ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಚಿತ್ರ ’ಜೇಮ್ಸ್’ ಅವರ ಜನ್ಮದಿನ( ಮಾ.17)ದಂದು ಬಿಡುಗಡೆಯಾಗುವ ಸಾಧ್ಯತೆಗಳಿವೆ ಎಂದು ಚಂದನವನದ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.
ಸಿನಿಮಾ ಬಿಡುಗಡೆ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ಪ್ರಕಟಿಸಿಲ್ಲ. ಈಗಾಗಲೇ ಜೇಮ್ಸ್ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದ್ದು ಮಾರ್ಚ್ 17ರಂದು ಸಿನಿಮಾ ಬಿಡುಗಡೆ ಮಾಡುವ ಉದ್ದೇಶ ಇಟ್ಟುಕೊಂಡೇ ಚಿತ್ರತಂಡ ಹಗಲಿರುಳು ಕೆಲಸ ಮಾಡುತ್ತಿದೆ. ಫೆಬ್ರುವರಿ ಮಧ್ಯಭಾಗದ ವೇಳೆಗೆ ಸಿನಿಮಾ ಸಂಪೂರ್ಣವಾಗಿ ಸಿದ್ಧವಾಗಲಿದೆ ಎನ್ನಲಾಗಿದೆ.
ಜೇಮ್ಸ್ ಸಿನಿಮಾಗೆ ನಿರ್ದೇಶಕ ಚೇತನ್‌ಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಹೊಸಪೇಟೆ ಉದ್ಯಮಿ ಕಿಶೋರ್ ಪತ್ತಿಕೊಂಡ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇದು 80 ಕೋಟಿ ಬಜೆಟ್ ಸಿನಿಮಾ ಎಂದು ಚಿತ್ರತಂಡ ಹೇಳಿಕೆ ನೀಡಿದೆ. ಪುನೀತ್ ರಾಜ್‌ಕುಮಾರ್ ನಿಧನರಾಗುವುದಕ್ಕೂ ಮುನ್ನ ತಮ್ಮ ಭಾಗದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದರು. ಆದರೆ ಅವರು ಡಬ್ಬಿಂಗ್ ಮಾಡಿರಲಿಲ್ಲ ಎನ್ನಲಾಗಿದೆ.
ಇನ್ನು ತೆಲುಗಿನ ’ಆರ್‌ಆರ್‌ಆರ್’ ಸಿನಿಮಾ ಕೂಡ ಮಾರ್ಚ್ 18ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ. ಅದರ ಹಿಂದಿನ ದಿನವೇ ಜೇಮ್ಸ್ ಕೂಡ ತೆರೆಕಾಣಲಿದೆ. ಎರಡು ಬಿಗ್ ಚಿತ್ರಗಳಿಗೆ ಕ್ಲ್ಯಾಶ್ ಆಗುವ ಸಾಧ್ಯತೆ ಇದೆ. ಆರ್‌ಆರ್‌ಆರ್ ಚಿತ್ರತಂಡ ಸಿನಿಮಾ ಬಿಡುಗಡೆಯ ಎರಡು ದಿನಾಂಕಗಳನ್ನು ಪ್ರಕಟಿಸಿದೆ. ಒಂದು ಮಾರ್ಚ್ 18 ಹಾಗೂ ಮತ್ತೊಂದು ಏಪ್ರಿಲ್ 28. ಆರ್‌ಆರ್‌ಆರ್ ಸಿನಿಮಾ ಏಪ್ರಿಲ್‌ಗೆ ಬಿಡುಗಡೆಯಾದರೆ ಜೇಮ್ಸ್ ಸಿನಿಮಾಗೆ ಯಾವುದೇ ತೊಂದರೆ ಇಲ್ಲ ಎನ್ನಲಾಗಿದೆ.
ಇತ್ತ ಅಭಿಮಾನಿಗಳು ಕೂಡ ’ಜೇಮ್ಸ್’ ಸಿನಿಮಾ ಪುನೀತ್ ಜನ್ಮದಿನದಂದೇ ಬಿಡುಗಡೆಯಾಗಬೇಕು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಕುತ್ತಿದ್ದಾರೆ. ಚಿತ್ರತಂಡ ಕೂಡ ಪುನೀತ್ ಜನ್ಮದಿದಂದೇ ಸಿನಿಮಾ ಬಿಡುಗಡೆ ಮಾಡಲು ಶ್ರಮಿಸುತ್ತಿದೆ ಎಂದು ಚಂದನವನದ ಮೂಲಗಳು ತಿಳಿಸಿವೆ.