ಮನೆ ಸ್ಥಳೀಯ ಮುಡಾ ಪ್ರಕರಣ: 3 ಬ್ಯಾಗ್ ನಲ್ಲಿ ದಾಖಲೆ ಹೊತ್ತೊಯ್ದ ಇಡಿ

ಮುಡಾ ಪ್ರಕರಣ: 3 ಬ್ಯಾಗ್ ನಲ್ಲಿ ದಾಖಲೆ ಹೊತ್ತೊಯ್ದ ಇಡಿ

0

ಮೈಸೂರು: ಇಲ್ಲಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ಸುದೀರ್ಘ 30 ತಾಸು ಶೋಧ ನಡೆಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡವು ವಿಚಾರಣೆ ಪೂರ್ಣಗೊಳಿಸಿ, ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ಹೊತ್ತೊಯ್ದಿದೆ.

Join Our Whatsapp Group

ದಾಳಿಯ ಎರಡನೇ ದಿನವಾದ ಶನಿವಾರ ಬೆಳಿಗ್ಗೆ 10ಕ್ಕೆ ವಿಚಾರಣೆ ಆರಂಭಿಸಿದ್ದ ಇ.ಡಿ.ಯ 12 ಅಧಿಕಾರಿಗಳ ತಂಡವು ಸತತ 17 ತಾಸು ಶೋಧದ ಬಳಿಕ ಭಾನುವಾರ ನಸುಕಿನಲ್ಲಿ 2.45ರ ಸುಮಾರಿಗೆ ಮುಡಾ ಕಚೇರಿ ಬಾಗಿಲು ತೆರೆದು ಹೊರಬಂದಿತು. ದಾಖಲೆಗಳನ್ನು ತುಂಬಿದ ಮೂರು ಕೆಂಪು ಬ್ಯಾಗ್‌ ಹಾಗೂ ಎರಡು ಹಾರ್ಡ್‌ ಡಿಸ್ಕ್‌ ಹಿಡಿದು ಬೆಂಗಳೂರಿನತ್ತ ಪ್ರಯಾಣ ಬೆಳೆಸಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಬಿ.ಎಂ. ಪಾರ್ವತಿ ಸೇರಿದಂತೆ ನಾಲ್ವರ ವಿರುದ್ಧ ದಾಖಲಾದ ‘ಇಸಿಐಆರ್‌’ ಆಧರಿಸಿ ಅ. 18ರಂದು ಬೆಳಿಗ್ಗೆ 10.30ರ ವೇಳೆಗೆ ಮುಡಾ ಕಚೇರಿಗೆ ಇ.ಡಿ. ಅಧಿಕಾರಿಗಳ ತಂಡವು ದಾಳಿ ನಡೆಸಿದ್ದು, ರಾತ್ರಿ 11ರವರೆಗೂ ಶೋಧ ಮುಂದುವರಿಸಿತ್ತು. ಬಳಿಕ ಮುಡಾ ಕಚೇರಿಯಲ್ಲೇ ವಾಸ್ತವ್ಯ ಹೂಡಿತ್ತು.

ಇದೇ ವೇಳೆ ಮೈಸೂರು ತಾಲ್ಲೂಕು ಕಚೇರಿ ಹಾಗೂ ಬೆಂಗಳೂರಿನ ಕೆಂಗೇರಿಯಲ್ಲಿರುವ ಜೆ. ದೇವರಾಜು ಅವರ ನಿವಾಸದಲ್ಲೂ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು.

ಮೈಸೂರು ತಾಲ್ಲೂಕಿನ ಕೆಸರೆ ಗ್ರಾಮದ ಸರ್ವೆ ಸಂಖ್ಯೆ 464ಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳ ದೃಢೀಕೃತ ಪ್ರತಿಗಳನ್ನು ಇ.ಡಿ. ಸಂಗ್ರಹಿಸಿದ್ದು, ಅವುಗಳನ್ನು ಡಿಜಿಟಲ್ ರೂಪದಲ್ಲೂ ಪಡೆದಿದೆ. ಸಿದ್ದರಾಮಯ್ಯ ಪತ್ನಿ ಮುಡಾಕ್ಕೆ ಬರೆದಿದ್ದ ವೈಟ್ನರ್ ಹಚ್ಚಿದ ಪತ್ರ ಸಹ ಇದರಲ್ಲಿ ಸೇರಿದೆ. ದೇವನೂರು ಬಡಾವಣೆಯ ನಕ್ಷೆ, ಅಲ್ಲಿ ಹಂಚಿಕೆಯಾದ ಹಾಗೂ ಲಭ್ಯವಿರುವ ನಿವೇಶನಗಳ ಮಾಹಿತಿಯನ್ನು ಅಧಿಕಾರಿಗಳು ಮುಡಾ ಆಯುಕ್ತರಿಂದ ಕೇಳಿ ಪಡೆದಿದ್ದಾರೆ. 50:50 ಅನುಪಾತದಲ್ಲಿ ಮುಡಾದಲ್ಲಿ ಈಚಿನ ವರ್ಷಗಳಲ್ಲಿ ಹಂಚಿಕೆಯಾದ ಎಲ್ಲ ನಿವೇಶನಗಳ ದಾಖಲಾತಿಯನ್ನು ಸಂಗ್ರಹಿಸಿದ್ದಾರೆ.