ಮಂಡ್ಯ: ಕೇಸರಿ ಶಾಲು ಮತ್ತು ಹಿಜಾಬ್ ವಿವಾದ ಮಂಡ್ಯದಲ್ಲಿಯೂ ತೀವ್ರ ಸ್ವರೂಪ ಪಡೆಯುತ್ತಲಿದ್ದು, ಪಿಇಎಸ್ ಕಾಲೇಜಿನ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಹಿಜಾಬ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಮುಸ್ಲಿಂ ವಿದ್ಯಾರ್ಥಿ ನೂರಾರು ಯುವಕರ ಎದುರೇ ಧೈರ್ಯವಾಗಿಯೇ ಹೋರಾಟ ನಡೆಸಿದ್ದಾರೆ.
ವಿದ್ಯಾರ್ಥಿಗಳು ಕಾಲೇಜಿನ ಮುಂದೆ ಕೇಸರಿ ಶಾಲು ಹಾಕಿಕೊಂಡು ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಹಿಜಾಬ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಇದೇ ವೇಳೆ ಕಾಲೇಜ್ಗೆ ಆಗಮಿಸಿದ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದರು.

ಇದರಿಂದ ಕೆರಳಿದ ವಿದ್ಯಾರ್ಥಿಗಳು ಆಕೆಯತ್ತ ನುಗ್ಗಿ ಬಂದರು. ತಕ್ಷಣವೇ ಎಚ್ಚೆತ್ತುಕೊಂಡ ಕಾಲೇಜು ಸಿಬ್ಬಂದಿ ವಿದ್ಯಾರ್ಥಿಗಳ ಗುಂಪನ್ನು ತಡೆದರು. ಪೊಲೀಸರು ಸ್ಥಳಕ್ಕಾಗಮಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿದರು.
ಈ ಸಂದರ್ಭ ವಿದ್ಯಾರ್ಥಿಗಳು ಶಾಲಾ ಮಂಡಳಿ ಸಿಬ್ಬಂದಿ ಜೊತೆ ವಾಗ್ವಾದಕ್ಕಿಳಿದರು. ಕೇಸರಿ ಶಾಲು ಹಾಕಿಕೊಂಡ ಬಂದಿದ್ದೇವೆ ನಮಗೆ ಒಳಗೆ ಹೋಗಲು ಅವಕಾಶ ಕೊಡುತ್ತಿಲ್ಲ. ಆದರೆ, ಬುರ್ಕಾ ಹಾಕಿಕೊಂಡು ಬಂದವರಿಗೆ ಅವಕಾಶ ಕೊಟ್ಟಿದ್ದೀರಿ. ಅವರನ್ನು ಕಾಲೇಜ್ನಿಂದ ಹೊರಗೆ ಕಳುಹಿಸಿ ಅಂತ ಎಂದು ನಾವು ಹೇಳುತ್ತಿಲ್ಲ. ಅವರ ಹಿಜಾಬ್, ಬುರ್ಕಾ ತೆಗೆಸಿ. ನಾವು ಕೇಸರಿ ಶಾಲನ್ನು ತೆಗೆದು ಬರುತ್ತೇವೆ ಎಂದು ವಿದ್ಯಾರ್ಥಿಗಳು ಕಾಲೇಜಿನ ಮುಖ್ಯ ಶಿಕ್ಷಕರ ಜೊತೆ ವಾಗ್ವಾದ ನಡೆಸಿದರು.