ಮನೆ ಸಾಹಿತ್ಯ ಬಹುರೂಪಿ ರಾಷ್ಟ್ರೀಯ ರಂಗೋತ್ಸವ ಯಶಸ್ವಿ: ಅಡ್ಡಂಡ ಸಿ.ಕಾರ್ಯಪ್ಪ

ಬಹುರೂಪಿ ರಾಷ್ಟ್ರೀಯ ರಂಗೋತ್ಸವ ಯಶಸ್ವಿ: ಅಡ್ಡಂಡ ಸಿ.ಕಾರ್ಯಪ್ಪ

0

ಮೈಸೂರು(Mysuru): ಭಾರತೀಯತೆ ಪರಿಕಲ್ಪನೆಯಲ್ಲಿ ಆಯೋಜಿಸಲಾಗಿದ್ದ ಬಹುರೂಪಿ ರಾಷ್ಟ್ರೀಯ ರಂಗೋತ್ಸವ ಯಶಸ್ವಿಯಾಗಿದ್ದು, ದೇಶಪ್ರೇಮದ ಸಂದೇಶವನ್ನು ಯುವಮನಸ್ಸುಗಳಿಗೆ ದಾಟಿಸಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಹೇಳಿದರು.

ಶುಕ್ರವಾರ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಡಿ.8ರವರೆಗೂ ಮಳೆ ಬರುವ ಹವಾಮಾನ ಮುನ್ಸೂಚನೆ ಇಲ್ಲದ್ದರಿಂದ ಕರಕುಶಲ, ಪುಸ್ತಕ ಹಾಗೂ ಆಹಾರ ಮೇಳಕ್ಕೆ ತೊಂದರೆಯಾಯಿತು. ಮಳಿಗೆದಾರರಿಗೆ ಟಾರ್ಪಲ್‌ ಅನ್ನು ಮಾರನೆಯ ದಿನವೇ ಒದಗಿಸಲಾಗಿತ್ತು. ಮಳೆ ನಡುವೆಯೂ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಕಲಾವಿದರು ಹಾಗೂ ಸಿಬ್ಬಂದಿ ನಿರಂತರ ದುಡಿದಿದ್ದರು ಎಂದು ತಿಳಿಸಿದರು.

ಭಾರತದ ಭೂಪಟದೊಳಗಿಂದ ವಿವಿಧ ರಾಜ್ಯಗಳ ವೇಷಭೂಷಣ ಧರಿಸಿ ಬಂದ ಮಕ್ಕಳಿಂದ ಹೂ ಸ್ವೀಕರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ಸವಕ್ಕೆ ಚಾಲನೆ ನೀಡಿದ್ದರು. ಭಾರತೀಯತೆ ಪರಿಕಲ್ಪನೆಯಲ್ಲಿ ಹಮ್ಮಿಕೊಂಡಿದ್ದ ಜಾನಪದೋತ್ಸವ, ನಾಟಕೋತ್ಸವ, ಚಲನಚಿತ್ರೋತ್ಸವ, ರಸಗಳಿಗೆ ಸೇರಿದಂತೆ ಎಲ್ಲ ಕಾರ್ಯಕ್ರಮಗಳಿಗೆ ನಾಲ್ಕು ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಬಂದಿದ್ದಾರೆ ಎಂದು ಮಾಹಿತಿ ನೀಡಿದರು.

ಧಾರವಾಡ, ಬೀದರ್‌’ನಿಂದ ರಂಗಾಸಕ್ತರು ಬಂದಿದ್ದರು. ವಿಚಾರ ಸಂಕಿರಣದಲ್ಲೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಭಾಷಣ ಸ್ಪರ್ಧೆಯಲ್ಲಿ 120 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಗಾರುಡಿ ಗೊಂಬೆಗಳ ಜೊತೆಯಲ್ಲಿ ‘ಮನೆಮನೆಗೆ ರಂಗಾಯಣ’ ಪ್ರಚಾರವು ನಡೆದಿತ್ತು. ಎಲ್ಲ ವೇದಿಕೆಗಳು ಬಹುತೇಕ ಭರ್ತಿಯಾಗಿದ್ದವು ಎಂದರು.

ಚಲನಚಿತ್ರೋತ್ಸವದಲ್ಲಿ 22 ಸಾಕ್ಷ್ಯಚಿತ್ರಗಳು ಪ್ರದರ್ಶನಗೊಂಡವು. ಚಿತ್ರಗಳ ಆಯ್ಕೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಂಚಾಲಕರಾದ ಪರಿಸರ ತಜ್ಞ ಕೆ.ಮನು ಅವರು ಉತ್ಸವಕ್ಕಾಗಿ 600ಕ್ಕೂ ಹೆಚ್ಚು ಚಿತ್ರಗಳನ್ನು ನೋಡಿ ಆಯ್ಕೆ ಮಾಡಿದ್ದರು ಎಂದು ಶ್ಲಾಘಿಸಿದರು.

