ಮನೆ ಅಪರಾಧ ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ ಪ್ರಕರಣ: ಎರಡನೇ ಪತ್ನಿಯಿಂದಲೇ ಸುಪಾರಿ

ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ ಪ್ರಕರಣ: ಎರಡನೇ ಪತ್ನಿಯಿಂದಲೇ ಸುಪಾರಿ

0

ಬೆಳಗಾವಿ: ಬೆಳಗಾವಿಯ ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ ಪ್ರಕರಣವನ್ನು ಗ್ರಾಮೀಣ ‌ಠಾಣೆ ಪೊಲೀಸರು ಭೇದಿಸಿದ್ದು, ಎರಡನೇ ಪತ್ನಿಯೇ ಪತಿಯ ಬ್ಯುಸಿನೆಸ್ ಪಾರ್ಟನರ್ ಜೊತೆಗೂಡಿ ಹತ್ಯೆಗೆ ಸುಪಾರಿ ನೀಡಿರುವುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ.

ಕೊಲೆಯಾದವನ ಎರಡನೇ ಪತ್ನಿ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ಹಿನ್ನೆಲೆ:

ಬೆಳಗಾವಿಯ ಭವಾನಿ ನಗರದ ಗಣಪತಿ ಮಂದಿರ ಬಳಿ ಮಾ.15 ರಂದು ರಿಯಲ್ ಎಸ್ಟೇಟ್ ಉದ್ಯಮಿ ರಾಜು ದೊಡ್ಡಬೊಮ್ಮನ್ನವರ್​ನ್ನು (46) ಬರ್ಬರವಾಗಿ ಕೊಲೆ ಮಾಡಲಾಗಿತ್ತು. ರಾಜು ಕಾರಿನಲ್ಲಿ ತೆರಳುತ್ತಿದ್ದ ವೇಳೆ ಅಡ್ಡಗಟ್ಟಿದ ಹಂತಕರು ಹತ್ಯೆ ಮಾಡಿ ಪರಾರಿಯಾಗಿದ್ದರು. ರಾಜು ದೊಡ್ಡಬೊಮ್ಮನ್ನವರ್ ಕಾಲುಗಳಿಗೆ ಮಾರಕಾಸ್ತ್ರಗಳಿಂದ ಕೊಚ್ಚಿ ಕಿರಾತಕರು ಕೊಲೆ ಮಾಡಿದ್ದರು. ಕೌಟುಂಬಿಕ ಕಲಹ, ಹಣಕಾಸಿನ ವ್ಯವಹಾರದಲ್ಲಿನ ವೈಮನಸ್ಸು ಹತ್ಯೆಗೆ ಕಾರಣ ಎಂಬುದು ‌ತಿಳಿದುಬಂದಿತ್ತು.

ಕೊಲೆಯಾಗಿದ್ದ ಉದ್ಯಮಿ ಒಟ್ಟು ಮೂರು ಮದುವೆಯಾಗಿದ್ದರು. ಮೊದಲನೇ ಮದುವೆ ವಿಚಾರ ಬಚ್ಚಿಟ್ಟು ಕಳೆದ ಎಂಟು ವರ್ಷಗಳ ಹಿಂದೆ ಮಹಾರಾಷ್ಟ್ರದ ಲಾತೂರ್ ಮೂಲದ ಕಿರಣಾ ಜೊತೆಗೆ ರಾಜು ವಿವಾಹವಾಗಿದ್ದರು. ರಾಜು ಹಾಗೂ ಕಿರಣಾಗೆ ಇಬ್ಬರು ಮಕ್ಕಳು ಸಹ ಇದ್ದರು. ಕಿರಣಾ ಜೊತೆ ವಿವಾಹ ಬಳಿಕ ರಾಜು ಮತ್ತೊಂದು ವಿವಾಹವಾಗಿದ್ದನು. ಇದು ರಾಜು ಹಾಗೂ ಕಿರಣಾ ಮಧ್ಯೆ ವೈಮನಸ್ಸಿಗೆ ಕಾರಣವಾಗಿತ್ತು.

ಈ ಮಧ್ಯೆ ವ್ಯವಹಾರದಲ್ಲಿ ಪಾರ್ಟ್ನರ್​ಗಳ ಜೊತೆ ರಾಜು ಕಿರಿಕ್ ಮಾಡಿಕೊಂಡಿದ್ದ. ಹೀಗಾಗಿ ಎರಡನೇ ಪತ್ನಿ, ಇಬ್ಬರು ಬ್ಯುಸಿನೆಸ್ ಪಾರ್ಟ್ನರ್‌ ಸೇರಿ ರಾಜು ಹತ್ಯೆಗೆ ಸ್ಕೆಚ್ ಹಾಕಿದ್ದರು. ಅದರಂತೆ ಮಾರ್ಚ್ 15ರ ಬೆಳಗ್ಗೆ 6 ಗಂಟೆ ಸುಮಾರಿಗೆ ರಾಜು ದೊಡ್ಡಬೊಮ್ಮನ್ನವರ್ ಹತ್ಯೆ ಮಾಡಿ ಸುಪಾರಿ ಹಂತಕರು ಪರಾರಿಯಾಗಿದ್ದರು. ಕೆಲ ಸಮಯದ ಬಳಿಕ ಘಟನಾ ಸ್ಥಳಕ್ಕೆ ಎರಡನೇ ಪತ್ನಿ ಕಿರಣಾ ಮತ್ತೋರ್ವ ಆರೋಪಿ ಧರ್ಮೇಂದ್ರ ಭೇಟಿ ನೀಡಿದ್ದರು. ತಮಗೇನು ಗೊತ್ತೇ ಇಲ್ಲ ಎಂಬ ರೀತಿಯಲ್ಲಿ ಸ್ಥಳಕ್ಕೆ ಬಂದು ಕಿರಣಾ, ಧರ್ಮೇಂದ್ರ ನಾಟಕವಾಡಿದ್ದರು.

