ಭಾರತದ ವಿದೇಶಾಂಗ ಸಚಿವಾಲಯ ಪ್ರಕಾರ, ಜೂನ್ 17 ರಂದು ಅಧ್ಯಕ್ಷರ ಕೋರಿಕೆಯ ಮೇರೆಗೆ ಮೋದಿ ಟ್ರಂಪ್ ಅವರೊಂದಿಗೆ ಕೊನೆಯದಾಗಿ ಮಾತನಾಡಿದರು.
ಕೆನಡಾದಲ್ಲಿ ನಡೆದ G7 ಶೃಂಗಸಭೆಯ ಸಂದರ್ಭದಲ್ಲಿ ಇಬ್ಬರೂ ಭೇಟಿಯಾಗಬೇಕಿತ್ತು. ಆದರೆ ಟ್ರಂಪ್ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಅಮೆರಿಕಕ್ಕೆ ಮರಳಿದ್ದರಿಂದ ಭೇಟಿಯಾಗಿರಲಿಲ್ಲ ಎನ್ನಲಾಗಿದೆ.
ರಷ್ಯಾದಿಂದ ಕಚ್ಚಾ ತೈಲವನ್ನು ಖರೀದಿಸುತ್ತಿರುವುದಕ್ಕೆ ಟ್ರಂಪ್ ಭಾರತದ ಆರ್ಥಿಕತೆಯನ್ನು ಡೆಡ್ ಎಕಾನಮಿ ವ್ಯಂಗ್ಯವಾಡಿದ್ದರು. ಈ ಹೇಳಿಕೆಗೆ ಪ್ರತಿಯಾಗಿ ಮೋದಿ, ಭಾರತವು ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗುವತ್ತ ಸಾಗುತ್ತಿದೆ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದರು.
ಟ್ರಂಪ್ ಸುಂಕ ಸಮರಕ್ಕೆ ತಲೆ ಕೆಡಿಸಿಕೊಳ್ಳದ ಮೋದಿ, ರೈತರು ಮತ್ತು ಮೀನುಗಾರರಿಗೆ ಸಮಸ್ಯೆಯಾಗುವ ಯಾವುದೇ ಹಿತಾಸಕ್ತಿಯ ಜೊತೆ ಭಾರತ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದರು.
ರೈತರ ಹಿತಾಸಕ್ತಿ ನಮ್ಮ ಪ್ರಮುಖ ಆದ್ಯತೆಯಾಗಿದೆ. ಭಾರತ ತನ್ನ ರೈತರು, ಜಾನುವಾರು ಮಾಲೀಕರು ಮತ್ತು ಮೀನುಗಾರರ ಹಿತಾಸಕ್ತಿಗಳೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಸರ್ಕಾರದ ನಿರ್ಧಾರದಿಂದ ಭಾರೀ ಬೆಲೆ ತೆರಬೇಕಾಗುತ್ತದೆ ಎನ್ನುವುದು ನನಗೆ ತಿಳಿದಿದೆ.
ಇದಕ್ಕೆ ನಾನು ಸಿದ್ಧನಿದ್ದೇನೆ. ದೇಶದ ರೈತರು, ಮೀನುಗಾರರು ಮತ್ತು ಜಾನುವಾರು ಮಾಲೀಕರ ಹಿತದೃಷ್ಟಿಯಿಂದ ಭಾರತ ಎಲ್ಲದ್ದಕ್ಕೂ ಸಿದ್ಧವಾಗಿದೆ ಎಂದು ಹೇಳಿದ್ದರು.














