ಮನೆ ರಾಜಕೀಯ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪರನ್ನು ಕೂಡಲೇ ಬಂಧಿಸಬೇಕು: ಸಿದ್ದರಾಮಯ್ಯ

ಶಾಸಕ ಮಾಡಾಳ್‌ ವಿರೂಪಾಕ್ಷಪ್ಪರನ್ನು ಕೂಡಲೇ ಬಂಧಿಸಬೇಕು: ಸಿದ್ದರಾಮಯ್ಯ

0

ಬೆಂಗಳೂರು: ರಾಜ್ಯ ಸರ್ಕಾರ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರನ್ನು ಈ ಕೂಡಲೇ ಬಂಧಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ಸರ್ಕಾರದ ಭ್ರಷ್ಟಾಚಾರಕ್ಕೆ ದಾಖಲೆ ಕೇಳುತ್ತಿದ್ದವರಿಗೆ ವಿರೂಪಾಕ್ಷಪ್ಪ ಮಾಡಾಳ್‌ ಅವರ ಮಗ ಲಂಚದ ಹಣದ ಸಮೇತ ಸಿಕ್ಕಿಬಿದ್ದಿರುವುದು ಸಾಕ್ಷಿ. ರಾಜೀನಾಮೆ ಕೊಡಲು ಬಂದ ದಿನವೇ ವಿರೂಪಾಕ್ಷಪ್ಪ ಮಾಡಾಳ್‌ ಬಂಧನ ಆಗಬೇಕಿತ್ತು. ಈಗಲೂ ಅವರು ಬೆಂಗಳೂರಿನಲ್ಲಿದ್ದುಕೊಂಡೇ ಜಾಮೀನಿಗೆ ಅರ್ಜಿ ಹಾಕಿದ್ದಾರೆ. ಇಂಥಾ ಭ್ರಷ್ಟ ಸರ್ಕಾರವನ್ನು ಕಿತ್ತುಹಾಕಲೇಬೇಕು ಎಂದರು.

ಎಸಿಬಿ ರದ್ದು ಮಾಡಿ ಎಂದು ಸಲ್ಲಿಸಿದ್ದ ಮನವಿ ಬಗ್ಗೆ ರಾಜ್ಯದ ಅಡ್ವೋಕೇಟ್‌ ಜನರಲ್‌ ಅವರು ಕೋರ್ಟ್‌’ನಲ್ಲಿ ಹಿಂದಿನ ಸರ್ಕಾರ ಎಸಿಬಿ ರಚನೆ ಮಾಡಿರುವುದು ಸರಿ ಎಂದು ನಮ್ಮ (ಕಾಂಗ್ರೆಸ್‌) ಸರ್ಕಾರದ ಎಸಿಬಿ ರಚನೆಯ ಸಮರ್ಥನೆ ಮಾಡಿದ್ದಾರೆ. ಬರೀ ಕರ್ನಾಟಕ ಮಾತ್ರವಲ್ಲ ದೇಶದ 16 ರಾಜ್ಯಗಳಲ್ಲಿ ಎಸಿಬಿ ಇದೆ ಎಂದು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದಾರೆ. ಅಡ್ವೊಕೇಟ್‌ ಜನರಲ್‌ ಅವರ ನಿಲುವು ಎಂದರೆ ಅದು ಸರ್ಕಾರದ ನಿಲುವು. ಕೋರ್ಟ್‌ನಲ್ಲಿ ಎಸಿಬಿಯನ್ನು ಸಮರ್ಥಿಸಿಕೊಂಡು, ಹೊರಗೆ ನಾವು ಎಸಿಬಿ ರದ್ದು ಮಾಡಿದ್ದೇವೆ ಎಂದು ಸುಳ್ಳು ಹೇಳುವುದು ಆತ್ಮವಂಚನೆಯಾಗುತ್ತದೆ. ನಮ್ಮ ಸರ್ಕಾರದ ಅವಧಿಯಲ್ಲಿ ವಿಶ್ವನಾಥ್‌ ಶೆಟ್ಟಿ ಅವರು ಲೋಕಾಯುಕ್ತರಾಗಿದ್ದರು. ಲೋಕಾಯುಕ್ತ ಎಲ್ಲಿ ರದ್ದಾಗಿತ್ತು ಎಂದು ಪ್ರಶ್ನಿಸಿದರು.

ಒಬ್ಬ ಶಾಸಕನ ಮಗನ ಮನೆಯಲ್ಲಿ ₹ 8 ಕೋಟಿ ಭ್ರಷ್ಟ ಹಣ ಸಿಕ್ಕಿದೆ ಎಂದರೆ ಇನ್ನು ಇಡೀ ಸರ್ಕಾರ ಎಷ್ಟು ಲೂಟಿ ಮಾಡಿರಬಹುದು. ಈ ಪ್ರಕರಣದಿಂದ ರಾಜ್ಯದಲ್ಲಿ ಶೇ 40 ಕಮಿಷನ್‌ ನಡೆಯುತ್ತಿದೆ ಎಂಬುದು ಸಾಬೀತಾಗಿದೆ. ನಿಮ್ಮದು ಶೇ 40 ಕಮಿಷನ್‌ ಸರ್ಕಾರ ಎಂದು ಹೇಳಲು ಇದಕ್ಕಿಂತ ಬೇರೆ ಯಾವ ಸಾಕ್ಷಿ ಬೇಕು ಬೊಮ್ಮಾಯಿಯವರೇ? ನಿಮಗೇನಾದರೂ ನೈತಿಕತೆ ಇದ್ದರೆ ಈ ಕೂಡಲೇ ರಾಜೀನಾಮೆ ನೀಡಬೇಕು. ಸಂತೋಷ್‌ ಪಾಟೀಲ್‌ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಈಶ್ವರಪ್ಪ ರಾಜೀನಾಮೆ ನೀಡಿದ್ರು, ಇನ್ನೊಬ್ಬ ಗುತ್ತಿಗೆದಾರ ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದಿದ್ದರು. ಇವು ಸಾಕ್ಷ್ಯ ಅಲ್ಲವೇ ಎಂದೂ ವಾಗ್ದಾಳಿ ನಡೆಸಿದರು.

ಇಂಥಾ ಭ್ರಷ್ಟ ಸರ್ಕಾರವನ್ನು ಕಿತ್ತುಹಾಕಲೇಬೇಕು. ಇಂದು ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರಿರುವ ಎಲ್ಲಾ ನಾಯಕರು ಅತ್ಯಂತ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ. ಮುಖ್ಯವಾಗಿ ದಲಿತರು ಬಿಜೆಪಿಯ ಕಡೆಗೆ ಮುಖವನ್ನೇ ಹಾಕಬಾರದು. ಅವರು ಮನುವಾದಿಗಳು, ಬಿಜೆಪಿ ಎಂದಿಗೂ ದಲಿತರ ಹಿತದ ಬಗ್ಗೆ ಯೋಚನೆ ಮಾಡಿದ ಪಕ್ಷವಲ್ಲ ಎಂದು ಕಿಡಿಕಾರಿದರು.