ಮನೆ ದೇಶ ಮಂಕಿಪಾಕ್ಸ್:‌ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದ ಡಬ್ಲ್ಯುಎಚ್‌ಒ

ಮಂಕಿಪಾಕ್ಸ್:‌ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದ ಡಬ್ಲ್ಯುಎಚ್‌ಒ

0

ನವದೆಹಲಿ (New Delhi): ವೇಗವಾಗಿ ಹರಡುತ್ತಿರುವ ಮಂಕಿಪಾಕ್ಸ್ ಸೋಂಕನ್ನು ‘ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ’ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಘೋಷಿಸಿದೆ. ಈ ಮೂಲಕ ಮಂಕಿಪಾಕ್ಸ್ ಸೋಂಕನ್ನು ಅಪಾಯಕಾರಿ ಎಂಬ ಎಚ್ಚರಿಕೆ ನೀಡಿದೆ.

ಅನೇಕ ದೇಶಗಳಲ್ಲಿ ಮಂಕಿಪಾಕ್ಸ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದನ್ನು ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಣೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಪರಿಣತರು ನಿರ್ಧರಿಸಿದ್ದಾರೆ.

ಈ ಕುರಿತು ಡಬ್ಲ್ಯುಎಚ್‌‌ಒ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಗೆಬ್ರೆಯೆಸಸ್ ಮಾಹಿತಿ ನೀಡಿದ್ದು, ಮಂಕಿಪಾಕ್ಸ್ ವೈರಾಣು ಹರಡುವುದನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

70ಕ್ಕೂ ಹೆಚ್ಚು ದೇಶಗಳಲ್ಲಿ ಮಂಕಿಪಾಕ್ಸ್ ಪಿಡುಗು ಹರಡಿಕೊಂಡಿದ್ದು, ಇದನ್ನು ‘ಅಸಾಧಾರಣ’ ಸನ್ನಿವೇಶ ಎಂದು ಡಬ್ಲ್ಯೂಎಚ್‌ಒ ಪರಿಗಣಿಸಿದೆ. ಈ ಪಿಡುಗನ್ನು ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ವಿಶ್ವ ಆರೋಗ್ಯ ಸಂಸ್ಥೆಯು ವರ್ಗೀಕರಿಸಬೇಕೇ ಎಂದು ಮಂಕಿಪಾಕ್ಸ್ ಪರಿಣತರು ಗುರುವಾರದಿಂದ ಚರ್ಚೆ ನಡೆಸುತ್ತಿದ್ದರು.

ಪರಿಣತರ ಸಮಿತಿಯು ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಟೆಡ್ರೋಸ್ ಅಧಾನೊಮ್ ಘೆಬ್ರೆಯೆಸಸ್ ಅವರಿಗೆ ಸಲಹೆ ರವಾನಿಸಿತ್ತು. ಅಂತಿಮ ನಿರ್ಧಾರ ತೆಗೆದುಕೊಳ್ಳುವುದು ಟೆಡ್ರೋಸ್ ಅವರ ಹೊಣೆಗಾರಿಕೆಯಾಗಿತ್ತು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟೆಡ್ರೋಸ್ ಅವರು ಅಧಿಕೃತವಾಗಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿದರು.

ಹೊಸ ಮಾದರಿ ಪ್ರಸರಣಗಳ ಮೂಲಕ ಪಿಡುಗು ವಿಶ್ವದಾದ್ಯಂತ ವ್ಯಾಪಕವಾಗಿ ಹರಡುತ್ತಿರುವುದರಿಂದ, ನಾವು ಅದರ ಬಗ್ಗೆ ಬಹಳ ಅಲ್ಪ ಮಟ್ಟಿಗೆ ಅರ್ಥ ಮಾಡಿಕೊಂಡಿದ್ದೇವೆ ಮತ್ತು ಅದು ಅಂತಾರಾಷ್ಟ್ರೀಯ ಆರೋಗ್ಯ ನಿಯಂತ್ರಣಗಳ ಮಾನದಂಡಗಳಿಗೆ ಸೂಕ್ತವಾಗಿದೆ. ಈ ಎಲ್ಲ ಕಾರಣಗಳಿಂದ ನಾನು ಜಾಗತಿಕ ಮಂಕಿಪಾಕ್ಸ್ ಸೋಂಕನ್ನು ಅಂತರಾಷ್ಟ್ರೀಯ ಕಳವಳದ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿ ಎಂದು ಘೋಷಿಸಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದಾರೆ.

ತುರ್ತು ಪರಿಸ್ಥಿತಿ ಘೋಷಣೆ ಮಾಡುವುದು ಬಹಳ ಅಗತ್ಯವಾಗಿದ್ದು, ಮಂಕಿಪಾಕ್ಸ್ ಅನ್ನು ನಿಯಂತ್ರಿಸಲು ಪರಿಣಾಮಕಾರಿ ಮಾಹಿತಿ ಹಾಗೂ ಸೇವೆಗಳನ್ನು ರೂಪಿಸಲು ಮತ್ತು ಪೂರೈಕೆ ಮಾಡಲು ಎಲ್ಲ ದೇಶಗಳೂ ಸಮೀಪದಿಂದ ಕೆಲಸ ಮಾಡಲು ಮುಖ್ಯವಾಗಿದೆ ಎಂದು ಡಬ್ಲ್ಯೂಎಚ್‌ಒ ತಿಳಿಸಿದೆ.

ಭಾರತದಲ್ಲಿ ಇದುವರೆಗೆ ಮಂಕಿಪಾಕ್ಸ್ ವೈರಸ್‌ನ ಮೂರು ಪ್ರಕರಣ ವರದಿಯಾಗಿವೆ. ಈ ಎಲ್ಲ ಪ್ರಕರಣ ಕೇರಳದಲ್ಲೇ ದೃಢಪಟ್ಟಿವೆ. ಕೇರಳದ ಕೊಲ್ಲಂ, ಕಣ್ಣೂರು ಹಾಗೂ ಮಲಪ್ಪುರಂ ಜಿಲ್ಲೆಗಳಲ್ಲಿ ಮಂಕಿಪಾಕ್ಸ್ ಸೋಂಕು ವರದಿಯಾಗಿವೆ. ಈ ಪೈಕಿ ಕಣ್ಣೂರಿನ ಯುವಕ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸಿದ್ದರು.

ಹಿಂದಿನ ಲೇಖನಸೂರ್ಯ ದೇವನ ಪೂಜಿಸಿದರೆ ಕಷ್ಟಗಳು ದೂರ
ಮುಂದಿನ ಲೇಖನಬೆನ್ನು ನೋವಿನ ನಿವಾರಣೆಗೆ ಮಾಡಬೇಕಾದ ವ್ಯಾಯಾಮಗಳು