ಆರೋಪಿಗಳ ಪತ್ತೆ ಹೇಗೆ?: ಪ್ರಕರಣ ದಾಖಲಿಸಿಕೊಂಡ ಬೆಳಗಾವಿ ಗ್ರಾಮೀಣ ಪೊಲೀಸರು ಮೊಬೈಲ್ ಕರೆ ವಿವರ ಪರಿಶೀಲಿಸಿದಾಗ ಬ್ಯುಸಿನೆಸ್ ಪಾರ್ಟ್ನರ್​ಗಳ ಮೇಲೆ ಅನುಮಾನ ಬಂದಿದೆ. ಆಗ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಸದ್ಯ ಸುಪಾರಿ ಹಂತಕರ ಪೈಕಿ ಮೂವರ ವಶಕ್ಕೆ ಪಡೆದ ಪೊಲೀಸರು ಇನ್ನು ಇಬ್ಬರು ಆರೋಪಿಗಳಿಗೆ ಶೋಧ ನಡೆಸಿದ್ದಾರೆ.

ಉದ್ಯಮಿ ರಾಜು ಹತ್ಯೆಗೆ ಎರಡನೇ ಹೆಂಡತಿ ಕಿರಣಾ, ಇಬ್ಬರು ಬ್ಯುಸಿನೆಸ್ ಪಾರ್ಟ್ನರ್‌ಗಳು 10 ಲಕ್ಷ ರೂ.ಗೆ ಸುಪಾರಿ ನೀಡಿದ್ದರು. ಜಯ ಕರ್ನಾಟಕ ಸಂಘಟನೆ ಬೆಳಗಾವಿ ಜಿಲ್ಲಾಧ್ಯಕ್ಷ ಸಂಜಯ್ ರಜಪೂತ್‌‌ ಸುಪಾರಿ ಪಡೆದಿದ್ದ. ಶಶಿಕಾಂತ ಎಂಬಾತ ಸಂಜಯ್ ರಜಪೂತ್ ಸಂಪರ್ಕಿಸಿ ಸುಪಾರಿ ನೀಡಿದ್ದನು.

10 ಲಕ್ಷ ಸುಪಾರಿ ಪಡೆದು ವಿಜಯ್ ಜಾಗೃತ್‌ ಎಂಬುವನಿಗೆ ಸಂಜಯ್ ರಜಪೂತ್ ಸುಪಾರಿ ನೀಡಿದ್ದ. ಮಾರ್ಚ್ 15ರಂದು ಬೆಳಗ್ಗೆ 5.30ರ ವೇಳೆ ಮನೆಯಿಂದ ಕಾರಿನಲ್ಲಿ ತೆರಳಿದ್ದ ರಾಜು ಕಾರು ಅಡ್ಡಗಟ್ಟಿ ಕಣ್ಣಿಗೆ ಖಾರದ ಪುಡಿ ಎರಚಿ ಅಟ್ಯಾಕ್ ಮಾಡಲಾಗಿತ್ತು. ಮಾರಕಾಸ್ತ್ರಗಳಿಂದ ಎರಡು ಕಾಲುಗಳ ಮೇಲೆ ಗ್ಯಾಂಗ್ ಹಲ್ಲೆ ಮಾಡಿತ್ತು. ತೀವ್ರ ರಕ್ತ ಸ್ರಾವವಾಗಿ ರಾಜು ಸ್ಥಳದಲ್ಲೇ ಮೃತಪಟ್ಟಿದ್ದನು.

ಹಿಂದಿನ ಲೇಖನನಟ ಡಾ. ಪುನೀತ್ ರಾಜ್‍ಕುಮಾರ್ ಅವರಿಗೆ ಮರಣೋತ್ತರ ಸಹಕಾರ ರತ್ನ ಪ್ರಶಸ್ತಿ
ಮುಂದಿನ ಲೇಖನಕಾಮನ್‌ವೆಲ್ತ್ ಗೇಮ್ಸ್‌ ತರಬೇತಿಗಾಗಿ ಟರ್ಕಿಗೆ  ಚಿನ್ನದ ಹುಡುಗ ‘ನೀರಜ್ ಛೋಪ್ರಾ’