ನಿರಂತರ ಪ್ರಯತ್ನದಿಂದಾಗಿ ರಾಜ್ಯ ಉತ್ಸವಗಳ ಪಟ್ಟಿಯಲ್ಲಿ ಬಹುರೂಪಿಗೆ ಸ್ಥಾನ ದೊರೆತಿದೆ. ಪ್ರತ್ಯೇಕ ಅನುದಾನ ಬಿಡುಗಡೆಯಾಗುತ್ತಿದೆ ಎಂದರು.

ಟಿಕೆಟ್‌’ನಿಂದ 3.5 ಲಕ್ಷ ಸಂಗ್ರಹ: ಟಿಕೆಟ್‌ ಮಾರಾಟದಿಂದ  3.5 ಲಕ್ಷ ದೊರೆತಿದೆ. ಭೂಮಿಗೀತ ಹಾಗೂ ಸಂಪತ್ ರಂಗಮಂದಿರದಲ್ಲಿ ನಡೆದ ಬಹುತೇಕ ಎಲ್ಲ ನಾಟಕಗಳ ಟಿಕೆಟ್ ಖಾಲಿಯಾಗಿದ್ದವು. ಕಲಾಮಂದಿರದಲ್ಲೂ ಮಾಯಾಬಜಾರ್, ವಿದ್ಯಾಸುಂದರಿ ಬೆಂಗಳೂರು ನಾಗರತ್ನಮ್ಮ ನಾಟಕಗಳನ್ನು ಎರಡೂ ದಿನ 500 ಮಂದಿ ನೋಡಿದ್ದಾರೆ ಎಂದು ಕಾರ್ಯಪ್ಪ ತಿಳಿಸಿದರು.

7 ರಾಜ್ಯಗಳ 7 ವಿವಿಧ ಭಾಷೆಗಳ ನಾಟಕ, 12 ಕನ್ನಡ ಹಾಗೂ ಒಂದು ತುಳು ಭಾಷೆಯದ್ದು ಸೇರಿದಂತೆ ಒಟ್ಟು 20 ನಾಟಕಗಳು ಪ್ರದರ್ಶನಗೊಂಡಿವೆ. ಕಳೆದ ಬಾರಿ 36 ನಾಟಕಗಳು ಇದ್ದವು. ಆಗ  7 ಲಕ್ಷ ಸಂಗ್ರಹಗೊಂಡಿತ್ತು ಎಂದರು.

ಬಹುರೂಪಿಗೆ 40 ಲಕ್ಷ ಖರ್ಚು: ರಾಜ್ಯ ಸರ್ಕಾರ ಬಹುರೂಪಿಗೆ  25 ಲಕ್ಷ ಅನುದಾನ ನೀಡಿತ್ತು.  40 ಲಕ್ಷ ಖರ್ಚಾಗಿದ್ದು, ರಂಗಾಯಣದ ಬೇರೆ ಹಣವನ್ನು ಬಳಸಿಕೊಳ್ಳಲಾಗಿದೆ ಎಂದು ನಿರ್ಮಲಾ ಮಠಪತಿ ತಿಳಿಸಿದರು.

ಮೈಸೂರು ರಂಗಾಯಣದ ವಿದ್ಯುತ್‌ ಬಿಲ್‌  6 ಲಕ್ಷವಿದೆ. ಹೀಗಾಗಿ ಪ್ರತಿ ರಂಗಾಯಣಕ್ಕೆ ಸರ್ಕಾರ  1 ಕೋಟಿ ಅನುದಾನ ನೀಡಬೇಕು. ಪ್ರತ್ಯೇಕ ಸಚಿವರು ಇರದಿದ್ದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೊರಗಲಿದೆ. ಹತ್ತಾರು ಅಕಾಡೆಮಿ, ಪ್ರಾಧಿಕಾರಗಳು ಇಲಾಖೆ ಬಳಿ ಇದೆ ಎಂದು ಕಾರ್ಯಪ್ಪ ಹೇಳಿದರು.

ಅರವಿಂದ ನಗರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೇರಿದ 2 ಎಕರೆ ಜಾಗವಿದ್ದು, ರಂಗಾಯಣಕ್ಕೆ ನೀಡುವಂತೆ ಬಹುರೂಪಿ ಉದ್ಘಾಟನೆ ವೇಳೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಬೆಳಗಾವಿ ಅಧಿವೇಶನದಲ್ಲೂ ಸ್ಥಳೀಯ ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ ಜೊತೆ ಮತ್ತೊಮ್ಮೆ ಮನವಿ ಮಾಡುವೆ ಎಂದರು.