಿದ್ದಾಗ ಸನಿಹವಿದ್ದುದಕಲ್ಲ,
ಸೂತಕವಿದ್ದಾಗ ಜೊತೆಯಾದುದಕ್ಕೆ.
ನಮಸ್ಕರಿಸುತ್ತೇನೆ ಗೆಳೆಯಾ
ನನ್ನತನವ ದೂರದಿದ್ದುದಕಲ್ಲ..
ನಿನ್ನತನವ ಹೇರದಿದ್ದುದಕೆ.
ಆದರಿಸುತ್ತೇನೆ ಗೆಳೆಯಾ
ಅಡಿಗಡಿಗೂ ಆಸರೆಯಾದುದ್ದಕ್ಕಲ್ಲ..
ಅಂತಃಶಕ್ತಿ ತುಂಬಿ ಮುನ್ನಡೆಸಿದ್ದಕ್ಕೆ.
ಬಯಸುತ್ತೇನೆ ಗೆಳೆಯಾ
ನೀನನ್ನ ನೆರಳಿನಂತಿರಬೇಕೆಂದಲ್ಲ..
ನಾನಿನ್ನ ಕೊರಳಿನಲ್ಲಿರಬೇಕೆಂದು.
- ಎಎನ್ಆರ್