ಮನೆ ಸ್ಥಳೀಯ ನೀರಿನ ಮಿತ ಬಳಕೆ, ನೀರಿನ ಸದ್ಬಳಕೆ ಮಾಡಬೇಕು: ಡಾ. ಧನಂಜಯ ಬಿ.ಎನ್

ನೀರಿನ ಮಿತ ಬಳಕೆ, ನೀರಿನ ಸದ್ಬಳಕೆ ಮಾಡಬೇಕು: ಡಾ. ಧನಂಜಯ ಬಿ.ಎನ್

0

ಮೈಸೂರು: ನೀರು ಬಹಳ ಅತ್ಯಮೂಲ್ಯವಾದ ವಸ್ತು, ಸಕಲ ಜೀವಿರಾಶಿಗಳಿಗೂ ಅವಶ್ಯಕವಾದದ್ದು, ಹಾಗಾಗಿ ನೀರಿನ ಮಿತ ಬಳಕೆ, ನೀರಿನ ಸದ್ಬಳಕೆ ಮಾಡುವುದು ಬಹಳ ಮುಖ್ಯ ಎಂದು ಉಪ ಕೃಷಿ ನಿರ್ದೇಶಕರಾದ ಡಾ. ಧನಂಜಯ ಬಿ.ಎನ್. ಅವರು ರೈತರಿಗೆ ಕರೆನೀಡಿದರು.

ನಾಗನಹಳ್ಳಿಯ ಕೃಷಿ ತರಬೇತಿ ಕೇಂದ್ರದಲ್ಲಿ ನಡೆದ ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ “ತೆಂಗು ಮತ್ತು ಅಡಿಕೆ ಬೆಳೆಗಳಲ್ಲಿ ತಳಿ ಆಯ್ಕೆ, ಆಧುನಿಕ ಕೃಷಿ ಪದ್ದತಿಗಳು, ಸೂಕ್ಷ್ಮನೀರಾವರಿ ಮತ್ತು ರಸಾವರಿ ತಾಂತ್ರಿಕತೆಗಳ ಅಳವಡಿಕೆ ಮೂಲಕ ಅಧಿಕ ಲಾಭ” ವಿಷಯ ಕುರಿತ ಮೂರು ದಿನಗಳ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಫಲವತ್ತಾದ ಮಣ್ಣು ಮತ್ತು ನೀರನ್ನು ನಮ್ಮ ಮುಂದಿನ ಪೀಳಿಗೆಗೆ ಬಿಟ್ಟುಹೋಗುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ, ವಾಡಿಕೆಗಿಂತ ಕಡಿಮೆ ಮಳೆ ಬಿದ್ದರೂ ಸಹ ಮಳೆ ನೀರಿನ ಸದ್ಬಳಕೆಯನ್ನು ಹನಿ/ತುಂತುರು ನೀರಾವರಿ ಮುಖಾಂತರ ಮಾಡಬಹುದಾಗಿದೆ ಎಂದು ಸಲಹೆ ನೀಡಿದರು.

ಇದು ಮೂರು ದಿನಗಳ ತರಬೇತಿ ಕಾರ್ಯಕ್ರಮವಾಗಿದ್ದು, ತೆಂಗು, ಅಡಿಕೆ ಮತ್ತು ಇನ್ನಿತರ ತೋಟಗಾರಿಕೆ ಬೆಳೆಗಳ ವೈಜ್ಞಾನಿಕ ಬೇಸಾಯ, ರೋಗ ಮತ್ತು ಕೀಟಗಳ ನಿಯಂತ್ರಣ, ಸೂಕ್ಷ ನೀರಾವರಿ ಮತ್ತು ರಸಾವರಿ ಪದ್ದತಿಗಳ ಅಳವಡಿಕೆ ಬಗ್ಗೆ ತಿಳಿಸಿಕೊಡಲಾಗುವುದು ಎಂದರು.

 ಜೈನ್ ಇರಿಗೇಷನ್ ಸಿಸ್ಟಮ್‌ನ ತಾಂತ್ರಿಕ ಸಲಹೆಗಾರರಾದ ನಿರಂಜನ್ ರವರು ಮಾತನಾಡಿ ತೆಂಗು, ಅಡಿಕೆ ಮತ್ತು ಇತರೆ ತೋಟಗಾರಿಕೆ ಬೆಳೆಗಳಲ್ಲಿ ಹನಿ ನೀರಾವರಿ ಪದ್ಧತಿಗಳ ಅಳವಡಿಕೆ, ನಿರ್ವಹಣೆ, ಹನಿ ನೀರಾವರಿ ಹಾಗೂ ರಸಾವರಿ ಪದ್ದತಿಗಳ ಅಳವಡಿಕೆ ಬಗ್ಗೆ ತಿಳಿಸಿಕೊಟ್ಟರು.

 ತರಬೇತಿಯಲ್ಲಿ ಜಿಲ್ಲೆಯ ವಿವಿಧ ಗ್ರಾಮಗಳ 30 ಜನ ರೈತರು ಭಾಗವಹಿಸಿದ್ದರು.

ಹಿಂದಿನ ಲೇಖನಪೊಲೀಸರ ಕ್ರಮ ಖಂಡಿಸಿ, ಕಲಾಪದಿಂದ ಹೊರಗುಳಿದ ವಕೀಲರು
ಮುಂದಿನ ಲೇಖನಎತ್ತಿನಹೊಳೆ ಯೋಜನೆ ಶೀಘ್ರ ಜಾರಿ: ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಭರವಸೆ